HEALTH TIPS

'56 ವರ್ಷದ ಯುವಕ' ಎಂದು ರಾಹುಲ್‌ರನ್ನು ಕುಟುಕಿದ ಪ್ರಧಾನಿ ಮೋದಿ; ಸ್ಕೈರೂಟ್ ಸಾಧನೆಗೆ ಮೆಚ್ಚುಗೆ

ನವದೆಹಲಿ:ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಮೊದಲ ಖಾಸಗಿ ಕಕ್ಷಾ ರಾಕೆಟ್ ವಿಕ್ರಮ್-1 ಯಶಸ್ವಿ ಉಡಾವಣೆಯನ್ನು ಶ್ಲಾಘಿಸುವ ವೇಳೆ, "ನಾನು 56 ವರ್ಷದ 'ಯುವಕ'ನ ಬಗ್ಗೆ ಮಾತನಾಡುತ್ತಿಲ್ಲ" ಎಂದು ಹೇಳುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕುಟುಕಿದರು. 


ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಂಪ್ರದಾಯಿಕ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಅವರು, ವಾರಾಂತ್ಯದಲ್ಲಿ ಕಕ್ಷೆ ತಲುಪಿದ ಭಾರತದ ಮೊದಲ ಖಾಸಗಿ ಕಕ್ಷಾ ರಾಕೆಟ್ ವಿಕ್ರಮ್-1 ಮೂಲಕ ಇತಿಹಾಸ ನಿರ್ಮಿಸಿದ ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ ಸಾಧನೆಯನ್ನು ಶ್ಲಾಘಿಸಿದರು. ಸಂಸ್ಥೆಯ ತಂಡದ ಸದಸ್ಯರ ಸರಾಸರಿ ವಯಸ್ಸು ಕೇವಲ 28 ವರ್ಷಗಳಾಗಿದೆ ಎಂದು ಹೇಳಿದರು.

"ಭಾರತದ ಯುವಕರು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಹಾರಾಟ ಆರಂಭಿಸಿದ್ದಾರೆ. ಇದು ಅದ್ಭುತ ಯಶಸ್ಸು. ಸ್ಕೈರೂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಡೀ ತಂಡದ ಸರಾಸರಿ ವಯಸ್ಸು 28 ವರ್ಷಗಳು. ನಾನು 56 ವರ್ಷದ 'ಯುವಕ'ನ ಬಗ್ಗೆ ಮಾತನಾಡುತ್ತಿಲ್ಲ. ಸರಾಸರಿ 28 ವರ್ಷ ವಯಸ್ಸಿನ ಈ ಯುವಕರಿಗೆ ಅಭಿನಂದನೆಗಳು. ಅವರು ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ನೆಟ್ಟಿದ್ದಾರೆ. ಇಂತಹ ಸಾಧನೆಗಳು ದೇಶವನ್ನು ಆತ್ಮವಿಶ್ವಾಸದಿಂದ ತುಂಬಿಸುತ್ತವೆ" ಎಂದು ಪ್ರಧಾನಿ ಹೇಳಿದರು.

ವಿಕ್ರಮ್-1 ರಾಕೆಟ್ ತನ್ನ ಅಂತಿಮ ದಹನ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಸುಮಾರು 450 ಕಿಮೀ ಎತ್ತರದ ಕಕ್ಷೆಗೆ ಪೇಲೋಡ್‌ಗಳನ್ನು ಸೇರಿಸಿದೆ. ಇದರೊಂದಿಗೆ ಖಾಸಗಿ ಕಕ್ಷಾ ಉಡಾವಣಾ ಸಾಮರ್ಥ್ಯ ಹೊಂದಿರುವ ವಿಶ್ವದ ಮೂರನೇ ದೇಶವಾಗಿ ಭಾರತ ಹೊರಹೊಮ್ಮಿದೆ.

2014ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ವೇಳೆ ನರೇಂದ್ರ ಮೋದಿ ಅವರು "56 ಇಂಚಿನ ಎದೆ" ಎಂಬ ಪದಪ್ರಯೋಗವನ್ನು ಬಳಸಿದ್ದರು. ಧೈರ್ಯ ಮತ್ತು ದೃಢ ನಾಯಕತ್ವದ ಪ್ರತೀಕವಾಗಿ ಬಳಸಿದ್ದ ಈ ಹೇಳಿಕೆಯನ್ನು ಕಾಂಗ್ರೆಸ್ ಹಲವು ಬಾರಿ ಟೀಕೆಗೆ ಬಳಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಲು ಅವಕಾಶ ನೀಡದ ವಿಚಾರವನ್ನು ಪ್ರಸ್ತಾಪಿಸಿ, "ಚೀನಾ ನಮ್ಮ ವಿರುದ್ಧ ನಿಂತಾಗ 56 ಇಂಚಿನ ಎದೆಗೆ ಏನಾಯಿತು?" ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದರು.

