ನವದೆಹಲಿ: ಅಧ್ಯಯನದ ಪ್ರಕಾರ, ಆನ್ಲೈನ್ ಗ್ರಾಹಕ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪೆನಿಗಳಲ್ಲಿ ಶೇ 95ಕ್ಕೂ ಹೆಚ್ಚು ವಿವಿಧ ಡಾರ್ಕ್ ಪ್ಯಾಟರ್ನ್ ಗಳು (ಕರಾಳ ಮಾದರಿಗಳು) ಕಂಡುಬಂದಿವೆ.
ಅನೇಕ ವರ್ಷಗಳ ನಿಯಂತ್ರಕ ಪರಿಶೀಲನೆಯ ಹೊರತಾಗಿಯೂ, ಆನ್ಲೈನ್ ಪ್ಲಾಟ್ಫಾರ್ಮ್ಗಳು ಬಳಸುತ್ತಿರುವ ಡಾರ್ಕ್ ಪ್ಯಾಟರ್ನ್ಗಳು (ಕರಾಳ ಮಾದರಿಗಳು) ಭಾರತೀಯ ಗ್ರಾಹಕರನ್ನು ದಾರಿ ತಪ್ಪಿಸುತ್ತಲೇ ಇವೆ ಮತ್ತು ಸೂಕ್ತ ಆಯ್ಕೆ ಮಾಡುವುದನ್ನು ತಡೆಯುತ್ತಿವೆ.
ಆದರೆ ಹೊಸ ಅಧ್ಯಯನವು ಮಹತ್ವದ ಪ್ರಸ್ತಾಪವೊಂದನ್ನು ಮುಂದಿಟ್ಟಿದೆ. ಭಾರತದ ಷೇರುಪೇಟೆಯಲ್ಲಿ ಪಟ್ಟಿ ಮಾಡಲಾಗಿರುವ ಎಲ್ಲ ಕಂಪೆನಿಗಳು ಹಾಗೂ ಪಟ್ಟಿ ಮಾಡಲು ಯೋಜಿಸುತ್ತಿರುವ ಕಂಪೆನಿಗಳು ತಮ್ಮ ಡಿಜಿಟಲ್ ಗ್ರಾಹಕ ಪ್ರಯಾಣ ಮತ್ತು ವಹಿವಾಟುಗಳಲ್ಲಿ ಡಾರ್ಕ್ ಪ್ಯಾಟರ್ನ್ಗಳನ್ನು ಬಳಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅದು ಶಿಫಾರಸು ಮಾಡಿದೆ.
ಜುಲೈ 7ರಂದು ಮಂಗಳವಾರ ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ಸರ್ಕಲ್ಸ್ ಪ್ರಕಟಿಸಿರುವ ಅಧ್ಯಯನವು, "ಆನ್ಲೈನ್ ಗ್ರಾಹಕ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪೆನಿಗಳಲ್ಲಿ ಶೇ 95ಕ್ಕೂ ಹೆಚ್ಚು ವಿವಿಧ ಡಾರ್ಕ್ ಪ್ಯಾಟರ್ನ್ಗಳು ಕಂಡುಬಂದಿವೆ. ಗ್ರಾಹಕರ ಆನ್ಲೈನ್ ಆಯ್ಕೆ, ವಹಿವಾಟು ಹಾಗೂ ರಿಟರ್ನ್ಸ್ ಅಥವಾ ಮರುಪಾವತಿ ಪ್ರಕ್ರಿಯೆಯ ಸಮಯದಲ್ಲಿ ಈ ಡಾರ್ಕ್ ಪ್ಯಾಟರ್ನ್ಗಳನ್ನು ಬಳಸಲಾಗುತ್ತದೆ" ಎಂದು ಹೇಳಿದೆ.
