ಲೆಗೆ-ಕ್ಯಾಪ್-ಫೆರ್ರೆಟ್: ಫ್ರಾನ್ಸ್ ಹಾಗೂ ಸ್ಪೇನ್ನಲ್ಲಿ ಕಾಳ್ಗಿಚ್ಚು ವ್ಯಾಪಕವಾಗಿದ್ದು, ಈವರೆಗೆ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಫ್ರಾನ್ಸ್ನ ಪ್ರಸಿದ್ಧ ವೈನ್ ತಯಾರಿಕಾ ಕೇಂದ್ರವಾದ ಬೋರ್ಡೋ ನಗರದ ಹೊರವಲಯದಲ್ಲಿ ಕಾಳ್ಗಿಚ್ಚು ವ್ಯಾಪಕವಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ.
ಅಗ್ನಿಯ ಜ್ವಾಲೆ ದ್ರಾಕ್ಷಿತೋಟಗಳ ಹೃದಯಭಾಗಕ್ಕೆ ಹರಡುತ್ತಿದ್ದು, ಬೆಂಕಿ ನಂದಿಸಲು ಫ್ರಾನ್ಸ್ ಮತ್ತು ಸ್ಪೇನ್ ದೇಶಗಳ ಅಗ್ನಿಶಾಮಕ ಸಿಬ್ಬಂದಿ ಹಗಲಿರುಳು ಹೆಣಗಾಡುತ್ತಿದ್ದಾರೆ.
ಬೋರ್ಡೋ ನಗರದ ಸುತ್ತಮುತ್ತಲಿನ ಸುಮಾರು 2.20 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಬೆಂಕಿಯ ಜ್ವಾಲೆಯು ಬೋರ್ಡೋ ನಗರದ ಪ್ರವೇಶ ದ್ವಾರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದು ಫ್ರಾನ್ಸ್ನ ಸಚಿವ ಲಾರೆಂಟ್ ನೂನೆಜ್ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತ ಸ್ಪೇನ್ನಲ್ಲೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, 75,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸ್ಪೇನ್ನ ಆವಿಲಾ ಪ್ರಾಂತ್ಯವೊಂದರಲ್ಲೇ ಬರೋಬ್ಬರಿ 50,000 ಹೆಕ್ಟೇರ್ಗೂ ಹೆಚ್ಚು ಅರಣ್ಯ ಭೂಮಿ ಬೆಂಕಿಗೆ ಆಹುತಿಯಾಗಿದೆ. ಇದು ಸ್ಪೇನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾಳ್ಗಿಚ್ಚು ಎಂದು ವರದಿಯಾಗಿದೆ.
ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಸ್ಪೇನ್ನಲ್ಲಿ ಒಟ್ಟು 1.5 ಲಕ್ಷ ಹೆಕ್ಟೇರ್ಗೂ ಹೆಚ್ಚು ಅರಣ್ಯ ನಾಶವಾಗಿದ್ದು, ಇದು ಕಳೆದ ವರ್ಷಕ್ಕಿಂತ ಆರು ಪಟ್ಟು ಹೆಚ್ಚಾಗಿದೆ.
ಅಂತರರಾಷ್ಟ್ರೀಯ ನೆರವು
ಯುರೋಪಿಯನ್ ಯೂನಿಯನ್ ಜಾಗತಿಕ ತುರ್ತು ಸಹಾಯದಡಿ ಬೆಂಕಿ ನಂದಿಸಲು ನೆರವಾಗಿದೆ. ಗ್ರೀಸ್ ಮತ್ತು ಇಟಲಿ ಅಗ್ನಿಶಾಮಕ ವಿಮಾನಗಳನ್ನು ಕಳುಹಿಸಿವೆ. ಪೋರ್ಚುಗಲ್ 100ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ನಿಯೋಜಿಸಿದೆ. ಟರ್ಕಿಯಿಂದಲೂ ಹೆಚ್ಚುವರಿ ವಿಮಾನಗಳು ಆಗಮಿಸುತ್ತಿವೆ.
ಪ್ರತಿಕೂಲ ಹವಾಮಾನ ಮತ್ತು ಗಾಳಿ ವೇಗವಾಗಿ ಬೀಸುತ್ತಿರುವುದರಿಂದ ಬೆಂಕಿಯನ್ನು ನಂದಿಸಲು ಕಷ್ಟವಾಗುತ್ತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ವಿಪತ್ತು ನಿರ್ವಹಣಾ ಪಡೆಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

