ನವದೆಹಲಿ: ಲಡಾಖ್‌ನ ಪ್ರಸಿದ್ಧ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಎರಡು ವಾರಗಳನ್ನು ಪೂರೈಸಿದೆ. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ತೀವ್ರ ಕಳವಳ ಮೂಡಿಸಿದೆ.
ಹಿಮಾಲಯ ಭಾಗದ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪರಿಸರ ಕಾಳಜಿಯ ಕೆಲಸಗಳಿಗಾಗಿ 59 ವರ್ಷದ ವಾಂಗ್ಚುಕ್ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಇವರ ಕುರಿತ 2009 ರ ಸೂಪರ್ ಹಿಟ್ ಬಾಲಿವುಡ್ ಸಿನಿಮಾ '3 ಈಡಿಯಟ್ಸ್'ಗೆ ಪ್ರೇರಣೆಯಾಗಿತ್ತು.
ನೀಟ್ (NEET-UG) 2026 ಪರೀಕ್ಷಾ ಅಕ್ರಮ ಮತ್ತು ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯನ್ನು ಬೆಂಬಲಿಸಿ ವಾಂಗ್‌ಚುಕ್ ದಿಲ್ಲಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಸೋನಮ್ ವಾಂಗ್ಚುಕ್ ಜಂತರ್ ಮಂತರ್ ಉಪವಾಸ:
ಲಡಾಖ್ ಪ್ರಾಂತ್ಯದ ಪರಿಸರ ರಕ್ಷಣೆ ಮತ್ತು ಅಲ್ಲಿನ ಜನರಿಗೆ ಸಂವಿಧಾನಾತ್ಮಕ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ವಾಂಗ್‌ಚುಕ್ ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಈ ಹಿಂದೆ ತಮ್ಮ ತವರು ನೆಲದ ಹಿತಾಸಕ್ತಿಗಾಗಿಯೇ ಹಲವು ಪ್ರತಿಭಟನೆಗಳನ್ನು ನಡೆಸಿದ್ದ ಅವರು, ಈಗ ವಿದ್ಯಾರ್ಥಿಗಳ ಹಿತಕ್ಕಾಗಿ ದಿಲ್ಲಿಯಲ್ಲಿ ಹೋರಾಟಕ್ಕೆ ಧುಮುಕಿದ್ದಾರೆ.
ಲಡಾಖ್ ಪ್ರಾಂತ್ಯದ ಪರಿಸರ ರಕ್ಷಣೆ ಮತ್ತು ಸಂವಿಧಾನಾತ್ಮಕ ಭದ್ರತೆಗಾಗಿ ಸೋನಮ್ ವಾಂಗ್ಚುಕ್ ಹಲವು ವರ್ಷಗಳಿಂದ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಾ ಬಂದಿದ್ದಾರೆ. ಜಂತರ್ ಮಂತರ್‌ನಲ್ಲಿ ಗುರುವಾರ ಅವರ ಹೋರಾಟ 19ನೇ ದಿನಕ್ಕೆ ಕಾಲಿಟ್ಟಿದ್ದು, ತೀರಾ ಕೃಶವಾಗಿ ಕಾಣಿಸುತ್ತಿರುವ ಅವರು ತಮ್ಮ ಇತ್ತೀಚಿನ ವಿಡಿಯೊ ಸಂದೇಶದಲ್ಲಿ, "ನನ್ನ ಆರೋಗ್ಯ ಸದ್ಯಕ್ಕೆ ಅಷ್ಟೊಂದು ಚೆನ್ನಾಗಿಲ್ಲ, ಆದರೆ ತೀರಾ ಕೆಟ್ಟುಹೋಗಿಲ್ಲ" ಎಂದಿದ್ದಾರೆ.
"ಸದ್ಯ ನಡೆಸಲಾಗಿರುವ ವೈದ್ಯಕೀಯ ಪರೀಕ್ಷೆಗಳಲ್ಲಿ ವಾಂಗ್ಚುಕ್ ಅವರ ಆರೋಗ್ಯ ವರದಿಗಳು ಸಹಜ ಸ್ಥಿತಿಯಲ್ಲಿವೆ. ಇಸಿಜಿ ಕೂಡ ನಾರ್ಮಲ್ ಇರುವುದರಿಂದ ನಾನು ಇನ್ನು ಕೆಲವು ದಿನಗಳ ಕಾಲ ಹೋರಾಟ ಮುಂದುವರಿಸಬಲ್ಲೆ. ದೇಹ ಮತ್ತು ಸ್ನಾಯುಗಳು ದುರ್ಬಲಗೊಂಡಿದ್ದರೂ, ನನ್ನ ಹೃದಯ ಮತ್ತು ಛಲ ಗಟ್ಟಿಯಾಗಿದೆ" ಎಂದು ವಾಂಗ್ಚುಕ್ ಹೇಳಿದ್ದಾರೆ.
