ನವದೆಹಲಿ: ಪರೀಕ್ಷಾ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯು ಗುರುವಾರ 20ನೇ ದಿನಕ್ಕೆ ಕಾಲಿಟ್ಟಿದೆ.
ಅದೇ ವೇಳೆ, ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗುತ್ತಿದ್ದರೂ, ಪ್ರತಿಭಟನಾ ಸ್ಥಳಕ್ಕೆ ಪ್ಲಾಸ್ಟಿಕ್ ಹಾಳೆಗಳನ್ನು ತರಲು ದಿಲ್ಲಿ ಪೊಲೀಸರು ಬಿಡುತ್ತಿಲ್ಲ ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಮಳೆಯಲ್ಲಿ ಒದ್ದೆಯಾಗುತ್ತಿದ್ದರೆ, ಪೊಲೀಸ್ ಸಿಬ್ಬಂದಿ ಮಾತ್ರ ಮಳೆಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ ಎಂದು 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ದೀಪ್ಕೆ ಆರೋಪಿಸಿದ್ದಾರೆ.
ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಈ ವಿಷಯದಲ್ಲಿ ಸರಕಾರ ಹೆಚ್ಚಿನ ಉತ್ತರದಾಯಿತ್ವದಿಂದ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ದಿಲ್ಲಿಯಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದು ಪ್ರತಿಭಟನಾ ಸ್ಥಳದಲ್ಲಿರುವ ವಿದ್ಯಾರ್ಥಿಗಳು ನೆನೆದು ಒದ್ದೆಯಾಗಿದ್ದಾರೆ ಹಾಗೂ ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ದೀಪ್ಕೆ ಹೇಳಿದ್ದಾರೆ.
''ನಾವು ಸಂಪೂರ್ಣವಾಗಿ ನೆನೆದು ಒದ್ದೆಯಾಗಿದ್ದೇವೆ. ಎಲ್ಲ ವಿದ್ಯಾರ್ಥಿಗಳೂ ಒದ್ದೆಯಾಗಿದ್ದಾರೆ. ನಮ್ಮ ಬಟ್ಟೆಗಳು ತೊಯ್ದುಹೋಗಿವೆ. ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. (ಒಬ್ಬ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ತೋರಿಸಿ) ದಯವಿಟ್ಟು ಎಲ್ಲರಿಗೂ ಸರ್ ಅವರ ಸಮವಸ್ತ್ರ ತೋರಿಸಿ. ಅದು ಬಿಳುಪಿನಿಂದ ಹೊಳೆಯುತ್ತಿದೆ. ದಯವಿಟ್ಟು ಎಲ್ಲರಿಗೂ ಸರ್ ಅವರ ಶೂಗಳನ್ನು ತೋರಿಸಿ. ಅವರ ಸಮವಸ್ತ್ರ ಅಥವಾ ಶೂಗಳ ಮೇಲೆ ಒಂದು ಹನಿ ಮಳೆಯೂ ಬಿದ್ದಿಲ್ಲ. ಜನರ ಕಾಲುಗಳಿಗೆ ಹಾನಿಯಾಗಿದೆ. ಆದರೆ ಸರ್ ಅವರ ಸಮವಸ್ತ್ರ ಎಷ್ಟು ಕಲೆರಹಿತವಾಗಿದೆ ಮತ್ತು ಪ್ರಕಾಶಮಾನವಾಗಿದೆ ನೋಡಿ. ಆದರೆ ಒಳಗಡೆ ಪ್ಲಾಸ್ಟಿಕ್ ಹಾಳೆ ತರಲು ಬಿಡುವುದಿಲ್ಲ ಎಂದು ಸರ್ ಹೇಳುತ್ತಿದ್ದಾರೆ. ಮೇಲಿಂದ ಆದೇಶ ಬರುವವರೆಗೆ ವಿದ್ಯಾರ್ಥಿಗಳು ಮಳೆಯಲ್ಲೇ ನೆನೆಯಲಿ ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳು ನೆನೆದರೆ ಪರವಾಗಿಲ್ಲವೇ? ವಿದ್ಯಾರ್ಥಿಗಳು ಕಾಯಿಲೆ ಬಿದ್ದರೆ ಓಕೆನಾ?'' ಎಂದು ದೀಪ್ಕೆ ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ.
ಸೋನಮ್ ವಾಂಗ್ಚುಕ್ ಆರೋಗ್ಯ ಕ್ಷೀಣ
ಈ ನಡುವೆ, ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಬುಧವಾರ ಮತ್ತಷ್ಟು ಕ್ಷೀಣಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
11 ದಿನಗಳ ಹಿಂದೆ ಉಪವಾಸ ಆರಂಭಿಸಿದ ನಂತರ ವಾಂಗ್ಚುಕ್ ಏಳು ಕೆಜಿಗಿಂತ ಹೆಚ್ಚು ತೂಕ ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ತೂಕ 59.40 ಕೆಜಿಗೆ ಇಳಿದಿದೆ ಹಾಗೂ ರಕ್ತದೊತ್ತಡವು ಕುಳಿತಿರುವ ಸ್ಥಿತಿಯಲ್ಲಿ 103/68 ಎಚ್‌ಜಿ ಮತ್ತು ಮಲಗಿರುವ ಸ್ಥಿತಿಯಲ್ಲಿ 111/73 ಎಚ್‌ಜಿ ದಾಖಲಾಗಿದೆ.
ಅದೇ ವೇಳೆ, ಪ್ರತಿಭಟನಾ ಸ್ಥಳದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿರುವ ಎಐಎಸ್‌ಎ ಸದಸ್ಯ ಹೃಷಿಕೇಶ್ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

