HEALTH TIPS

ಉದ್ಘಾಟನೆಯಾದ 9 ವಾರಗಳಲ್ಲಿ 6,695 ಕೋಟಿ ರೂ. ವೆಚ್ಚದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ 'ಮಿಸ್ಸಿಂಗ್ ಲಿಂಕ್' ರಸ್ತೆ ಕುಸಿತ

 ಮುಂಬೈ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಅತ್ಯಂತ ಕಠಿಣ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 6,695 ಕೋಟಿ ರೂ. ವೆಚ್ಚದ 'ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮಿಸ್ಸಿಂಗ್ ಲಿಂಕ್' (Missing Link) ರಸ್ತೆಯನ್ನು ಉದ್ಘಾಟಿಸಿದ್ದರು. 


ಆದರೆ, ಉದ್ಘಾಟನೆಯಾದ ಕೇವಲ ಒಂಬತ್ತು ವಾರಗಳಲ್ಲಿ, ಮುಂಗಾರು ಮಳೆಯಿಂದ ಉಂಟಾದ ಭೂಕುಸಿತದ ಕಾರಣ ಈ ರಸ್ತೆಯನ್ನು ಭಾಗಶಃ ಮುಚ್ಚಲಾಗಿದೆ. ಇದರಿಂದಾಗಿ ವಾಹನ ಸವಾರರು ಅನಿವಾರ್ಯವಾಗಿ ತಾವು ತಪ್ಪಿಸಲು ಬಯಸಿದ್ದ ಹಳೆಯ ಮುಂಬೈ-ಪುಣೆ ಹೆದ್ದಾರಿಯನ್ನೇ ಮತ್ತೆ ಅವಲಂಬಿಸುವಂತಾಗಿದೆ.

ಮಹಾರಾಷ್ಟ್ರದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಈ ರಸ್ತೆಗೆ ಎದುರಾದ ಮೊದಲ ಪ್ರಮುಖ ಮುಂಗಾರು ಪರೀಕ್ಷೆ ಇದಾಗಿದೆ. ಅಪಘಾತ ಪೀಡಿತ ಖಂಡಾಲಾ ಘಾಟ್ ವಿಭಾಗಕ್ಕೆ ಸುರಕ್ಷಿತ, ವೇಗದ ಮತ್ತು ಹೆಚ್ಚು ವಿಶ್ವಾಸಾರ್ಹ ಪರ್ಯಾಯ ಎಂದು ಬಿಂಬಿತವಾಗಿದ್ದ ಈ ಕಾರಿಡಾರ್‌ನ ರಚನಾತ್ಮಕ ಸಿದ್ಧತೆಯ ಬಗ್ಗೆ ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಖೋಪೋಲಿ ಮತ್ತು ಸಿಂಹಗಢ ಸಂಸ್ಥೆಯ ನಡುವಿನ 19.8 ಕಿ.ಮೀ ಉದ್ದದ ಖಂಡಾಲಾ ಘಾಟ್ ವಿಭಾಗವನ್ನು ತಪ್ಪಿಸಲು ಈ 13.3 ಕಿ.ಮೀ ಉದ್ದದ 'ಮಿಸ್ಸಿಂಗ್ ಲಿಂಕ್' ರಸ್ತೆಯನ್ನು ನಿರ್ಮಿಸಲಾಗಿದೆ. ವರ್ಷಗಳಿಂದ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿನ ಸಂಚಾರವು ಈ ಆರು ಪಥಗಳ ರಸ್ತೆಯಲ್ಲೇ ಸಾಗಬೇಕಿತ್ತು. ಕಡಿದಾದ ಇಳಿಜಾರುಗಳು ಮತ್ತು ಕಡಿದಾದ ತಿರುವುಗಳಿಂದಾಗಿ ಇಲ್ಲಿ ಪದೇ ಪದೇ ತೀವ್ರ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸುತ್ತಿದ್ದವು.

ಈ ಹೊಸ ರಸ್ತೆಯು ಪ್ರಯಾಣದ ದೂರವನ್ನು ಸುಮಾರು 6 ಕಿ.ಮೀ ನಷ್ಟು ಕಡಿಮೆ ಮಾಡಿದೆ. ಗಂಟೆಗೆ 100 ಕಿ.ಮೀ ವೇಗದ ಮಿತಿಯೊಂದಿಗೆ ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು 20 ರಿಂದ 30 ನಿಮಿಷಗಳಷ್ಟು ಕಡಿತಗೊಳಿಸಿದೆ.

