ತಿರುವನಂತಪುರ: ವಯನಾಡ್ ಜಿಲ್ಲೆಯ ಕಳ್ಳಾಡಿ ಬಳಿ ಮಣ್ಣು ಕುಸಿದ ಸ್ಥಳದಲ್ಲಿ ಗುರುವಾರ ಮತ್ತೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದಂತಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ಇಬ್ಬರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಮೃತರನ್ನು ಸರ್ವೆಯರ್ ಅಜರುದ್ದೀನ್ ಅನ್ಸಾರಿ(ಉತ್ತರ ಪ್ರದೇಶ), ಎಂಜಿನಿಯರ್ ರಾಹುಲ್ ಶರ್ಮಾ(ಹಿಮಾಚಲ ಪ್ರದೇಶ) ಹಾಗೂ ಭೂಮಿ ಅಗೆಯುವ ಯಂತ್ರದ ಆಪರೇಟರ್ ಮೊಹಮ್ಮದ್ ಇಮ್ರಾನ್(ಬಿಹಾರ) ಎಂದು ಗುರುತಿಸಲಾಗಿದೆ.
ಮುಂದುವರಿದ ಶೋಧ: 'ಮಣ್ಣು ಕುಸಿದ ಸ್ಥಳದಲ್ಲಿ ಶೋಧ ಕಾರ್ಯಕ್ಕಾಗಿ ನಾಲ್ಕು ವಲಯಗಳನ್ನು ಗುರುತಿಸಲಾಗಿದೆ. ವಲಯ 1 ಮತ್ತು 2ರಲ್ಲಿ ಶೋಧ ಕಾರ್ಯ ಮುಂದುವರಿಸಲಾಗುವುದು. ನದಿ ಸಮೀಪದಲ್ಲಿಯೂ ಕಾರ್ಯಾಚರಣೆ ನಡೆಸಲಾಗುವುದು' ಎಂದು ಕಂದಾಯ ಸಚಿವ ಎ.ಪಿ.ಅನಿಲಕುಮಾರ್ ಹೇಳಿದ್ದಾರೆ.
ವೈತ್ತಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಕೃಷಿ ಸಚಿವ ಟಿ.ಸಿದ್ದಿಕ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಪಿಣರಾಯಿ ವಿಜಯನ್ ಭೇಟಿ
ಎಲ್‌ಡಿಎಫ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳ್ಳಾಡಿಯಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಕುರಿತಂತೆ ಮಾಡಲಾಗಿರುವ ಆರೋಪಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಪಿಣರಾಯಿ ವಿಜಯನ್ ಗುರುವಾರ ತಳ್ಳಿ ಹಾಕಿದ್ದಾರೆ.
ಮಣ್ಣು ಕುಸಿದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,'ಸಾರ್ವಜನಿಕವಾಗಿ ಅಹವಾಲು ಆಲಿಕೆ ಸೇರಿ ಎಲ್ಲ ನಿಯಮಗಳನ್ನು ಪಾಲಿಸಿಯೇ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು' ಎಂದು ಹೇಳಿದ್ದಾರೆ.
'ಈ ದುರ್ಘಟನೆ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ' ಎಂದು ವಿಜಯನ್ ಟೀಕಿಸಿದ್ದಾರೆ.
'ವಯನಾಡ್-ಕೋಯಿಕ್ಕೋಡ್ ಸಂಪರ್ಕಿಸುವ ಸುರಂಗ ರಸ್ತೆ ಕಾಮಗಾರಿ ನಿರ್ಣಾಯಕ ಯೋಜನೆಯಾಗಿದೆ. ಮಣ್ಣು ಕುಸಿತ ಘಟನೆಯ ಕಾರಣ ಒಡ್ಡಿ ಈ ಯೋಜನೆಯನ್ನು ಕೈಬಿಡಬಾರದು' ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಆಗ್ರಹಿಸಿದ್ದಾರೆ.

