ಲಕ್ನೋ: 1991ರ ಆರಾಧನಾ ಸ್ಥಳಗಳ ಕಾಯ್ದೆ (ವಿಶೇಷ ನಿಬಂಧನೆಗಳು) ಯು ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಮಾರ್ಪಾಡುಗೊಳಿಸುವುದನ್ನು ಮಾತ್ರ ನಿಷೇಧಿಸುತ್ತದೆ. ಆದರೆ ಜಾತ್ಯತೀತ ಹಾಗೂ ಸಾರ್ವಜನಿಕ ಉದ್ದೇಶ್ಕಾಗಿ ಅಂತಹ ಸೊತ್ತುಗಳನ್ನು ಸರಕಾರ ವಶಪಡಿಸಿಕೊಳ್ಳುವುದನ್ನು ತಡೆಯುವುದಿಲ್ಲವೆಂದು ಅಲಹಾಬಾದ್ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ.
ವಾರಣಾಸಿಯ ದಲ್ಮಾಂಡಿ ಪ್ರದೇಶ ಸುಂದರೀಕರಣ ಹಾಗೂ ರಸ್ತೆಗಳ ಅಗಲೀಕರಣವನ್ನು ಸ್ಥಗಿತಗೊಳಿಸಲು ನಿರ್ದೇಶನವನ್ನು ನೀಡುವಂತೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಜೆ.ಜೆ.ಮುನೀರ್ ಹಾಗೂ ಅರುಣ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ಶ್ರೀ ಕಾಶಿವಿಶ್ವನಾಥ ಧಾಮ ಕಾರಿಡಾರ್ ಅಭಿವೃದ್ಧಿ ಯೋಜನೆಯ ವಿಸ್ತರಣೆಯ ಅಂಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಪ್ರದೇಶದಿಂದ ತಮ್ಮನ್ನು ತೆರವುಗೊಳಿಸುವುದನ್ನು ತಡೆಯುವಂತೆ ಕೋರಿ ದಲ್ಮಾಂಡಿ ಪ್ರದೇಶದ ಅಂಗಡಿ ಮಾಲಕರು ಸೇರಿದಂತೆ ಆರು ಮಂದಿ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್‌ನ ಮೆಟ್ಟಲೇರಿದ್ದರು. ಯೋಜನೆಯ ಭಾಗವಾಗಿ ಈ ಪ್ರದೇಶದಲ್ಲಿರುವ ಆರು ಪುರಾತನ ಮಸೀದಿಗಳನ್ನು ನೆಲಸಮಗೊಳಿಸುವುದನ್ನು ಕೂಡಾ ತಡೆಯುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು.
ದಾಲ್‌ಮಂಡಿ ಪ್ರದೇಶದ ಪ್ರಸ್ತಾವಿತ ವಿಸ್ತರಣಾ ಯೋಜನೆಯು ಏಕಪಕ್ಷೀಯವಾದುದು, ಅಕ್ರಮ ಹಾಗೂ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಹಾಗೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪುಗೊಳಿಸಲಾಗಿದೆ ಎಂದು ಅರ್ಜಿದಾರರು ಆಪಾದಿಸಿದ್ದರು.
ಆದರೆ ಅರ್ಜಿದಾರರ ಆಕ್ಷೇಪವನ್ನು ವಿರೋಧಿಸಿದ ರಾಜ್ಯ ಸರಕಾರವು 1991 ಕಾಯ್ದೆಯು ವಿಸ್ತೃತವಾದ ಸಾರ್ವಜನಿಕ ಉದ್ದೇಶಗಳಿಗಾಗಿ ಆರಾಧನಾ ಸ್ಥಳವನ್ನು ವಶಪಡಿಸಿಕೊಳ್ಳುವುದನ್ನು ಸರಕಾರವು ನಿಷೇಧಿಸುವುದಿಲ್ಲ. ಭೂಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಹಾಗೂ ಪಾರದರ್ಶಕತೆಯ ಹಕ್ಕಿನಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯಾವುದೇ ಆಸ್ತಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಸರಕಾರಕ್ಕೆ ಸಾರ್ವಭೌಮ ಅಧಿಕಾರವಿದೆ.1955ರ ವಕ್ಫ್ ಕಾಯ್ದೆಯ 51 ಹಾಗೂ 91ನೇ ಸೆಕ್ಷನ್‌ಗಳು ಈ ರೀತಿಯ ಭೂಸ್ವಾಧೀನಕ್ಕೆ ಅನುಮತಿ ನೀಡುತ್ತವೆ ಎಂದು ರಾಜ್ಯ ಸರಕಾರ ವಾದಿಸಿದೆ.
ಇತ್ತಂಡಗಳ ವಾದಗಳನ್ನು ಆಲಿಸಿದ ನ್ಯಾಯಪೀಠವು, ಅರ್ಜಿದಾರರು ಕೇವಲ ಬಾಡಿಗೆದಾರರೇ ಹೊರತು, ವಿವಾದಿತ ಆಸ್ತಿಯ ಮಾಲಕರಲ್ಲ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಲು ಅವರಿಗಿರುವ ಅಧಿಕಾರವು ಸೀಮಿತವಾದುದಾಗಿದೆ ಎಂದು ಅಭಿಪ್ರಾಯಿಸಿದೆ.