►ಇದನ್ನು ಇಂಜಿನಿಯರಿಂಗ್ ಅದ್ಭುತ ಎಂದು ಏಕೆ ಪರಿಗಣಿಸಲಾಗಿತ್ತು?

13.3 ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ 'ಮಿಸ್ಸಿಂಗ್ ಲಿಂಕ್' ರಸ್ತೆಯು 1.6 ಕಿ.ಮೀ ಮತ್ತು 8.9 ಕಿ.ಮೀ ಉದ್ದದ ಎರಡು ಅವಳಿ ಸುರಂಗಗಳು, ಎರಡು ಹೈ-ಸ್ಪೀಡ್ ಮೇಲ್ಸೇತುವೆಗಳು ಮತ್ತು ಟೈಗರ್ ವ್ಯಾಲಿ ಮೇಲೆ 183 ಮೀಟರ್ ಎತ್ತರದಲ್ಲಿ ತೇಲುತ್ತಿರುವ ಕೇಬಲ್ ಸ್ಟೇಯ್ಡ್ ಸೇತುವೆಯನ್ನು ಒಳಗೊಂಡಿದೆ. ಇದು ದೇಶದಲ್ಲೇ ಅತಿ ಎತ್ತರದ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನ್ಯೂ ಆಸ್ಟ್ರಿಯನ್ ಟನೆಲಿಂಗ್ ಪದ್ಧತಿಯನ್ನು ಬಳಸಿ ಲೋನಾವಾಲಾ ಸರೋವರದ ಸುಮಾರು 180 ಮೀಟರ್ ಕೆಳಗೆ ಕೊರೆಯಲಾದ ಈ 8.9 ಕಿ.ಮೀ ಉದ್ದದ ಮುಖ್ಯ ಸುರಂಗ ಮಾರ್ಗವು ವಿಶ್ವದ ಅತ್ಯಂತ ಅಗಲವಾದ ರಸ್ತೆ ಸುರಂಗಗಳಲ್ಲಿ ಒಂದಾಗಿದೆ. ಇಂಜಿನಿಯರ್‌ಗಳು ಸಹ್ಯಾದ್ರಿ ಬೆಟ್ಟಗಳ ನಡುವೆ ತಾತ್ಕಾಲಿಕ ಸಂಪರ್ಕ ಮಾರ್ಗಗಳನ್ನು ನಿರ್ಮಿಸುವ ಮೂಲಕ ಈ ಸವಾಲನ್ನು ಎದುರಿಸಿದ್ದರು. ಈ ಪ್ರದೇಶದ ತೀವ್ರ ಗಾಳಿ, ದಟ್ಟ ಮಂಜು ಮತ್ತು ಮುಂಗಾರಿನ ಭಾರಿ ಮಳೆಯನ್ನು ತಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಈ ಯೋಜನೆ ಸಾಕಾರಗೊಳ್ಳಲು ಸುಮಾರು ಮೂರು ದಶಕಗಳೇ ಬೇಕಾದವು.

►ಈ ಯೋಜನೆಗೆ ಇಷ್ಟೊಂದು ಸಮಯ ಹಿಡಿದಿದ್ದು ಏಕೆ?

ಅಪಘಾತ ಪೀಡಿತ ಘಾಟ್ ವಿಭಾಗಕ್ಕೆ ಪರ್ಯಾಯ ಮಾರ್ಗದ ಅಗತ್ಯವನ್ನು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗುವ ಮುನ್ನವೇ, ಅಂದರೆ 1995 ರಲ್ಲಿ 'ರೈಟ್ಸ್' (ಖIಖಿಇS) ಸಂಸ್ಥೆ ಮೊದಲ ಬಾರಿಗೆ ಗುರುತಿಸಿತ್ತು.

ಮಹಾರಾಷ್ಟ್ರ ಸಚಿವ ಸಂಪುಟವು 2017 ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದು 2019 ರಲ್ಲಿ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಆ ನಂತರ ಕೋವಿಡ್-19 ಸಾಂಕ್ರಾಮಿಕ, ಕಠಿಣ ಭೌಗೋಳಿಕ ಪರಿಸ್ಥಿತಿಗಳು ಮತ್ತು ಪಶ್ಚಿಮ ಘಟ್ಟಗಳ ನಡುವೆ ಸುರಂಗ ಕೊರೆಯುವ ಇಂಜಿನಿಯರಿಂಗ್ ಸವಾಲುಗಳಿಂದಾಗಿ ಕಾಮಗಾರಿ ವಿಳಂಬವಾಯಿತು.

