ಭಾರತದ 6ನೇ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿ ಉತ್ತರಾಖಂಡವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು 'ಉಲ್ಲಾಸ್' ಎಂಬ ಕಾರ್ಯಕ್ರಮದ ಅಡಿಯಲ್ಲಿ ಶೇ 98 ರಷ್ಟು ಸಾಕ್ಷರತೆಯನ್ನು ಸಾಧಿಸಿರುವುದಾಗಿ ಉತ್ತರಾಖಂಡ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಘೋಷಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿಗದಿಪಡಿಸಿದ್ದ ವಯಸ್ಕರ ಸಾಕ್ಷರತಾ ಮಾನದಂಡಗಳನ್ನು ಪೂರೈಸಿರುವ ಉತ್ತರಾಖಂಡ ಈ ಮೈಲಿಗಲ್ಲನ್ನು ಸಾಧಿಸಿದೆ. ಉತ್ತರಾಖಂಡಕ್ಕೂ ಮುನ್ನ ದೇಶದ ಇತರೆ ರಾಜ್ಯಗಳಾದ ಮಿಜೋರಾಂ, ಗೋವಾ, ತ್ರಿಪುರ, ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ, ಪೂರ್ಣ ಸಾಕ್ಷರತಾ ರಾಜ್ಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದವು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, 'ಸರ್ಕಾರದೊಂದಿಗೆ ಸಾರ್ವಜನಿಕರ ಸಹಭಾಗಿತ್ವವು ಈ ಯಶಸ್ವಿಗೆ ಕಾರಣವಾಗಿದೆ. ಇದು 2047 ರ ವೇಳೆಗೆ 'ವಿಕಸಿತ ಭಾರತ' ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಜೊತೆಗೆ ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಶಿಕ್ಷಣ ಮತ್ತು ಜೀವನ ಕೌಶಲ್ಯಗಳಿಗೆ ಸಂಬಂಧಿಸಿದ ಯೋಜನೆ, ಪ್ರತಿಯೊಬ್ಬ ನಾಗರಿಕನನ್ನು ತಲುಪುವಂತೆ ನೋಡಿಕೊಳ್ಳಲು ಸರ್ಕಾರವು ಬದ್ಧವಾಗಿದೆ' ಎಂದು ಹೇಳಿದ್ದಾರೆ.
ಉಲ್ಲಾಸ್-ನವ ಭಾರತ ಸಾಕ್ಷರತಾ ಕಾರ್ಯಕ್ರಮ
ಉಲ್ಲಾಸ್-ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿ 3 ಕೋಟಿಗೂ ಹೆಚ್ಚು ಕಲಿಯುವ ವಿದ್ಯಾರ್ಥಿಗಳಿದ್ದಾರೆ . 42 ಲಕ್ಷ ಕಲಿಸಲು ಸ್ವಯಂ ಸೇವಕರು ದಾಖಲಾಗಿದ್ದಾರೆ. ಈಗಾಗಲೇ ಸುಮಾರು 1.83 ಕೋಟಿ ಜನರು ಈ ಯೋಜನೆಯಿಂದ ಸಾಕ್ಷರರಾಗಿದ್ದಾರೆ. ಈ ಕಾರ್ಯಕ್ರಮ 26 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿದೆ.
ಭಾರತದಲ್ಲಿ ಸಾಕ್ಷರತಾ ಅಂತರ ಎಷ್ಟಿದೆ?
ದೇಶದಲ್ಲಿ ಪ್ರತಿ 5 ಜನರಲ್ಲಿ 4 ಜನ ಸಾಕ್ಷರರು ಎಂದು ಘೋಷಿಸಲಾಗಿದೆ. ಆದರೆ ಲಿಂಗವಾರು ನೋಡಿದಾಗ ಇದರ ಪ್ರಮಾಣ ಪ್ರತಿ 100 ಸಾಕ್ಷರ ಪುರುಷರಿಗೆ ಕೇವಲ 87 ಸಾಕ್ಷರ ಮಹಿಳೆಯರು ಮಾತ್ರ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಂತರ ಹೆಚ್ಚಿದೆ. ಶಿಥಿಲಗೊಂಡ ಶಾಲೆಗಳು, ಶಿಕ್ಷಕರ ಕೊರತೆ, ಬಾಲ್ಯ ವಿವಾಹ ಮತ್ತು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಪದ್ಧತಿಗಳಿಂದಾಗಿ ಗ್ರಾಮೀಣ ಭಾಗದ ಸಾಕ್ಷರತಾ ಪ್ರಮಾಣ ಕುಸಿಯುತ್ತಿದೆ ಎಂದು ವರದಿ ಹೇಳುತ್ತದೆ.
ಯುನೆಸ್ಕೋ ಪ್ರಕಾರ, ಶೇ 95ರಷ್ಟು ಸಾಕ್ಷರತೆ ಇರುವ ರಾಜ್ಯ ಸಂಪೂರ್ಣ ಸಾಕ್ಷರ ಎಂದು ಘೋಷಿಸಲಾಗುತ್ತದೆ. ಮಿಜೋರಾಂ ಸದ್ಯ ಶೇ 98.2 ರಷ್ಟು ಸಾಕ್ಷರತಾ ಪ್ರಮಾಣವನ್ನು ದಾಖಲಿಸುವ ಮೂಲಕ ದೇಶದಲ್ಲಿ ಹೆಚ್ಚು ಅಕ್ಷರಸ್ಥರಿರುವ ರಾಜ್ಯವೆಂದು ಘೋಷಿಸಲಾಗಿತ್ತು. ಅದರಂತೆ ಉತ್ತರಾಖಂಡ ಶೇ 98ರಷ್ಟು, ಹಿಮಾಚಲ ಪ್ರದೇಶ ಶೇ 99.30ರಷ್ಟು, ಗೋವಾ ಶೇ 95ರಷ್ಟು, ತ್ರಿಪುರ ಶೇ 95ರಷ್ಟು ಹಾಗೂ ಸಿಕ್ಕಿಂ ಶೇ 95ರಷ್ಟು ಸಾಕ್ಷರತೆ ಪ್ರಮಾಣ ಸಾಧಿಸಿವೆ.

