ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದ್ದು, ಪರಿಸ್ಥಿತಿ ಸುಧಾರಿಸುವವರೆಗೆ ಇರಾನ್ ಪ್ರಯಾಣವನ್ನು ಮುಂದೂಡುವಂತೆ ತನ್ನ ಪ್ರಜೆಗಳಿಗೆ ಭಾರತ ಸೂಚಿಸಿದೆ. ಅಲ್ಲದೇ, ಈಗಾಗಲೇ ಇರಾನ್‌ನಲ್ಲಿ ಇರುವವರು ಲಭ್ಯವಿರುವ ವಿಮಾನದ ಮೂಲಕ ಕೂಡಲೇ ಹಿಂದಿರುಗುವಂತೆ ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇರಾನ್‌ನಲ್ಲಿ ಅಸ್ಥಿರತೆ ಮತ್ತು ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಭಾರತೀಯ ಪ್ರಜೆಗಳು ಹೆಚ್ಚು ಜಾಗೃತವಾಗಿರಬೇಕು ಎಂದು ಟೆಹರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಪರಿಷ್ಕೃತ ಪ್ರಯಾಣ ಸಲಹೆಯಲ್ಲಿ ತಿಳಿಸಿದೆ.
'ಯಾವುದೇ ಉದ್ದೇಶಕ್ಕಾಗಿ ಭಾರತೀಯ ಪ್ರಜೆಗಳು ಇರಾನ್‌ಗೆ ಪ್ರಯಾಣಿಸುವ ಯೋಜನೆ ಮಾಡಿಕೊಂಡಿದ್ದರೆ, ಭದ್ರತಾ ವಾತಾವರಣ ಸುಧಾರಿಸುವವರೆಗೂ ಸದ್ಯಕ್ಕೆ ಅದನ್ನು ಮುಂದೂಡಬೇಕು' ಎಂದು ಅದು ತಿಳಿಸಿದೆ.
ಅಲ್ಲದೇ, ಇರಾನ್‌ನಲ್ಲಿರುವ ಭಾರತೀಯರು ಕೂಡಲೇ ಲಭ್ಯವಿರುವ ವಿಮಾನದ ಮೂಲಕ ವಾಪಸ್ ಆಗುವಂತೆ ಸೂಚಿಸಲಾಗಿದೆ. ಇರಾನ್‌ನಲ್ಲೇ ಉಳಿಯಲು ಬಯಸುವವರು ಸಾಧ್ಯವಾದಷ್ಟೂ ಹೆಚ್ಚು ಜಾಗೃತರಾಗಿರಿ. ಸುದ್ದಿಗಳ ಬಗ್ಗೆ ಗಮನವಿಡುವ ಮೂಲಕ ಸದ್ಯದ ಸ್ಥಿತಿಯ ಕುರಿತಂತೆ ಕಾಲಕಾಲಕ್ಕೆ ಮಾಹಿತಿ ಪಡೆಯುತ್ತಿರಿ. ದೇಶದ ದಕ್ಷಿಣದ ಕರಾವಳಿ ಸೇರಿದಂತೆ ಮಿಲಿಟರಿ ಚಟುವಟಿಕೆ ಇರುವೆಡೆ ಹೋಗುವುದನ್ನು ತಪ್ಪಿಸಿ ಎಂದೂ ಸೂಚಿಸಲಾಗಿದೆ.
ಅಲ್ಲದೇ, ಸ್ಥಳೀಯ ಅಧಿಕಾರಿಗಳು ನೀಡುವ ನಿರ್ದೆಶನಗಳನ್ನು ಪಾಲಿಸುವಂತೆಯೂ ತಿಳಿಸಲಾಗಿದೆ.
ಇರಾನ್‌ನಲ್ಲಿರುವ ಭಾರತೀಯರು, ರಾಯಭಾರ ಕಚೇರಿಯಲ್ಲಿ ಇನ್ನೂ ನೋಂದಣಿ ಮಾಡಿಕೊಳ್ಳದಿದ್ದರೆ ತಕ್ಷಣವೇ ನೋಂದಣಿ ಮಾಡುವಂತೆಯೂ ಸೂಚಿಸಲಾಗಿದೆ. ಮುಂದಿನ ಮಾಹಿತಿಗಾಗಿ ರಾಯಭಾರ ಕಚೇರಿಯ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿಯಮಿತವಾಗಿ ಗಮನಿಸುವಂತೆಯೂ ತಿಳಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಯನ್ನೂ ಹಂಚಿಕೊಂಡಿದೆ.

