ಬದಿಯಡ್ಕ: ಹಿಂದುಳಿದವರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತರುತ್ತಿರುವ ಅನೇಕ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡ ಜನರು ಮುಂದೆ ಬರಬೇಕು. ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಿಗುವ ಸರಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ತಮ್ಮ ಜೀವನಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ.ಹೇಳಿದರು.
ಕೇರಳ ಸರ್ಕಾರದ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ವತಿಯಿಂದ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಕಚೇರಿ, ಕಾಸರಗೋಡು, ಪರಿಶಿಷ್ಟ ವರ್ಗಗಳ ವಿಸ್ತರಣಾ ಕಚೇರಿ ಎಣ್ಮಕಜೆ ಇದರ ನೇತೃತ್ವದಲ್ಲಿ ಅಡಿಯ ಪಣಿಯ ಯೋಜನೆಯಡಿ ಬದಿಯಡ್ಕ ಗ್ರಾಮ ಪಂಚಾಯತಿ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉಪಕರಣಗಳನ್ನು ಅವರು ವಿತರಿಸಿ ಮಾತನಾಡಿದರು.
ಸಮಾಜದ ಮುಖ್ಯವಾಹಿನಿಯಿಂದ ವಂಚಿತರಾದ ಜನರಿಗೆ ಪ್ರಗತಿಯ ಹಾದಿ ತೋರಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶ. ಆದರೆ, ಯೋಜನೆಗಳು ಕೇವಲ ಕಾಗದದ ಮೇಲಿದ್ದರೆ ಸಾಲದು; ಅವು ಅರ್ಹರಿಗೆ ತಲುಪಿದಾಗ ಮತ್ತು ಜನರು ಅವುಗಳನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದರು.
ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌಲಭ್ಯಗಳನ್ನು ಪಡೆದು ಯಶಸ್ವಿಯಾದವರು ತಮ್ಮ ಸಮಾಜದ ಇತರರಿಗೂ ಜಾಗೃತಿ ಮೂಡಿಸಿ, ಅವರನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಸರ್ಕಾರ ನೀಡುವ ಬೆಂಬಲವು ಪ್ರಗತಿಯ ಹಾದಿಯಲ್ಲಿ ಮೊದಲ ಹೆಜ್ಜೆಯಷ್ಟೇ. ಆ ಅವಕಾಶವನ್ನು ಹಿಡಿದು ಸಾಧನೆಯ ಎತ್ತರಕ್ಕೇರುವುದು ಪ್ರತಿಯೊಬ್ಬರ ಸ್ವಂತ ಶ್ರಮ ಮತ್ತು ಛಲವನ್ನು ಅವಲಂಬಿಸಿದೆ. ಹಿಂದುಳಿದ ವರ್ಗಗಳ ಪ್ರತಿಯೊಬ್ಬರೂ ಜಾಗೃತರಾಗಿ ಮುನ್ನಡೆದಾಗ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಎಸ್‍ಟಿ ವಕಿರ್ಂಗ್ ಗ್ರೂಪ್ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಹರೀಶ, ಗಂಗಾಧರ ಗೋಳಿಯಡ್ಕ, ಶ್ಯಾಮಪ್ರಸಾದ ಸರಳಿ, ಲೀಲಾವತಿ, ಉಷಾ ಪಳ್ಳತ್ತಡ್ಕ, ಎಣ್ಮಕಜೆ ಪರಿಶಿಷ್ಟವರ್ಗ ವಿಸ್ತರಣಾಧಿಕಾರಿ ಶಮೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಪ್ರೊಮೋಟರ್‍ಗಳಾದ ೀಕ್ಷಿತ್ ಸಿ.ಎಚ್., ಸುಮನ, ಪ್ರಣವ್ ಗಣೇಶ್, ರೀನಾ ನೇತೃತ್ವ ವಹಿಸಿದ್ದರು.