ಇದೇ ವೇಳೆ, ಉಪವಾಸ ಕೈಬಿಡುವಂತೆ ತಮಗೆ ಮನವಿ ಮಾಡುತ್ತಿರುವ ಸಾರ್ವಜನಿಕರಲ್ಲಿ ಅವರು ಧೃತಿಗೆಡದಂತೆ ಕೋರಿದ್ದಾರೆ. ಸತ್ಯಾಗ್ರಹ ನಿಲ್ಲಿಸುವ ಬದಲು ಜುಲೈ 20 ರಂದು ಹಮ್ಮಿಕೊಂಡಿರುವ 'ಸಂಸತ್ ಚಲೋ' ಚಳವಳಿಗೆ ಕೈಜೋಡಿಸುವಂತೆ ಅವರು ಕರೆ ನೀಡಿದ್ದಾರೆ.
24 ಗಂಟೆಗಳ ವೈದ್ಯಕೀಯ ನಿಗಾದಲ್ಲಿ ವಾಂಗ್ಚುಕ್:
ಕಾಕ್ರೋಚ್ ಜನತಾ ಪಾರ್ಟಿ ಬಿಡುಗಡೆ ಮಾಡಿರುವ ಇತ್ತೀಚಿನ ವೈದ್ಯಕೀಯ ವರದಿಯ ಪ್ರಕಾರ, ವಾಂಗ್ಚುಕ್ ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿದ್ದು, 24 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 400 ಗ್ರಾಂ ತೂಕ ಇಳಿಕೆಯಾಗಿದ್ದು, ಒಟ್ಟಾರೆ ಉಪವಾಸ ಆರಂಭಿಸಿದ ದಿನದಿಂದ ಇದುವರೆಗೆ ಅವರ ತೂಕ ಸುಮಾರು 8.9 ಕೆ.ಜಿ ಕಡಿಮೆಯಾಗಿದೆ. ಪ್ರಸ್ತುತ ಅವರು 57.15 ಕೆ.ಜಿ ತೂಕ ಹೊಂದಿದ್ದಾರೆ.
►ವಾಂಗ್ಚುಕ್ ನಡೆಸಿದ ಪ್ರಮುಖ ಉಪವಾಸ ಸತ್ಯಾಗ್ರಹಗಳು:
- ಜನವರಿ 2023
ಅವಧಿ: 5 ದಿನಗಳ ಉಪವಾಸ
ಕಾರಣ: ಲಡಾಖ್‌ನಲ್ಲಿ ಬೃಹತ್ ಕೈಗಾರಿಕೀಕರಣ ಮತ್ತು ಗಣಿಗಾರಿಕೆಯನ್ನು ವಿರೋಧಿಸಿ ಹಾಗೂ ಈ ಪ್ರದೇಶಕ್ಕೆ ಸಂವಿಧಾನಾತ್ಮಕ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಫಲಿತಾಂಶ: ಈ ಹೋರಾಟವು ಲಡಾಖ್‌ನ ಪರಿಸರ ಕಾಳಜಿಯತ್ತ ದೇಶದ ಗಮನ ಸೆಳೆಯಿತು. ಕೇಂದ್ರ ಸರ್ಕಾರದೊಂದಿಗೆ ಮತ್ತೆ ಮಾತುಕತೆ ಆರಂಭವಾಗಲು ದಾರಿಯಾಯಿತು.
- ಮಾರ್ಚ್ 6-26, 2024
ಅವಧಿ: 21 ದಿನಗಳ ಉಪವಾಸ ಸತ್ಯಾಗ್ರಹ
ಕಾರಣ: ಕೇಂದ್ರ ಸರ್ಕಾರದೊಂದಿಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ, ಸಂವಿಧಾನದ 6ನೇ ಅನುಸೂಚಿ ಅಡಿ ರಕ್ಷಣೆ ಮತ್ತು ಸೂಕ್ಷ್ಮ ಹಿಮಾಲಯ ಪರಿಸರ ವ್ಯವಸ್ಥೆಯ ರಕ್ಷಣೆಗಾಗಿ ಒತ್ತಾಯಿಸಿದ್ದರು.