ಮೇ 1 ರಂದು ನಡೆದ ಇದರ ಉದ್ಘಾಟನಾ ಸಮಾರಂಭದಲ್ಲಿ ದೇವೇಂದ್ರ ಫಡ್ನವೀಸ್ ಅವರು ಈ 'ಮಿಸ್ಸಿಂಗ್ ಲಿಂಕ್' ಅನ್ನು ಮಹಾರಾಷ್ಟ್ರದ ನೂತನ "ಸಂಪರ್ಕ ಕೊಂಡಿ" ಎಂದು ಬಣ್ಣಿಸಿದ್ದರು. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು (ಒSಖಆಅ) ಇದನ್ನು ಘಾಟ್ ವಿಭಾಗದ ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಶಾಶ್ವತ ಪರಿಹಾರ ಎಂದು ಬಿಂಬಿಸಿತ್ತು. ಎಕ್ಸ್‌ಪ್ರೆಸ್‌ವೇಯ ಅತ್ಯಂತ ಕಠಿಣ ಸಂಚಾರ ದಟ್ಟಣೆಯ ಜಾಗವನ್ನು ಇದು ಇಲ್ಲದಂತೆ ಮಾಡುವುದರಿಂದ ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣವು "ಹೆಚ್ಚು ವೇಗ ಹಾಗೂ ವಿಶ್ವಾಸಾರ್ಹ"ವಾಗಲಿದೆ ಎಂದು ಎಂಎಸ್‌ಆರ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಅನಿಲ್‌ಕುಮಾರ್ ಗಾಯಕ್ವಾಡ್ ಹೇಳಿದ್ದರು.

►ಸೋಮವಾರ ನಡೆದಿದ್ದೇನು?

ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿ ಕೇವಲ ಒಂಬತ್ತು ವಾರಗಳಲ್ಲೇ ಈ 'ಮಿಸ್ಸಿಂಗ್ ಲಿಂಕ್' ರಸ್ತೆಯು ಮೊದಲ ಪ್ರಮುಖ ಅಡಚಣೆಯನ್ನು ಎದುರಿಸಿತು. ಭೂಕುಸಿತ ಸಂಭವಿಸಿ ರಕ್ಷಣಾ ಗೋಡೆಯೊಂದು ಹಾನಿಗೊಳಗಾದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಬೇಕಾಯಿತು. ಭೂಕುಸಿತದ ಕಾರಣದಿಂದಾಗಿ ಪುಣೆಯಿಂದ ಮುಂಬೈ ಕಡೆಗೆ ಸಾಗುವ ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ರಾಜ್ಯ ಹೆದ್ದಾರಿ ಪೊಲೀಸರ ಮಾಹಿತಿ ಪ್ರಕಾರ, ಸತತ ಭಾರೀ ಮಳೆಯಿಂದಾಗಿ ಸೋಮವಾರ ಮುಂಜಾನೆ ಈ ಘಟನೆ ಸಂಭವಿಸಿದೆ. ಮಿಸ್ಸಿಂಗ್ ಲಿಂಕ್‌ನ ಪುಣೆಯಿಂದ ಮುಂಬೈಗೆ ಸಂಪರ್ಕಿಸುವ ರಸ್ತೆಯ ಮೊದಲ ಸುರಂಗದ ಕೊನೆಯ ಭಾಗದ ಬಳಿ ಭೂಕುಸಿತ ಉಂಟಾಗಿದ್ದು, ಇದರಿಂದ ರಕ್ಷಣಾ ಗೋಡೆ ಕುಸಿದು ಮಾರ್ಗವು ಸಂಚಾರಕ್ಕೆ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಪುಣೆಯಿಂದ ಮುಂಬೈಗೆ ಸಂಪರ್ಕಿಸುವ ರಸ್ತೆ ಮಾರ್ಗವನ್ನು ತಕ್ಷಣವೇ ಮುಚ್ಚಲಾಯಿತು. ಆರಂಭದಲ್ಲಿ ಅಧಿಕಾರಿಗಳು ಎರಡೂ ಕಡೆಯ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮುಂಬೈನಿಂದ ಪುಣೆಗೆ ಸಾಗುವ ಮಾರ್ಗವನ್ನು ಪುನರಾರಂಭಿಸಲಾಯಿತು. ಆದರೆ ಪುಣೆಯಿಂದ ಮುಂಬೈಗೆ ಸಾಗುವ ಕಾರಿಡಾರ್ ಮಾತ್ರ ಮುಚ್ಚಲ್ಪಟ್ಟಿತ್ತು. ಮುಂಬೈ ಕಡೆಗೆ ಸಾಗುವ ವಾಹನಗಳಿಗಾಗಿ ಮಿಸ್ಸಿಂಗ್ ಲಿಂಕ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಮೇಲ್ಸೇತುವೆ ಎರಡನ್ನೂ ಬಂದ್ ಮಾಡಲಾಗಿದ್ದರಿಂದ, ಪುಣೆಯಿಂದ ಬರುತ್ತಿದ್ದ ವಾಹನಗಳನ್ನು ಹಳೆಯ ಮುಂಬೈ-ಪುಣೆ ಹೆದ್ದಾರಿಗೆ (ಓಊ-48) ತಿರುಗಿಸಲಾಯಿತು. ಆ ನಂತರ ಹಂತಹಂತವಾಗಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಗೆ ತರಲಾಯಿತು.

ಮರದ ಕೊಂಬೆಯೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಹಳೆಯ ಪುಣೆ-ಮುಂಬೈ ಹೆದ್ದಾರಿಯೂ ಬಂದ್ ಆಗಿದ್ದ ಸಮಯದಲ್ಲಿಯೇ ಈ ಅಡಚಣೆ ಎದುರಾಗಿದೆ. ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನೀರು ನಿಂತಿತ್ತು. ಎರಡೂ ಮಾರ್ಗಗಳು ಏಕಕಾಲದಲ್ಲಿ ಬಾಧಿತಗೊಂಡಿದ್ದರಿಂದ, ವಾಹನ ಸವಾರರು ಪುಣೆ ಮತ್ತು ಮುಂಬೈ ನಡುವಿನ ಪ್ರಯಾಣವನ್ನು ಮುಂದೂಡಬೇಕು ಹಾಗೂ ಅಧಿಕೃತ ಸಂಚಾರ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

ದೇಶದ ಮೊದಲ ನಿಯಂತ್ರಿತ ಪ್ರವೇಶದ ಎಕ್ಸ್‌ಪ್ರೆಸ್‌ವೇ 2002 ರಲ್ಲಿ ಪ್ರಾರಂಭವಾದ ನಂತರ, ಈ ವಲಯದ ಮೂಲಸೌಕರ್ಯಕ್ಕೆ ಮಾಡಲಾದ ಅತಿ ದೊಡ್ಡ ನವೀಕರಣ ಎಂದು ಈ ಯೋಜನೆಯನ್ನು ಬಿಂಬಿಸಲಾಗಿತ್ತು. ಆದರೆ ಈ ಯೋಜನೆಯು ಉದ್ಘಾಟನೆಯಾದ ಕೇವಲ ಒಂಬತ್ತು ವಾರಗಳಲ್ಲಿ ಮುಚ್ಚಲ್ಪಟ್ಟಿದೆ.

ಭೂಕುಸಿತದ ನಂತರ ರಸ್ತೆ ಮುಚ್ಚಿರುವುದು ಮುಂಗಾರು ಅವಧಿಯಲ್ಲಿ ಈ ಕಾರಿಡಾರ್‌ನಲ್ಲಿ ಸಂಭವಿಸಿದ ಮೊದಲ ಪ್ರಮುಖ ಅಡಚಣೆಯಾಗಿದೆ. ಭಾರೀ ಮಳೆ ಮತ್ತು ಅಸ್ಥಿರವಾದ ಕಡಿದಾದ ಬೆಟ್ಟಗಳು ರಾಜ್ಯದ ಅತ್ಯಂತ ಮಹತ್ವಾಕಾಂಕ್ಷೆಯ ಇಂಜಿನಿಯರಿಂಗ್ ಯೋಜನೆಗಳನ್ನೇ ಪರೀಕ್ಷಿಸುತ್ತಿರುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸಾರಿಗೆ ಮೂಲಸೌಕರ್ಯವನ್ನು ನಿರ್ಮಿಸುವ ಸವಾಲನ್ನು ಇದು ಎತ್ತಿ ತೋರಿಸುತ್ತದೆ. ಹಳೆಯ ಘಾಟ್ ವಿಭಾಗದಲ್ಲಿ ಮುಂಗಾರು ಅವಧಿಯ ಸಂಚಾರ ಅಡಚಣೆಗಳಿಂದ ವಾಹನ ಸವಾರರನ್ನು ಮುಕ್ತಗೊಳಿಸಲು ರೂಪಿಸಲಾದ ರಸ್ತೆಯು, ತನ್ನ ಮೊದಲ ಮಳೆಗಾಲದಲ್ಲೇ ಸವಾರರನ್ನು ಮತ್ತೆ ಅದೇ ಹಳೆಯ ಮಾರ್ಗಕ್ಕೆ ಕಳುಹಿಸುವಂತೆ ಮಾಡಿರುವುದು ವಿಪರ್ಯಾಸವೇ ಸರಿ.

