ನಿರುದ್ಯೋಗದ ಸಮಸ್ಯೆ ಮಾತ್ರವಲ್ಲದೆ ರೈತರು, ಆದಿವಾಸಿಗಳು ಮತ್ತು ಪರಿಸರವಾದಿಗಳು ಸೇರಿದಂತೆ ದೇಶದ ವಿವಿಧ ವರ್ಗದವರು ತಮ್ಮ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ.
ಏನು? ಏಕೆ? ಹೇಗೆ?
ದೆಹಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಏಕೆ ಪ್ರತಿಭಟಿಸುತ್ತಿದ್ದಾರೆ?
ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಮತ್ತು ನಿರುದ್ಯೋಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ವಿದ್ಯಾರ್ಥಿಗಳು ಮತ್ತು ಯುವಕರು 'ಕಾಕ್ರೋಚ್ ಜನತಾ ಪಾರ್ಟಿ'ಯಡಿ ಹೋರಾಟ ನಡೆಸುತ್ತಿದ್ದಾರೆ.
ರೈತರು ಮತ್ತೆ ದೆಹಲಿಯತ್ತ ಏಕೆ ಮುಖ ಮಾಡುತ್ತಿದ್ದಾರೆ?
ಭಾರತ ಮತ್ತು ಅಮೆರಿಕ ನಡುವಿನ ಕೃಷಿ ವ್ಯಾಪಾರ ಒಪ್ಪಂದದಿಂದ ದೇಶೀಯ ಮಾರುಕಟ್ಟೆ ಮತ್ತು ರೈತರ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕದಿಂದ ರೈತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಆದಿವಾಸಿಗಳು ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಏಕೆ ವಿರೋಧಿಸುತ್ತಿದ್ದಾರೆ?
ಈ ಯೋಜನೆಯಿಂದ ಸಾವಿರಾರು ಆದಿವಾಸಿಗಳು ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಸಿಗದ ಕಾರಣದಿಂದ ಅವರು ಚಿತೆಯ ಮೇಲೆ ಮಲಗುವಂತಹ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದಾರೆ.
ಉತ್ತರಾಖಂಡದಲ್ಲಿ ಪರಿಸರವಾದಿಗಳು ಕೈಗೊಂಡಿರುವ ಹೋರಾಟದ ಉದ್ದೇಶವೇನು?
ರಸ್ತೆ ವಿಸ್ತರಣೆ ಯೋಜನೆಗಾಗಿ ಸಾವಿರಾರು ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ; ಇದು ಆನೆ ಕಾರಿಡಾರ್ ಮತ್ತು ವನ್ಯಜೀವಿಗಳ ಆವಾಸಸ್ಥಾನಕ್ಕೆ ಹಾನಿಕರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜನತೆಯ ಪ್ರಮುಖ ಬೇಡಿಕೆ ಏನು?
ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ.
ಪ್ರಮುಖ ಅಂಕಿಅಂಶಗಳು
4,369ಉತ್ತರಾಖಂಡದಲ್ಲಿ ರಸ್ತೆ ಯೋಜನೆಗಾಗಿ ಕಡಿಯಲು ಉದ್ದೇಶಿಸಿದ್ದ ಮರಗಳ ಸಂಖ್ಯೆ21 ದಿನಸೊನಮ್ ವಾಂಗ್ಚುಕ್ ನಡೆಸಿದ ಉಪವಾಸ ಸತ್ಯಾಗ್ರಹದ ಅವಧಿಜುಲೈ 20ಸಂಸತ್ ಚಲೋ ಮೆರವಣಿಗೆ ನಡೆದ ದಿನಾಂಕ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನೀಟ್ ಪ್ರಶ್ನೆ ಪ್ರತಿಕೆಗೆ ಸೋರಿಕೆ ವಿರುದ್ಧದ ಅವರ ಹೋರಾಟ ಇದೀಗ ಮತ್ತೊಂದು ಮಗ್ಗಲು ತಲುಪಿದೆ. ಆದರೆ, ಸದ್ಯ ದೇಶದಲ್ಲಿ ನಡೆಯುತ್ತಿರುವುದು ಇದೊಂದೇ ಹೋರಾಟವಲ್ಲ. ಆದಿವಾಸಿಗಳು, ರೈತರು, ಪರಿಸರವಾದಿಗಳೂ ಬೀದಿಗೆ ಇಳಿದಿದ್ದಾರೆ. ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ.