ಫಲಿತಾಂಶ: ಮಾರ್ಚ್ 26 ರಂದು ಉಪವಾಸ ಕೊನೆಗೊಳಿಸಿದ ಅವರು, ಸರ್ಕಾರದ ಮೇಲೆ ಒತ್ತಡ ಹೇರಲು 'ದೆಹಲಿ ಚಲೋ' ಪಾದಯಾತ್ರೆ ಘೋಷಿಸಿದರು. ಈ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ.
- ಸೆಪ್ಟೆಂಬರ್ 2025
ಅವಧಿ: 35 ದಿನಗಳ ಸರದಿ ಉಪವಾಸ ಸತ್ಯಾಗ್ರಹ
ಕಾರಣ: ಲಡಾಖ್‌ಗೆ ರಾಜ್ಯದ ಸ್ಥಾನಮಾನ, 6ನೇ ಅನುಸೂಚಿಯ ಮಾನ್ಯತೆ ಮತ್ತು ಸಂವಿಧಾನಾತ್ಮಕ ಭರವಸೆಗಳಿಗಾಗಿ ಒತ್ತಾಯಿಸಿ ಲೆಹ್ ಅಪೆಕ್ಸ್ ಬಾಡಿ (ಐಂಃ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಏಆಂ) ನಡೆಸಿದ ಹೋರಾಟಕ್ಕೆ ಬೆಂಬಲ ನೀಡಿ ಉಪವಾಸ ಕೂತಿದ್ದರು.
- 2026 ಜೂನ್ 28ರಿಂದ ಈಗಲೂ ಮುಂದುವರಿದಿದೆ
ಅವಧಿ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ಕಾರಣ: ನೀಟ್ 2026 ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (ಅಎP) ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಇವರು ಜೂನ್ 28 ರಿಂದ ಬೆಂಬಲಿಸುತ್ತಿದ್ದಾರೆ.
ಫಲಿತಾಂಶ: ಗುರುವಾರಕ್ಕೆ ಇವರ ಉಪವಾಸ ಸತ್ಯಾಗ್ರಹ 19ನೇ ದಿನಕ್ಕೆ ಕಾಲಿಟ್ಟಿದೆ. ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಆತಂಕ ಮೂಡಿಸಿದೆ. ಮತ್ತೊಂದೆಡೆ ವಿರೋಧ ಪಕ್ಷದ ನಾಯಕರು, ಬಾಲಿವುಡ್ ಗಣ್ಯರು ಹಾಗೂ ನಾಗರಿಕ ಸಮಾಜದಿಂದ ಇವರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.
►ಯಾರು ಈ ಸೋನಮ್ ವಾಂಗ್ಚುಕ್?
ಲಡಾಖ್ ಮೂಲದ ಸೋನಮ್ ವಾಂಗ್ಚುಕ್ ಅವರು ಖ್ಯಾತ ಇಂಜಿನಿಯರ್, ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ಸುಧಾರಕರಾಗಿದ್ದಾರೆ. ಲಡಾಖ್‌ನಲ್ಲಿ 'ಸೆಕ್ಮೋಲ್' (Sಇಅಒಔಐ) ಸಂಸ್ಥೆಯ ಸ್ಥಾಪನೆ ಹಾಗೂ ಕೃತಕ ನೀರ್ಗಲ್ಲು ತಂತ್ರಜ್ಞಾನವಾದ 'ಐಸ್ ಸ್ತೂಪ' (Iಛಿe Sಣuಠಿಚಿ) ಸಂಶೋಧನೆಗಾಗಿ ಇವರು ಜಾಗತಿಕವಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅಮೀರ್ ಖಾನ್ ನಟನೆಯ ಸೂಪರ್ ಹಿಟ್ ಬಾಲಿವುಡ್ ಸಿನಿಮಾ '3 ಈಡಿಯಟ್ಸ್' ಚಿತ್ರದ ಮುಖ್ಯ ಪಾತ್ರ 'ಫುನ್ಸುಕ್ ವಾಂಗ್ಡು' ಸೃಷ್ಟಿಗೆ ಇವರೇ ನಿಜವಾದ ಪ್ರೇರಣೆ.
ವಾಂಗ್ಚುಕ್ ಅವರು ಲಡಾಖ್ ಪ್ರಾಂತ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮತ್ತು ಅಲ್ಲಿನ ಯುವಜನರಿಗೆ ಪ್ರಾಯೋಗಿಕ ಹಾಗೂ ಸುಸ್ಥಿರ ಜೀವನ ಕೌಶಲಗಳನ್ನು ಕಲಿಸುವ ಉದ್ದೇಶದಿಂದ 1988 ರಲ್ಲಿ 'ಸೆಕ್ಮೋಲ್' ಸಂಸ್ಥೆಯನ್ನು ಸ್ಥಾಪಿಸಿದರು.
