ಗುವಾಹಟಿ: ಭಾರತದ ಅತ್ಯಂತ ಪವಿತ್ರ ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂ ನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಾಸ್ಥಾನದ ಹೊರಗೆ ಬುಧವಾರ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆಗೈಯಲಾಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಪುರಾತನ ಕಾಮಾಖ್ಯ ದೇವಾಸ್ಥಾನವಿರುವ ನೀಲಾಚಲ ಬೆಟ್ಟದ ನಿವಾಸಿ ಹಾಗೂ ಟ್ಯಾಕ್ಸಿ ಚಾಲಕ ರೂಪಂ ದಾಸ್ ಎಂದು ಗುರುತಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿ ರಾಹುಲ್ ಪಾಠಕ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಅಸ್ಸಾಂ ಬಾರ್ಪೇಟಾ ಮೂಲದವನಾಗಿದ್ದು, ಸದ್ಯ ಕಾಮಾಖ್ಯ ಪ್ರದೇಶದ ಬಳಿಯ ನೀಲಾಚಲ ಬೆಟ್ಟದ ನಿವಾಸಿಯಾಗಿದ್ದಾನೆ.
ಕಾಮಾಖ್ಯ ಶಂಶಾನ ಪ್ರದೇಶದಲ್ಲಿ ರಾಹುಲ್ ಮತ್ತು ರೂಪಂ ನಡುವೆ ನಡೆದ ಘರ್ಷಣೆ ಈ ಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ರೂಪಂ 'ಮಾ ಮಾನಸ' ಹೊಟೇಲ್ ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ, ಅಲ್ಲಿಗೆ ಆಗಮಿಸಿದ ರಾಹುಲ್ ಬಿದಿರಿನ ಕೋಲಿನಿಂದ ಥಳಿಸಿದ್ದಾನೆ.
ಇದರಿಂದ ತೀವ್ರ ಗಾಯಗೊಂಡ ರೂಪಂ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ರೂಪಂ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ''ರೂಪಂ ಮೇಲೆ ಕೋಲು ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ರಾಹುಲ್ ಮಾದಕ ವ್ಯಸನಿಯಾಗಿದ್ದು, ಘಟನೆಯ ಸಂದರ್ಭ ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದ. ಇಬ್ಬರೂ ಮಧ್ಯದ ಅಮಲಿನಲ್ಲಿದ್ದಾಗ ನಡೆದ ಘರ್ಷಣೆಯೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಾವು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದೇವೆ. ಅಪರಾಧದ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವಿಧಿ ವಿಜ್ಞಾನ ತಂಡ ಮಾದರಿಗಳನ್ನು ಸಂಗ್ರಹಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

