ನವದೆಹಲಿ: ಕೃತಕ ಗರ್ಭಧಾರಣೆ ಕೇಂದ್ರ (ಐವಿಎಫ್ ಕ್ಲಿನಿಕ್), ಕೃತಕ ಸಂತಾನೋತ್ಪತ್ತಿ ತಂತ್ರಜ್ಞಾನ ಕೇಂದ್ರ, ಅಂಡಾಣು-ವೀರ್ಯಾಣು ಸಂರಕ್ಷಣಾ ಕೇಂದ್ರಗಳನ್ನು ನಿಯಂತ್ರಿಸುವ ಕಾನೂನು, ನಿಯಮಗಳ ಚೌಕಟ್ಟನ್ನು ಪರಿಶೀಲಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ರಚಿಸಿದೆ.
ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಸುಂದರಿ ನಂದಾ, ಎನ್‌ಸಿಡಬ್ಲ್ಯು ಮಾಜಿ ಸದಸ್ಯೆ ಅರ್ಚನಾ ಮಜುಂದಾರ್, ಎನ್‌ಸಿಡಬ್ಲ್ಯು ಸಲಹಾ ಸಮಿತಿ ಸದಸ್ಯ ಡಾ.ಶಿಪ್ರಾ ಧರ್ ಮತ್ತು ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವನಿ, ಸಫ್ದರ್‌ಜಂಗ್ ಆಸ್ಪತ್ರೆಯ ಡಾ. ಸರ್ವೇಶ್ ಟಂಡನ್, ಏಮ್ಸ್ ಸ್ತ್ರೀರೋಗ ತಜ್ಞೆ ಡಾ. ನೀತಾ ಸಿಂಗ್, ಸಮಾಜ ಸೇವಕಿ ನಯನಾ ಸಹಸ್ರಬುದ್ಧೆ, ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘಗಳ ಒಕ್ಕೂಟದ ಡಾ. ರಜನಿಕಾಂತ್ ಕಾಂಟ್ರಾಕ್ಟರ್ ಮತ್ತು ಎನ್‌ಸಿಡಬ್ಲ್ಯುನ ಹಿರಿಯ ಸಂಯೋಜಕಿ ಕಾಂಚನ್ ಖಟ್ಟರ್ ಸದಸ್ಯರಾಗಿದ್ದಾರೆ.
ಕೃತಕ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) ವಲಯದಲ್ಲಿ ಹೆಚ್ಚಿನ ಅಕ್ರಮಗಳು ನಡೆಯುತ್ತಿವೆ. ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳು, ಘನತೆ ಹಾಗೂ ಸುರಕ್ಷತೆಯನ್ನು ರಕ್ಷಿಸುವ ಉದ್ದೇಶದಿಂದ ಐವಿಎಫ್, ಎಆರ್‌ಟಿ ಹಾಗೂ ಅಂಡಾಣು ಹಾಗೂ ವೀರ್ಯಾಣು ಸಂರಕ್ಷಣಾ ಕೇಂದ್ರಗಳನ್ನು ನಿಯಂತ್ರಿಸುವ ಸಂಬಂಧ ರೂಪಿಸಿರುವ ಕಾನೂನುಗಳ ಸಮಗ್ರ ಪರಿಶೀಲನೆಯನ್ನು ತಜ್ಞರ ಸಮಿತಿಯು ನಡೆಸಲಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ಗುರುವಾರ ತಿಳಿಸಿದೆ.
ಎಲ್ಲ ಎಆರ್‌ಟಿ ಕ್ಲಿನಿಕ್‌ಗಳು ಮತ್ತು ಅಂಡಾಣು-ವೀರ್ಯಾಣು ಸಂರಕ್ಷಣಾ ಕೇಂದ್ರಗಳು ರಾಷ್ಟ್ರೀಯ ಎಆರ್‌ಟಿ ಮತ್ತು ಬಾಡಿಗೆ ತಾಯ್ತನದ ನೋಂದಣಿ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅನೇಕ ಕಾನೂನುಗಳಿದ್ದರೂ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
ಕೃತಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ 2021, ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ- 2021 ಮತ್ತು 2026ರಲ್ಲಿ ತಿದ್ದುಪಡಿ ತರಲಾದ ನಿಯಮಗಳ ಅನುಷ್ಠಾನವನ್ನು ಸಮಿತಿಯು ಪರಿಶೀಲಿಸಲಿದೆ ಎಂದು ಆಯೋಗ ತಿಳಿಸಿದೆ.