ಕಳೆದ ವರ್ಷದ ಮಾನ್ಸೂನ್ ಅಧಿವೇಶನಕ್ಕೂ ಮುನ್ನ ಭಾರತೀಯ ಗಗನಯಾತ್ರಿಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಈ ಬಾರಿ ಮಿಷನ್ ಆಗಮನ್ ಅಡಿಯಲ್ಲಿ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ವಿಕ್ರಮ್-1 ಯಶಸ್ವಿಯಾಗಿ ಉಡಾವಣೆಯಾಗಿರುವುದು ಮತ್ತೊಂದು ಐತಿಹಾಸಿಕ ಸಾಧನೆ ಎಂದು ಹೇಳಿದರು.

ಭಾರತದ ಜಾಗತಿಕ ಪ್ರೊಫೈಲ್‌ಗೆ "ಸಾರ್ವತ್ರಿಕ ಮನ್ನಣೆ ಮತ್ತು ಸ್ವೀಕಾರ" ದೊರೆಯುತ್ತಿದೆ ಎಂದು ಹೇಳಿದ ಅವರು, "ಇದು ಕಾಕತಾಳೀಯವಲ್ಲ. ಇದು ಅತ್ಯಂತ ಪ್ರಬಲ ಸಂದೇಶ. ನಮ್ಮ ದೇಶದ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ. ದೇಶಕ್ಕೆ ಇದಕ್ಕಿಂತ ಹೆಚ್ಚಿನ ಸ್ಪೂರ್ತಿದಾಯಕ ಸಂದೇಶ ಮತ್ತೊಂದಿಲ್ಲ" ಎಂದರು.

ಮಾನ್ಸೂನ್ ಮತ್ತು ಸಂಸತ್ತಿನ ಮಾನ್ಸೂನ್ ಅಧಿವೇಶನ ಎರಡೂ, ದೇಶಕ್ಕೆ ಅನುಕೂಲಕರವಾಗಿರಲಿ ಎಂದು ಆಶಿಸಿದ ಅವರು, "ಮಳೆಗಾಲದ ಪ್ರಯೋಜನಗಳು ಈಗಾಗಲೇ ಗೋಚರಿಸುತ್ತಿವೆ. ಮಾನ್ಸೂನ್ ಅಧಿವೇಶನವೂ ಆರಂಭವಾಗುತ್ತಿದೆ. ಎರಡೂ ಉತ್ಪಾದಕವಾಗಿದ್ದರೆ ರಾಷ್ಟ್ರದ ಹಾಗೂ ಸಮಸ್ತ ಜೀವಿಗಳ ಕಲ್ಯಾಣಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮಾನ್ಸೂನ್ ಮತ್ತು ಮಾನ್ಸೂನ್ ಅಧಿವೇಶನ ಎರಡೂ ಫಲಪ್ರದವಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದರು.

ಸಂಸದರು ಚರ್ಚೆಗಳಲ್ಲಿ ಸತ್ಯ ಮತ್ತು ತರ್ಕಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ ಅವರು, "ಸತ್ಯಗಳು ಇರುವಲ್ಲಿ ಗದ್ದಲದ ಅಗತ್ಯವಿಲ್ಲ. ನಿಮ್ಮ ತರ್ಕ ಮತ್ತು ಸತ್ಯಗಳು ಬಲವಾಗಿದ್ದರೆ ಧ್ವನಿ ಎತ್ತುವ ಅಗತ್ಯವಿಲ್ಲ. ಸಂಸತ್ತಿನಲ್ಲಿ ಚರ್ಚೆಗಳು ತರ್ಕ ಮತ್ತು ಸತ್ಯದ ಆಧಾರದಲ್ಲಿ ನಡೆಯಬೇಕು. ಪ್ರತಿಯೊಬ್ಬ ಸಂಸದನ ಧ್ವನಿಗೂ ಅವಕಾಶ ದೊರೆಯಬೇಕು. ಅದೇ ಸಂಸತ್ತಿನ ಪಾತ್ರ. ಎಲ್ಲ ಸಂಸದರೂ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು" ಎಂದು ಮನವಿ ಮಾಡಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries