ವಾಷಿಂಗ್ಟನ್: ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆಯುತ್ತಿದ್ದ ಪ್ರಸಿದ್ಧ 'ಬೈಟ್ ಆಫ್ ಸಿಯಾಟಲ್' ಆಹಾರ ಮೇಳದಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಪ್ರಸಿದ್ಧ 'ಸ್ಪೇಸ್ ನೀಡಲ್' ಸಮೀಪದಲ್ಲೇ ನಡೆದ ಈ ಘಟನೆಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.
ಸಂಜೆ ಸುಮಾರು 6ರ ವೇಳೆಗೆ ದಾಳಿ ನಡೆದಿದೆ. ಸಾವಿರಾರು ಜನ ಹಾಗೂ ನೂರಾರು ಮಳಿಗೆಗಳಿಂದ ಕಿಕ್ಕಿರಿದು ತುಂಬಿದ್ದ ಮೇಳದಲ್ಲಿ ದಿಢೀರನೆ 7 ರಿಂದ 8 ಬಾರಿಗೆ ಗುಂಡಿನ ಸದ್ದು ಕೇಳಿಸಿತು. ತಕ್ಷಣವೇ ಅಲ್ಲಿದ್ದ ಜನ ಪ್ರಾಣಭಯದಿಂದ ಎಲ್ಲೆಂದರಲ್ಲಿ ಓಡಲು ಶುರುಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ದಾಳಿಯ ನಂತರ ಮೇಳದ ಜಾಗದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಹಾಗೂ ಹಳದಿ ಬಟ್ಟೆಯಿಂದ ಮುಚ್ಚಲಾಗಿದ್ದ ಮೃತದೇಹ ಕಂಡು ಜನ ಆತಂಕಕ್ಕೊಳಗಾದರು. ಗಾಯಾಳುಗಳನ್ನು ತಕ್ಷಣವೇ ಹಾರ್ಬರ್‌ವ್ಯೂ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದೆ ಎಂದು 'ಸಿಯಾಟಲ್ ಟೈಮ್ಸ್' ವರದಿ ಮಾಡಿದೆ.
'ಸಿಯಾಟಲ್ ಸೆಂಟರ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ, ಸಾರ್ವಜನಿಕರು ಈ ಪ್ರದೇಶದಿಂದ ದೂರವಿರಿ' ಎಂದು ಸಿಯಾಟಲ್ ಪೊಲೀಸರು ಎಕ್ಸ್‌ನಲ್ಲಿ ಮನವಿ ಮಾಡಿದ್ದಾರೆ. ಆದರೆ ದಾಳಿಕೋರರನ್ನು ಬಂಧಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
1982ರಿಂದ ಪ್ರತಿವರ್ಷ ನಡೆಯುವ ಈ ಪ್ರಸಿದ್ಧ ಆಹಾರ ಮೇಳಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ಆದರೆ, ಸಂಭ್ರಮದಿಂದ ನಡೆಯುತ್ತಿದ್ದ ಈ ಮೇಳ ಕ್ಷಣಮಾತ್ರದಲ್ಲಿ ಶೋಕಸಾಗರವಾಗಿ ಮಾರ್ಪಟ್ಟಿದೆ.

