ಲಕ್ನೊ: ರಾಮಮಂದಿರ ದೇಣಿಗೆ ಕಳವು ಪ್ರಕರಣದಿಂದ ಜಗತ್ತಿನಾದ್ಯಂತ ಇರುವ ಸನಾತನ ಧರ್ಮದ ಅನುಯಾಯಿಗಳು ಆಕ್ರೋಶಗೊಂಡಿದ್ದಾರೆ ಎಂದು ಬುಧವಾರ ಹೇಳಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, "ಬಿಜೆಪಿ ಭಾರತದ ಜಾಗತಿಕ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದೆ" ಎಂದೂ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, "ಅಯೋಧ್ಯೆ ದೇವಾಲಯಕ್ಕೆನೀಡಲಾಗಿದ್ದ ದೇಣಿಗೆ, ಕೊಡುಗೆಗಳನ್ನು ಕಳವು ಮಾಡಲಾಗಿದೆ ಎಂಬ ಸುದ್ದಿ ವಿಶ್ವದಾದ್ಯಂತ ಹರಡಿದೆ. ಬಿಜೆಪಿ ಹಾಗೂ ಅದರ ಸಹಚರರಿಂದ ಆಗಿರುವ ಅಗೌರವದಿಂದ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಸನಾತನ ಧರ್ಮದ ಅನುಯಾಯಿಗಳಿಗೆ ತಲೆ ತಗ್ಗಿಸುವಂತೆ ಆಗಿದೆ. ಅವರಲ್ಲಿ ಬಹುತೇಕರು ದೇವಾಲಯಕ್ಕೆ ದೇಣಿಗೆ ಅಥವಾ ವೈಯಕ್ತಿಕವಾಗಿ ಕೊಡುಗೆ ನೀಡಿದ್ದುದರಿಂದ, ಅವರಿಗೆ ಈ ಘಟನೆಯಿಂದ ನೋವಾಗಿದೆ" ಎಂದು ಹೇಳಿದ್ದಾರೆ.
"ಬಿಜೆಪಿಯ ಅಧಾರ್ಮಿಕ ವ್ಯಕ್ತಿಗಳಿಂದ ದೇಶದ ಘನತೆಗೆ ಕುಂದುಂಟಾಗಿದೆ" ಎಂದೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳೂ ಆದ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಈ ವಿವಾದದಿಂದ ಹೂಡಿಕೆದಾರರ ವಿಶ್ವಾಸಕ್ಕೂ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
"ಸರಕಾರವೊಂದು ತನ್ನದೇ ದೇವರ ದೇಣಿಗೆಯನ್ನು ರಕ್ಷಿಸುವಲ್ಲಿ ವಿಫಲವಾಗಿರುವಾಗ, ನಾಳೆ ಹೂಡಿಕೆಯನ್ನು ಹೇಗೆ ರಕ್ಷಿಸುತ್ತದೆ ಎಂದು ಆತಂಕಗೊಂಡಿರುವ ವಿಶ್ವಾದ್ಯಂತ ಇರುವ ಹೂಡಿಕೆದಾರರು, ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಬಿಜೆಪಿ ತನ್ನ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ವಿಶ್ವಾಗಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ" ಎಂದೂ ಅವರು ದೂಷಿಸಿದ್ದಾರೆ.
ಇದೇ ವೇಳೆ, ಮತ್ತೊಂದು ಪ್ರತ್ಯೇಕ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ರಾಮಮಂದಿರ ದೇಣಿಗೆ ಕಳವು ಆರೋಪಿಗಳಲ್ಲಿ ಒಬ್ಬನಾದ ಟಿನ್ನು ಯಾದವ್ ರೊಂದಿಗೆ ತಮಗೆ ಸಂಬಂಧವಿದೆ ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರ ಆರೋಪವನ್ನು ಅಲ್ಲಗಳೆದಿದ್ದಾರೆ.
"ಇದು ಸುಳ್ಳು ಆರೋಪವಾಗಿದ್ದು, ಬಿಜೆಪಿ ಚಾರಿತ್ರಿಕವಾಗಿ ಸಂಪೂರ್ಣವಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿರುವ ವ್ಯಕ್ತಿಗಳನ್ನು ಅವಲಂಬಿಸಿ ತಪ್ಪು ಮಾಡುತ್ತಿದೆ" ಎಂದು ಅವರು ವ್ಯಂಗ್ಯವಾಡಿದ್ದಾರೆ.