ವಂಚನೆಯ ತಂತ್ರಗಳಲ್ಲಿ ಮುಖ್ಯವಾಗಿ ಚಂದಾದಾರಿಕೆ ನವೀಕರಣಗಳು, ಬಲವಂತದ ರದ್ದತಿ ಪ್ರಕ್ರಿಯೆಗಳು, ತಪ್ಪಾದ ಬೆಲೆ ಪ್ರದರ್ಶನಗಳು, ಸಮ್ಮತಿ ಕಾರ್ಯವಿಧಾನಗಳು, ವೈಯಕ್ತಿಕಗೊಳಿಸಿದ ಶಿಫಾರಸುಗಳು, ಗೇಮಿಫೈಡ್ ಎಂಗೇಜ್ಮೆಂಟ್ (ಕ್ರೀಡೆಗೆ ಸಂಬಂಧಿಸದ ಸಂದರ್ಭಗಳಲ್ಲಿ ಬಳಕೆದಾರರನ್ನು ಪ್ರೇರೇಪಿಸಲು ಅಂಕಗಳು, ಬ್ಯಾಡ್ಜ್ಗಳು, ಲೀಡರ್ಬೋರ್ಡ್ಗಳು ಮತ್ತು ಪ್ರಗತಿ ಪಟ್ಟಿಗಳಂತಹ ಗೇಮ್ ಮೆಕಾನಿಕ್ಸ್ ಬಳಸುವುದು) ಹಾಗೂ ಗ್ರಾಹಕರ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ರೀತಿಯ ಕುಶಲ ಇಂಟರ್ಫೇಸ್ ವಿನ್ಯಾಸಗಳನ್ನು ಬಳಸಲಾಗುತ್ತಿದೆ ಎಂದು ಅಧ್ಯಯನ ಹೇಳಿದೆ.
ಲೋಕಲ್ಸರ್ಕಲ್ಸ್ ಪ್ರಕಟಿಸಿರುವ ಅಧ್ಯಯನದಲ್ಲಿ ಕಳೆದ 12 ತಿಂಗಳುಗಳಲ್ಲಿ 300ಕ್ಕೂ ಹೆಚ್ಚು ವೇದಿಕೆಗಳ ಗ್ರಾಹಕರ ದೂರುಗಳನ್ನು ಸಂಗ್ರಹಿಸಿ, ಡಾರ್ಕ್ ಪ್ಯಾಟರ್ನ್ಗಳನ್ನು ಪತ್ತೆಹಚ್ಚಲು ಪ್ರೊಪ್ರೈಟರಿ ಎಐ (ಂI) ಆಧಾರಿತ ಸಾಧನವನ್ನು ಬಳಸಲಾಗಿದೆ. ಪರೀಕ್ಷೆಯಲ್ಲಿ ಯಾವ ಕಂಪೆನಿಗಳು ವಿಫಲವಾಗಿವೆ ಎಂಬುದನ್ನು ಸ್ಪಷ್ಟಪಡಿಸದಿದ್ದರೂ, ಮೀಶೋ, ಜಾಕಿ, ಹ್ಯಾಮ್ಲೀಸ್, ಈಕೋ ಮೊಬಿಲಿಟಿ ಮತ್ತು ಈಸಿಮೈಟ್ರಿಪ್ನಂತಹ ಕೆಲವು ಪಟ್ಟಿ ಮಾಡಲಾದ ಕಂಪೆನಿಗಳನ್ನು ಅಧ್ಯಯನವು 'ಡಾರ್ಕ್ ಪ್ಯಾಟರ್ನ್ ಮುಕ್ತ' ಎಂದು ಘೋಷಿಸಿದೆ.
