ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ ಸಂಸದ್ ಚಲೋ ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ದಿಲ್ಲಿ ಪೊಲೀಸರು ಈ ಸಂಬಂಧ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅವುಗಳಲ್ಲಿ ಒಂದು ಪ್ರಕರಣವು ಗರಿಷ್ಠ ಸುರಕ್ಷತಾ ವಲಯವಾಗಿರುವ ಹೊಸದಿಲ್ಲಿಯಲ್ಲಿ ಅನಧಿಕೃತವಾಗಿ ಡ್ರೋನ್ ಹಾರಿಸಿರುವುದಕ್ಕೆ ಸಂಬಂಧಿಸಿದ್ದಾಗಿದೆ.
ಸಂಸತ್ ಅಧಿವೇಶನ ನಡೆಯುತ್ತಿರುವಾಗ ವೈಮಾನಿಕ ಚಟುವಟಿಕೆಗಳನ್ನು ಹೊಸದಿಲ್ಲಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನೊಂದು ಪ್ರಕರಣವು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪಿತೂರಿಗೆ ಸಂಬಂಧಿಸಿದೆ.
ತನಿಖೆಯ ವೇಳೆ ''ಸಾಕಷ್ಟು ಪುರಾವೆ''ಗಳನ್ನು ಸಂಗ್ರಹಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ.
ಇತರ ಎರಡು ಪ್ರಕರಣಗಳು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ, ಪೊಲೀಸರಿಗೆ ಹಲ್ಲೆ ನಡೆಸಿರುವ ಮತ್ತು ಸರಕಾರಿ ಸೊತ್ತುಗಳಿಗೆ ಹಾನಿಗೈದಿರುವ ಆರೋಪಗಳಿಗೆ ಸಂಬಂಧಿಸಿದ್ದಾಗಿವೆ.
ಇನ್ನೂ ಎರಡು ಪ್ರಕರಣಗಳನ್ನು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ದಾಖಲಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಗಳನ್ನು ಕನ್ನಾಟ್ಪ್ಲೇಸ್, ಸಂಸದ್ ರಸ್ತೆ ಮತ್ತು ಕರ್ತವ್ಯ ಪಥ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ.
ಪ್ರತಿಭಟನಾಕಾರರು ಕಾನೂನುಬಾಹಿರವಾಗಿ ಗುಂಪು ಸೇರಿದ್ದಾರೆ, ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ, ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ, ಹಿಂಸಾಚಾರದಲ್ಲಿ ತೊಡಗಿದ್ದಾರೆ ಮತ್ತು ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂಬುದಾಗಿ ಪೊಲೀಸರು ಆರೋಪಿಸಿದ್ದಾರೆ.

