ನವದೆಹಲಿ:ಮುಂಗಾರು ಅಧಿವೇಶನದ ಮೊದಲ ದಿನವಾದ ಜುಲೈ 20ರಂದು ಸಂಸತ್‌ಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಘೋಷಿಸಿದೆ.
ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 20ನೇ ದಿನಕ್ಕೆ ಕಾಲಿರಿಸಿದ ಬೆನ್ನಲ್ಲೇ ಅದು ಈ ಘೋಷಣೆ ಮಾಡಿದೆ.
ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಭಾರೀ ಮಳೆ ಸುರಿಯುತ್ತಿದ್ದರೂ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳಕ್ಕೆ ಟರ್ಪಾಲಿನ್ ತರುವುದಕ್ಕೆ ದಿಲ್ಲಿ ಪೊಲೀಸರು ತಡೆ ಒಡ್ಡಿದ್ದಾರೆ ಎಂದು ಅದು ಆರೋಪಿಸಿದೆ.
ಗುರುವಾರ ಬೆಳಗ್ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಜುಲೈ 20ರಂದು ಸಂಸತ್‌ಗೆ ಪ್ರತಿಭಟನಾ ಮೆರವಣಿಗೆ ಜಂತರ್ ಮಂತರ್‌ನಿಂದ ಆರಂಭವಾಗಲಿದೆ. ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿರುವ ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಅಕ್ರಮಗಳ ಕಾರಣದಿಂದ ನೀಟ್-ಯುಜಿ ಪರೀಕ್ಷೆ ರದ್ದಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲು ಹಮ್ಮಿಕೊಳ್ಳಲಾದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ದೇಶಾದ್ಯಂತದ ವಿದ್ಯಾರ್ಥಿಗಳು ಪೋಷಕರು ಮತ್ತು ನಾಗರಿಕರಿಗೆ ಸಿಜೆಪಿ ಕರೆ ನೀಡಿದೆ.
ಬುಧವಾರ ರಾತ್ರಿ ಎಕ್ಸ್‌ನ ಪೋಸ್ಟ್‌ನಲ್ಲಿ ವಾಂಕ್ಚುಕ್ ಅವರು, ಈ ವಿಷಯವನ್ನು ಪ್ರಸ್ತಾವಿಸಲು ಸಂಸತ್ತು ಸೂಕ್ತ ವೇದಿಕೆಯಾಗಿದೆ ಎಂದಿದ್ದಾರೆ. ಆದುದರಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಅವರು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಉಪವಾಸ ಮುಷ್ಕರ ಕೈಬಿಡುವಂತೆ ಕೋರಿ ನೀವು ಸಂದೇಶ ಕಳುಹಿಸಿರುವುದಕ್ಕೆ ಧನ್ಯವಾದಗಳು. ಆದರೆ, ಇದರಿಂದ ಆತ್ಮಹತ್ಯೆ ಮಾಡಿಕೊಂಡ 20 ವಿದ್ಯಾರ್ಥಿಗಳಿಗೆ ಯಾವುದೇ ನ್ಯಾಯ ಸಿಗುವುದಿಲ್ಲ ಅಥವಾ ಲಡಾಖ್ ಪರ್ವತಗಳನ್ನು ಅಥವಾ ಭಾರತದ ನದಿಗಳನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ನೀವು ನಿಜವಾಗಿಯೂ ಸಹಾಯ ಮಾಡಲು ಬಯಸಿದರೆ, ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 20ರಂದು ದಿಲ್ಲಿಯ ಜಂತರ್ ಮಂತರ್‌ಗೆ ಬನ್ನಿ. ನಾವೆಲ್ಲರೂ ಸಂಘಟಿತರಾಗಿ ಸಂಸತ್ತಿಗೆ ಶಾಂತಿಯುತ ಮರವಣಿಗೆ ನಡೆಸೋಣ. ಈ ವಿಷಯವನ್ನು ಕೈಗೆತ್ತಿಕೊಂಡು ಶಾಶ್ವತ ಪರಿಹಾರ ಒದಗಿಸುವಂತೆ ನಮ್ಮ ಸಂಸದರಲ್ಲಿ ವಿನಂತಿಸೋಣ ಎಂದು ವಾಂಗ್ಚುಕ್ ಹೇಳಿದ್ದಾರೆ.