ಆನ್ಲೈನ್ ವೇದಿಕೆಗಳನ್ನು ಹೊಂದಿರುವ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪೆನಿಗಳನ್ನು ಹೊರತುಪಡಿಸಿ, ಸ್ವಯಂ ಆಡಿಟ್ ಬಳಿಕ ತಮ್ಮನ್ನು ಡಾರ್ಕ್ ಪ್ಯಾಟರ್ನ್ ಮುಕ್ತ ಎಂದು ಘೋಷಿಸಿ ಸ್ವಯಂ-ಘೋಷಣೆ ಸಲ್ಲಿಸಿದ 23 ಕಂಪೆನಿಗಳಲ್ಲಿ ಕೇವಲ ಏಳು ಕಂಪೆನಿಗಳು ಮಾತ್ರ ಮೋಸಗೊಳಿಸುವ ಕುಶಲ ಅಭ್ಯಾಸಗಳಿಂದ ಮುಕ್ತವಾಗಿವೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
"ಇಂತಹ ಅಭ್ಯಾಸಗಳು ಗ್ರಾಹಕರ ನಂಬಿಕೆ, ಕಾರ್ಪೊರೇಟ್ ಆಡಳಿತ ಹಾಗೂ ದೀರ್ಘಕಾಲೀನ ವ್ಯವಹಾರ ನಡವಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ" ಎಂದು ಅಧ್ಯಯನ ಹೇಳಿದೆ. ಅಧ್ಯಯನದ ಸಂಶೋಧನೆಗಳು ಸ್ವಯಂ ಆಡಿಟ್ ಚೌಕಟ್ಟಿನ ಮಿತಿಗಳನ್ನು ಎತ್ತಿ ತೋರಿಸಿದ್ದು, ಡಾರ್ಕ್ ಪ್ಯಾಟರ್ನ್ಗಳನ್ನು ಹೊಂದಿರುವ ಆನ್ಲೈನ್ ವೇದಿಕೆಗಳಿಗೆ ಬಲವಾದ ಪರಿಶೀಲನಾ ಕಾರ್ಯವಿಧಾನದ ಅಗತ್ಯವಿದೆ ಎಂದು ಸೂಚಿಸಿವೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಪ್ರಸ್ತಾಪಿಸಿರುವ ಸಾಮಾನ್ಯ ಜಾಹೀರಾತು ಸಂಹಿತೆ (CAC)ಯನ್ನು ಇಂತಹ ಕುಶಲ ಅಭ್ಯಾಸಗಳನ್ನು ತಡೆಯುವ ಸಕಾರಾತ್ಮಕ ಮೊದಲ ಹೆಜ್ಜೆ ಎಂದು ಶ್ಲಾಘಿಸಿರುವ ಅಧ್ಯಯನವು, ಭಾರತದಲ್ಲಿ ಪಟ್ಟಿ ಮಾಡಲಾಗಿರುವ ಹಾಗೂ ಪಟ್ಟಿ ಮಾಡಲು ಯೋಜಿಸುತ್ತಿರುವ ಎಲ್ಲ ಕಂಪೆನಿಗಳು ತಮ್ಮ ಡಿಜಿಟಲ್ ಗ್ರಾಹಕ ಬಳಸುವಿಕೆ ಮತ್ತು ವಹಿವಾಟುಗಳಲ್ಲಿ ಡಾರ್ಕ್ ಪ್ಯಾಟರ್ನ್ಗಳನ್ನು ಬಳಸದಂತೆ ನೋಡಿಕೊಳ್ಳುವಂತೆ ದೇಶದ ಮಾರುಕಟ್ಟೆ ನಿಯಂತ್ರಕಕ್ಕೆ ಕರೆ ನೀಡಿದೆ. ಸೆಬಿ ತನ್ನ ಕನ್ಸಲ್ಟೇಶನ್ ಪೇಪರ್ನಲ್ಲಿ ಸಾಮಾನ್ಯ ಜಾಹೀರಾತು ಸಂಹಿತೆ (ಅಂಅ) 2026 ಅನ್ನು ಪ್ರಸ್ತಾಪಿಸಿದ ಕೆಲ ವಾರಗಳ ಬಳಿಕ ಈ ಅಧ್ಯಯನ ಪ್ರಕಟವಾಗಿದೆ.
ಅಂಅ ಕರಡು ಸಂಹಿತೆಯು ಸುಳ್ಳು ತುರ್ತು, ಚಂದಾದಾರಿಕೆ ಬಲೆಗಳು, ಗುಪ್ತ ಶುಲ್ಕಗಳು, ದೃಢೀಕರಣ ಶೇಮಿಂಗ್, ದಾರಿತಪ್ಪಿಸುವ ಡಿಫಾಲ್ಟ್ ಸೆಟ್ಟಿಂಗ್ಗಳು, ಮರೆಮಾಚುವ ಜಾಹೀರಾತುಗಳು ಹಾಗೂ ಹೂಡಿಕೆದಾರರ ನಿರ್ಧಾರಗಳನ್ನು ಅನ್ಯಾಯವಾಗಿ ಪ್ರಭಾವಿಸಲು ಉದ್ದೇಶಿಸಿರುವ ಇತರ ಇಂಟರ್ಫೇಸ್ ವಿನ್ಯಾಸಗಳಂತಹ ಡಾರ್ಕ್ ಪ್ಯಾಟರ್ನ್ಗಳ ಬಳಕೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆ.