►ರಸ್ತೆ ಪ್ರಾಧಿಕಾರ ಹೇಳಿದ್ದೇನು?

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಈ ಘಟನೆಗೆ ಪ್ರಕೃತಿಯನ್ನು ದೂಷಿಸಿದ್ದು, ಇದನ್ನು "ದೇವರ ಲೀಲೆ" ಎಂದು ಬಣ್ಣಿಸಿದೆ. ಭೂಕುಸಿತವನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳು ಮತ್ತು ವಿನ್ಯಾಸಗಳನ್ನು ರೂಪಿಸಲಾಗಿತ್ತು, ಆದರೆ ಅವುಗಳಿಗೆ ಒಂದು ಮಿತಿ ಇರುತ್ತದೆ ಎಂದು ರಸ್ತೆ ಪ್ರಾಧಿಕಾರ ಒತ್ತಿ ಹೇಳಿದೆ. "ಇದು ಗುತ್ತಿಗೆದಾರರ ತಪ್ಪಲ್ಲ, ಪ್ರಕೃತಿಯ ಆಟ" ಎಂದಿದ್ದಾರೆ ಎಂಎಸ್‌ಆರ್‌ಡಿಸಿ ಉಪಾಧ್ಯಕ್ಷ ಅನಿಲ್‌ಕುಮಾರ್ ಗಾಯಕ್ವಾಡ್.

ನಿರಂತರ ಮಳೆಯಿಂದಾಗಿ ಮೇಲ್ಭಾಗದಿಂದ ಕೆಲವು ಬಂಡೆಗಳು ಉರುಳಿ ಬಂದು, 2ನೇ ಸುರಂಗದ ಮುಂಭಾಗವನ್ನು ಮುಚ್ಚಿವೆ ಎಂದು ಗಾಯಕ್ವಾಡ್ ಹೇಳಿದ್ದಾರೆ. "ಸುರಂಗದ ಮುಖ್ಯ ರಚನೆಗೆ ಯಾವುದೇ ಹಾನಿಯಾಗಿಲ್ಲ, ಆದರೆ ಸುರಂಗಗಳ ಅಂಚುಗಳಲ್ಲಿ ನಿರ್ಮಿಸಲಾಗುವ ಬಾಹ್ಯ ರಚನೆಯಾದ ಫಾಲ್ಸ್ ಫ್ರೇಮ್ ಹಾನಿಗೊಳಗಾಗಿದೆ ಎಂದಿದ್ದಾರೆ ಅವರು.

ಮತ್ತೊಬ್ಬ ಎಂಎಸ್‌ಆರ್‌ಡಿಸಿ ಅಧಿಕಾರಿ ಮಾತನಾಡಿ, "ಐಐಟಿ-ಬಾಂಬೆ ಅನುಮೋದಿಸಿರುವ ಬಂಡೆ ಕುಸಿತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುರಂಗದ ಮೇಲಿನ ಪರ್ವತದಲ್ಲಿ 15 ಮೀಟರ್ ಎತ್ತರದವರೆಗೆ ರಾಕ್ ಬೋಲ್ಟಿಂಗ್ ಮೆಶ್ ಅಳವಡಿಸುವುದು ಇದರಲ್ಲಿ ಸೇರಿದೆ. ಅದು ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ ಈಗ ಬಿದ್ದಿರುವ ಬಂಡೆಗಳು ಸುಮಾರು 150 ಮೀಟರ್ ಎತ್ತರದಿಂದ ಉರುಳಿ ಬಂದಿವೆ. ಇಂಥಾ ಬಾರೀ ಮಳೆಯು ದೈವಿಕ ಕೃತ್ಯದಂತಾಗಿದ್ದು, ಇದನ್ನು ತಡೆಯಲು ಹೆಚ್ಚಿನದೇನೂ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ.

ಯೋಜನೆಯಲ್ಲಿ ಕೈಗೊಂಡ ಕಾಮಗಾರಿಯನ್ನು ಸಮರ್ಥಿಸಿಕೊಂಡಿರುವ ನಿಗಮವು, ಸುರಂಗಕ್ಕೆ ಯಾವುದೇ ರಚನಾತ್ಮಕ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. 











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries