ನವದೆಹಲಿ:ಯುಜಿಸಿ-ಎನ್‌ಇಟಿ ಪರೀಕ್ಷೆ ಅಕ್ರಮ ಆರೋಪಕ್ಕೆ ಸಂಬಂಧಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವಂತೆ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ವಿಸರ್ಜಿಸುವಂತೆ ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.
ಜೂನ್ 30ರಂದು ನಡೆದ ಯುಜಿಸಿ-ಎನ್‌ಇಟಿ ಸಮಾಜ ಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದ ಹಲವು ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.
ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ಆರೋಪಗಳು ಪರೀಕ್ಷಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿವೆ ಎಂದಿದ್ದಾರೆ.
2026 ಮೇಯಲ್ಲಿ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕೆಲವು ದಿನಗಳ ನಂತರ ಧರ್ಮೇಂದ್ರ ಪ್ರಧಾನ್ ಅವರು, ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಯಾಗಿ ನಡೆಸಲಾಗುವುದು ಎಂದು ಘೋಷಿಸಿದ್ದರು ಎಂದರು.
ಪೆನ್ ಮತ್ತು ಪೇಪರ್ ಪರೀಕ್ಷೆಯಂತೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯನ್ನು ಸೋರಿಕೆ ಮಾಡಲು ಸಾಧ್ಯವಿಲ್ಲ ಎಂಬುದು ಇದರ ಹಿಂದಿನ ನಿಲುವಾಗಿತ್ತು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಆದರೆ, ಈ ವರ್ಷ ಯುಜಿಸಿ-ಎನ್‌ಇಟಿ ಸಮಾಜಶಾಸ್ತ್ರ ಪರೀಕ್ಷೆ ಸಿಬಿಟಿಯ ಮಾದರಿಯಲ್ಲಿದ್ದರೂ ಕೂಡ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿ ಬಂದಿದೆ. ಇದಕ್ಕಿಂತ ಹಿಂದೆ ಯುಜಿಸಿ-ಎನ್‌ಇಟಿ ಇಂಗ್ಲೀಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಯಾವುದೇ ಬದಲಾವಣೆಗಳಿಲ್ಲದೆ ಹಳೆಯ ಪತ್ರಿಕೆಗಳಿಂದ ಸಂಪೂರ್ಣ ನಕಲು ಮಾಡಲಾಗಿತ್ತು ಎಂದು ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಬರೆದಿದ್ದಾರೆ.
ಪರೀಕ್ಷೆಯ ಸ್ವರೂಪ ಯಾವುದೇ ಇರಲಿ. ಮೋದಿ ಸರಕಾರದ ಶಿಕ್ಷಣ ಸಚಿವಾಲಯ ರಾಜಿ ಮಾಡಿಕೊಂಡಿರುವುದರಿಂದ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಸಮರ್ಥ ಹಾಗೂ ನಿಷ್ಪ್ರಯೋಜಕವಾಗಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಸಂಭವಿಸುತ್ತಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