ಮತ್ತೆ ದೆಹಲಿಯತ್ತ ರೈತರ ದಂಡು

ಐದು ವರ್ಷಗಳ ಹಿಂದೆ ಕೇಂದ್ರದ ಮೂರು ಕೃಷಿ ಕಾಯ್ದೆ ವಿರುದ್ಧ ಹೋರಾಡಿ ಜಯಿಸಿದ್ದ ರೈತರು ಇದೀಗ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜು ಮಾಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿರುವ ರೈತ ವಲಯ, ಒಪ್ಪಂದದ ಮಾತುಕತೆಗಳು ಅಂತಿಮ ಹಂತ ತಲಪುತ್ತಿದ್ದಂತೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ರೈತರ ಭಯವೇನು?: ಅಮೆರಿಕದಲ್ಲಿ ಕೃಷಿಗೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡಲಾಗುತ್ತದೆ. ಅಲ್ಲಿ ಉತ್ಪಾದನೆಯಾಗುವ ಜೋಳ, ಸೋಯಾಬೀನ್, ಹತ್ತಿ, ಹಾಲು ಉತ್ಪನ್ನಗಳು ಮತ್ತು ಇತರ ಕೃಷಿ ಸರಕುಗಳು ಕಡಿಮೆ ಬೆಲೆಗೆ ಜಾಗತಿಕ ಮಾರುಕಟ್ಟೆಗೆ ಬರುತ್ತವೆ. ಇಂತಹ ಉತ್ಪನ್ನಗಳಿಗೆ ಭಾರತದಲ್ಲಿ ಸುಂಕ ಕಡಿಮೆಯಾದರೆ ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಅದೇ ಬೆಲೆಯಲ್ಲಿ ಮಾರಾಟ ಮಾಡುವುದು ಕಷ್ಟವಾಗಬಹುದು ಎಂಬ ಆತಂಕ ರೈತರಲ್ಲಿದೆ.
ಪ್ರತಿಭಟನೆ ಆರಂಭ: 'ದೇಶ್ ಬಚಾವೋ ಮೋರ್ಚಾ' ಹೆಸರಿನಲ್ಲಿ ಪಂಜಾಬ್‌ನ ವಿವಿಧ ರೈತ ಸಂಘಟನೆಗಳು ದೆಹಲಿಯತ್ತ ಮೆರವಣಿಗೆ ಆರಂಭಿಸಿದ್ದು, ದೆಹಲಿಯ ಕಿಸಾನ್ ಘಾಟ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಂಡಿವೆ. ಆದರೆ, ಹರಿಯಾಣದ ಶಂಭು ಗಡಿಯಲ್ಲಿ ರೈತರನ್ನು ತಡೆದ ಭದ್ರತಾ ಪಡೆಗಳು ಬ್ಯಾರಿಕೇಡ್‌ಗಳನ್ನು ಅಳವಡಿಸಿವೆ. ಈ ಕ್ರಮದ ವಿರುದ್ಧ ಆಕ್ರೋಶಗೊಂಡಿರುವ ರೈತರು ಅಲ್ಲಿಯೇ ಧರಣಿ ಆರಂಭಿಸಿದ್ದಾರೆ.
ನದಿ ಜೋಡಣೆ ವಿರುದ್ಧ ಸಿಡಿದೆದ್ದ ಆದಿವಾಸಿಗಳು

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಬುಂದೇಲ್‌ಖಂಡ್ ಪ್ರದೇಶದಲ್ಲಿ ನೀರಿನ ಕೊರತೆಯನ್ನು ನಿವಾರಿಸುವುದು, ಕೃಷಿಗೆ ನೀರು ಒದಗಿಸುವುದು ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಆದರೆ ಇದೇ ಯೋಜನೆ ಸಾವಿರಾರು ಆದಿವಾಸಿ ಕುಟುಂಬಗಳ ಬದುಕಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ
ಭೂಮಿ ಕಳೆದುಕೊಳ್ಳುವ ಭೀತಿ: ಯೋಜನೆಯ ಭಾಗವಾಗಿ ಅಣೆಕಟ್ಟು, ಕಾಲುವೆಗಳು ಮತ್ತು ಇತರೆ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಅನೇಕ ಆದಿವಾಸಿ ಗ್ರಾಮಗಳು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿಭಟನಾಕಾರರ ಪ್ರಕಾರ, ಸೂಕ್ತ ಪರಿಹಾರಧನ, ಪುನರ್ವಸತಿ ಮತ್ತು ಜೀವನೋಪಾಯದ ಭರವಸೆ ಇನ್ನೂ ಸಿಕ್ಕಿಲ್ಲ. ಸರ್ಕಾರ ನೀಡಿದ್ದ ಭರವಸೆಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ.
ಚಿತೆ ಮೇಲೆ ಮಲಗಿ ಪ್ರತಿಭಟನೆ: ಈ ಯೋಜನೆಯನ್ನು ವಿರೋಧಿಸಿ ನೂರಾರು ಆದಿವಾಸಿ ಮಹಿಳೆಯರು ಚಿತೆಯ ಮೇಲೆ ಮಲಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ 'ಭೂಮಿ ಕಳೆದುಕೊಳ್ಳುವುದಕ್ಕಿಂತ ಸಾವು ಮೇಲು' ಎಂಬ ಸಂದೇಶವನ್ನು ನೀಡಿದ್ದಾರೆ. ಕೆಲವರು ಕುತ್ತಿಗೆಗೆ ನೇಣು ಬಿಗಿದುಕೊಂಡು, ಇನ್ನು ಕೆಲವರು ನದಿಯಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸಿದ್ದಾರೆ.
ಉತ್ತರಾಖಂಡ: ಪರಿಸರವಾದಿಗಳಿಂದ ಹೋರಾಟ

ಉತ್ತರಾಖಂಡ ಸರ್ಕಾರವು ಋಷಿಕೇಶ್-ಭಾನಿಯಾವಾಲಾ ರಸ್ತೆ ವಿಸ್ತರಣೆ ಯೋಜನೆಗಾಗಿ ಸುಮಾರು 4,369 ಮರಗಳನ್ನು ಕಡಿಯುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸ್ಥಳೀಯ ನಿವಾಸಿಗಳು, ಪರಿಸರ ಹೋರಾಟಗಾರರು ಮತ್ತು ಸಾಮಾಜಿಕ ಸಂಘಟನೆಗಳು ಒಂದು ವಾರಕ್ಕೂ ಹೆಚ್ಚು ಕಾಲ ನಿರಂತರ ಪ್ರತಿಭಟನೆ ನಡೆಸಿದ ನಂತರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ವನ್ಯಜೀವಿಗಳಿಗೆ ತೊಂದರೆ: ರಸ್ತೆ ವಿಸ್ತರಣೆಗಾಗಿ ಶಿವಾಲಿಕ್ ಅರಣ್ಯ ಪ್ರದೇಶದಲ್ಲಿರುವ ಸಾವಿರಾರು ಮರಗಳನ್ನು ಕಡಿಯುವ ಯೋಜನೆ ರೂಪಿಸಲಾಗಿತ್ತು. ಹೋರಾಟಗಾರರ ಪ್ರಕಾರ, ಈ ಪ್ರದೇಶವು ಕೇವಲ ಅರಣ್ಯವಲ್ಲ, ಇದು ಆನೆ ಕಾರಿಡಾರ್ ಆಗಿದೆ. ಅಲ್ಲದೇ ಹಲವು ವನ್ಯಜೀವಿಗಳ ಪ್ರಮುಖ ವಾಸಸ್ಥಾನವಾಗಿದೆ. ಸಾವಿರಾರು ಮರಗಳ ನಾಶದಿಂದ ಪರಿಸರ ಸಮತೋಲನಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂಬ ಬಗ್ಗೆಯೂ ಅವರು ಎಚ್ಚರಿಸಿದ್ದರು.
ಹೋರಾಟ ಮುಗಿದಿಲ್ಲ: ಮರಗಳ ಹನನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರೂ, ರಸ್ತೆ ಯೋಜನೆ ಸಂಪೂರ್ಣ ರದ್ದಾಗಿಲ್ಲ. ರಸ್ತೆ ಯೋಜನೆಗೆ ಮರಗಳ ಮಾರಣಹೋಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಯೋಜನೆಗೆ ಕಾನೂನುಬದ್ಧ ಅಡ್ಡಿಯನ್ನು ತೊಡೆದು ಹಾಕಿದೆ. ಆದ್ದರಿಂದ ಪರಿಸರವಾದಿಗಳು ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟ

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಒತ್ತಾಯಿಸಿ ನ್ಯಾಷನಲ್ ಕಾನ್ಫರೆನ್ಸ್ ಸೋಮವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು.
ರಾಜ್ಯಸ್ಥಾನಮಾನ ಮರುಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬೇಡಿಕೆ ನೆರವೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಜುಲೈ 20ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುವುದಾಗಿ ಪಕ್ಷವು ಮೊದಲು ನಿರ್ಧರಿಸಿತ್ತು. ಆದರೆ, ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆ ತೀವ್ರವಾಗಿರುವುದನ್ನು ಗಮನಿಸಿದ ಪಕ್ಷವು, ತನ್ನ ಪ್ರತಿಭಟನೆಯನ್ನು ಅಲ್ಲಿಂದ ಮಾವಲಂಕರ್ ಹಾಲ್‌ಗೆ ಸ್ಥಳಾಂತರಿಸಿತ್ತು.
ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್'ಗಳ ಕೂಗು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿ ಯುವಕರನ್ನು 'ಜಿರಳೆಗಳು' ಎಂದು ಕರೆದದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಆ ಪದವನ್ನೇ ಪ್ರತಿರೋಧದ ಸಂಕೇತವನ್ನಾಗಿ ಮಾಡಿಕೊಂಡ ಅಭಿಜೀತ್ ದೀಪ್ಕೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಘಟನೆಯನ್ನು ಹುಟ್ಟು ಹಾಕಿದರು. ಸದ್ಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಂಘಟನೆ ಹೋರಾಟ ನಡೆಸುತ್ತಿದೆ.
ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾದ 'ಕಾಕ್ರೋಚ್'ಗಳ ಪ್ರತಿಭಟನೆ ನಂತರ ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ವಿಸ್ತರಿಸಿತು. ವಿದ್ಯಾರ್ಥಿಗಳು, ಪೋಷಕರು, ಉದ್ಯೋಗಾಕಾಂಕ್ಷಿಗಳು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚುಕ್ ಅವರು ಪ್ರತಿಭಟನೆ ಬೆಂಬಲಿಸಿ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಜುಲೈ 20ರಂದು ಸಂಸತ್ ಚಲೋ ಮೆರವಣಿಗೆ ನಡೆಸಿದ್ದು, ಇದೀಗ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

