ವಾಷಿಂಗ್ಟನ್: ಜೋರ್ಡಾನ್‌ನ. ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ಖಂಡಾಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ಇಬ್ಬರು ಯೋಧರು ಮೃತಪಟ್ಟಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.
ಯುದ್ಧ ವಿರಾಮಕ್ಕೆ ಹಲವು ಸುತ್ತಿನ ಮಾತುಕತೆ ಬಳಿಕವೂ ಅಮೆರಿಕ ಮತ್ತು ಇರಾನ್ ಪರಸ್ಪರ ದಾಳಿ ನಡೆಸುತ್ತಿದ್ದು, ಸಂಘರ್ಷ ಮತ್ತೆ ಉಲ್ಬಣಗೊಂಡಿದೆ.
ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯಸಂಸ್ಕಾರದ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯೆಯ ಪ್ರತಿಜ್ಞೆ ಮಾಡಲಾಗಿತ್ತು.
ಮೃತ ಯೋಧರ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಅಮೆರಿಕ, ದಾಳಿ ನಡೆದ ಸ್ಥಳದ ಸದ್ಯದ ಪರಿಸ್ಥಿತಿ ಬಗ್ಗೆಯೂ ಯಾವುದೇ ವಿವರ ನೀಡಿಲ್ಲ. ದಾಳಿಯಲ್ಲಿ ಗಾಯಗೊಂಡಿದ್ದ ಇನ್ನೂ 4 ಮಂದಿ ಜೋರ್ಡಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಕೆಲವರು ಚೇತರಿಸಿಕೊಂಡು ಕೆಲಸಕ್ಕೆ ಮರಳಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಈ ನಡುವೆ ಹೊರ್ಮುಜ್ ಜಲಸಂಧಿ ನಿರ್ಬಂಧಕ್ಕೆ ಯತ್ನಿಸುವ ಇರಾನ್ ಪಡೆಗಳ ಮೇಲೆ ಅಮೆರಿಕ ಸತತ 8ನೇ ದಿನವೂ ದಾಳಿ ಮುಂಡುವರಿಸಿದೆ. ಅಮೆರಿಕದ ಜೋರ್ಡಾನ್ ಸೇನಾ ನೆಲೆ ಮೇಲಿನ ದಾಳಿಗೂ ಪ್ರತಿದಾಳಿಯನ್ನು ಅಮೆರಿಕ ವಾಯುಪಡೆ ನಡೆಸಿದೆ. ಈ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.
ಈ ನಡುವೆ ಅಮೆರಿಕ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ, ಯುದ್ಧ ವಿರಾಮ ಒಪ್ಪಂದದಲ್ಲಿ ಅಮೆರಿಕದ ಅಧ್ಯಕ್ಷರ ಸಹಿಯು ಸಂಪೂರ್ಣವಾಗಿ ನಿಷ್ಪ್ರಯೋಜಕ ಮತ್ತು ವಿಶ್ವಾಸಾರ್ಹವಲ್ಲದ್ದು ಎಂಬ ಒಂದು ಮೂಲಭೂತ ಸತ್ಯ ಅನಾವರಣಗೊಂಡಿದೆ ಎಂದಿದ್ದಾರೆ.