ಕ್ಯಾಶ್ಬ್ಯಾಕ್ ಕೊಡುಗೆಗಳು, ಟ್ರೇಡಿಂಗ್ ವೋಚರ್ಗಳು ಹಾಗೂ ವ್ಯಾಪಾರ ಅಥವಾ ಅಪ್ಲಿಕೇಶನ್ ಡೌನ್ಲೋಡ್ಗಳನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಉಚಿತ ಚಂದಾದಾರಿಕೆಗಳಂತಹ ಪ್ರಚಾರಾತ್ಮಕ ಪ್ರಚೋದನೆಗಳನ್ನೂ ನಿಷೇಧಿಸಲಾಗಿದೆ.
CAC ಅನ್ನು ಅಳವಡಿಸಿಕೊಂಡರೆ, ವೆಬ್ಸೈಟ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ಜಾಹೀರಾತುಗಳು, ಆನ್ಬೋರ್ಡಿಂಗ್, ಇಮೇಲ್ ಅಭಿಯಾನಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು ಹಾಗೂ ದಲ್ಲಾಳಿಗಳು, ಮ್ಯೂಚುವಲ್ ಫಂಡ್ಗಳು, ಹೂಡಿಕೆ ಸಲಹೆಗಾರರು, ಪೋರ್ಟ್ಫೋಲಿಯೊ ವ್ಯವಸ್ಥಾಪಕರು, ಠೇವಣಿದಾರರು, ಸಂಶೋಧನಾ ವಿಶ್ಲೇಷಕರು ಮತ್ತು ಇತರ ಸೆಬಿ ನಿಯಂತ್ರಿತ ಘಟಕಗಳ ಹೂಡಿಕೆದಾರರ ಸಂವಹನಗಳಿಗೆ ಅಂಅ ಅನ್ವಯವಾಗಲಿದೆ.
ತನ್ನ ಅಧ್ಯಯನದ ಭಾಗವಾಗಿ, ಲೋಕಲ್ಸರ್ಕಲ್ಸ್ 310ಕ್ಕೂ ಹೆಚ್ಚು ವೇದಿಕೆಗಳನ್ನು ವಿಶ್ಲೇಷಿಸಿದ್ದು, ವಿವಿಧ ವಲಯಗಳಲ್ಲಿ ಬಳಸಲಾಗುವ ಡಾರ್ಕ್ ಪ್ಯಾಟರ್ನ್ಗಳನ್ನು ಪಟ್ಟಿ ಮಾಡಿದೆ ಎಂದು ಹೇಳಿದೆ.
ಏಳು ಅಥವಾ ಅದಕ್ಕಿಂತ ಹೆಚ್ಚಿನ ರೀತಿಯ ಡಾರ್ಕ್ ಪ್ಯಾಟರ್ನ್ಗಳು ವರದಿಯಾಗಿರುವ ವಲಯಗಳಲ್ಲಿ ವಿಮಾನಯಾನ ಸಂಸ್ಥೆಗಳು, ರೈಲು ಟಿಕೆಟಿಂಗ್, ಮೊಬೈಲ್ ಟೆಲಿಕಾಂ, ಧ್ವನಿ ಸಹಾಯಕರು, ಊಟದ ಸೇವೆಗಳು, ಆಡಳಿತ ಸೇವೆಗಳು, ಗೃಹ ಆರೋಗ್ಯ ಸೇವೆಗಳು, ಎಲೆಕ್ಟ್ರಿಕ್ ಸ್ಕೂಟರ್ಗಳು, ಆನ್ಲೈನ್ ಹಣಕಾಸು ವ್ಯಾಪಾರ, ಕಾರು ಮರುಮಾರಾಟ, ರೋಗಶಾಸ್ತ್ರ ಮತ್ತು ರೋಗನಿರ್ಣಯ, ಕ್ರಿಪ್ಟೋಕರೆನ್ಸಿ, ಡೇಟಿಂಗ್ ಮತ್ತು ವೈವಾಹಿಕ ಸೇವೆಗಳು, ತ್ವರಿತ ವಾಣಿಜ್ಯ, ಡಿಜಿಟಲ್ ಚಿನ್ನ, ಸಂಗೀತ ಸ್ಟ್ರೀಮಿಂಗ್ ಹಾಗೂ ಆನ್ಲೈನ್ ಆಭರಣ ಮಾರಾಟ ವೇದಿಕೆಗಳು ಸೇರಿವೆ.

