ನವದೆಹಲಿ: 'ದೇಶದಾದ್ಯಂತ ಯುಜಿಸಿ- ನೆಟ್ ಪರೀಕ್ಷೆ ಬರೆಯುವವರ ಪೈಕಿ ಶೇ 6ರಷ್ಟು ಅಭ್ಯರ್ಥಿಗಳು ಮಾತ್ರ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುತ್ತಾರೆ. ಇವರಲ್ಲಿ 11,750 ಜನರಿಗೆ ಪ್ರತಿವರ್ಷ ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್ಎಫ್) ನೀಡಲಾಗುತ್ತಿದೆ' ಎಂದು ಶಿಕ್ಷಣ ಸಚಿವಾಲಯವು ಲೋಕಸಭೆಗೆ ಮಾಹಿತಿ ನೀಡಿದೆ.
'ಅರ್ಹತೆ ಪಡೆದವರು ಪಿಎಚ್.ಡಿ ಪದವಿ ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಬೇರೆಬೇರೆ ಸಚಿವಾಲಯಗಳು ಮತ್ತು ಸಂಸ್ಥೆಗಳು ಕೂಡ ಫೆಲೋಶಿಪ್ ನೀಡುತ್ತಿವೆ. ಪರಿಶಿಷ್ಟ ಜಾತಿ/ ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಂಗವಿಕಲರು ಮತ್ತು ಒಬ್ಬಳೇ ಹೆಣ್ಣುಮಗು ಇರುವ ವರ್ಗದವರಿಗೆ ವಿಶೇಷ ಫೆಲೋಶಿಪ್ ನೀಡಲಾಗುತ್ತಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಲಿಖಿತ ಪ್ರಶ್ನೆಗೆ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಮ್ದಾರ್ ಉತ್ತರಿಸಿದ್ದಾರೆ.
'ಜೆಆರ್ಎಫ್ ಸಂಖ್ಯೆಯನ್ನು ಹೆಚ್ಚಿಸಲು ಅಥವಾ ಅರ್ಹತೆ ಮಾನದಂಡವನ್ನು ಪರಿಷ್ಕರಿಸುವ ಯೋಜನೆ ಇದೆಯೇ? 2006ರಿಂದಲೂ ಫೆಲೋಶಿಪ್ಗೆ ನೀಡುತ್ತಿದ್ದ ಮೊತ್ತವು ₹8ಸಾವಿರವೇ ಇದೆ, ಇದು ಸಚಿವಾಲಯದ ಗಮನಕ್ಕೆ ಇದೆಯೇ ಎಂದು ನಾನು ಕೇಳಿದ್ದೆ. ಆದರೆ ಸಚಿವಾಲಯವು ಸಮರ್ಪಕವಾಗಿ ಉತ್ತರ ನೀಡಿಲ್ಲ. ಇದು ನಿರಾಶಾದಾಯಕ' ಎಂದು ತರೂರ್ ಅವರು ಮಂಗಳವಾರ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.
'ನಾನು 2023ರಲ್ಲೇ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ, ಜೆಆರ್ಎಫ್ ಪರಿಷ್ಕರಣೆಗೆ ಸಂಬಂಧಿಸಿ ಸರ್ಕಾರವು ಯಾವುದೇ ಬದ್ಧತೆಯನ್ನಾಗಲಿ ಕಾಲಮಿತಿಯನ್ನಾಗಲಿ ನೀಡುತ್ತಿಲ್ಲ' ಎಂದು ಅವರು ಹೇಳಿದ್ದಾರೆ.