ನದಿಯಲ್ಲಿ ಹರಿದು ವ್ಯರ್ಥವಾಗುವ ನೀರನ್ನು ಚಳಿಗಾಲದಲ್ಲಿ ಶೇಖರಿಸಿ, ಎತ್ತರವಾದ ಶಂಕು ಆಕಾರದ ಹಿಮದ ಗೋಪುರಗಳನ್ನಾಗಿ ಪರಿವರ್ತಿಸುವ 'ಐಸ್ ಸ್ತೂಪ' ಯೋಜನೆಯನ್ನು ಇವರು ರೂಪಿಸಿದ್ದಾರೆ. ಈ ತಂತ್ರಜ್ಞಾನವು ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ವಸಂತಕಾಲದ ತೀವ್ರ ನೀರಿನ ಅಭಾವದ ಸಮಯದಲ್ಲಿ ಕೃಷಿ ನೀರಾವರಿಗೆ ಪ್ರಮುಖ ಆಧಾರವಾಗಿದೆ.
►ಹೋರಾಟ ಆರಂಭವಾಗಿದ್ದು ಹೇಗೆ?
ನೀಟ್ ಯುಜಿ 2026 ಪರೀಕ್ಷಾ ಅಕ್ರಮ ಮತ್ತು ಪತ್ರಿಕೆ ಸೋರಿಕೆ ಹಗರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಅಭಿಜೀತ್ ದಿಪ್ಕೆ ನೇತೃತ್ವದ ಯುವ ಪೀಳಿಗೆಯ (ಉeಟಿ Z) ವ್ಯಂಗ್ಯಾತ್ಮಕ ರಾಜಕೀಯ ಚಳವಳಿ 'ಕಾಕ್ರೋಚ್ ಜನತಾ ಪಾರ್ಟಿ' ಮುಂಚೂಣಿಗೆ ಬಂದಿತು.
ಆರಂಭದಲ್ಲಿ ಪರೀಕ್ಷಾ ಪತ್ರಿಕೆ ಸೋರಿಕೆ ವಿರುದ್ಧ ಮಾತ್ರ ಧ್ವನಿ ಎತ್ತಿದ್ದ ಈ ಚಳವಳಿ, ನಂತರ ದೇಶದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಒತ್ತಾಯಿಸುವ ಬೃಹತ್ ಅಭಿಯಾನವಾಗಿ ರೂಪಾಂತರಗೊಂಡಿತು. ಈ ಪರೀಕ್ಷಾ ಗೊಂದಲಗಳು ದೇಶದಲ್ಲಿ ತೀವ್ರ ಮಾನವೀಯ ಬಿಕ್ಕಟ್ಟನ್ನೂ ಸೃಷ್ಟಿಸಿದವು. ಮೇ 12 ರಂದು ನೀಟ್ ಪರೀಕ್ಷೆ ರದ್ದಾದ ದಿನದಿಂದ ಹಿಡಿದು ಜೂನ್ 21 ರ ಮರುಪರೀಕ್ಷೆಯ ನಡುವಿನ ಅವಧಿಯಲ್ಲಿ, ದೇಶಾದ್ಯಂತ ಕನಿಷ್ಠ 12 ಪರೀಕ್ಷಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ನಡೆಸಿದ ತನಿಖೆ ಬಹಿರಂಗಪಡಿಸಿದೆ. ಪ್ರತಿ ಪ್ರಕರಣದ ಹಿನ್ನೆಲೆ ಭಿನ್ನವಾಗಿದ್ದರೂ, ಈ ಸಾವುಗಳು ಪರೀಕ್ಷಾ ಗೊಂದಲದ ನಡುವೆ ವಿದ್ಯಾರ್ಥಿಗಳು ಅನುಭವಿಸಿದ ತೀವ್ರ ಮಾನಸಿಕ ಒತ್ತಡ ಮತ್ತು ಅನಿಶ್ಚಿತತೆಗೆ ಸಾಕ್ಷಿಯಾಗಿದ್ದವು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಿಸರ್ಜನೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಗ್ರ ಸುಧಾರಣೆ ಹಾಗೂ ಈ ವಿವಾದದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಸಿಜೆಪಿ ಒತ್ತಾಯಿಸಿದೆ. ಈ ಆನ್‌ಲೈನ್ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಬೆಂಬಲ ಗಳಿಸುವ ಮೂಲಕ ದೇಶದ ಅತ್ಯಂತ ಪ್ರಮುಖ ಯುವ ಹೋರಾಟವಾಗಿ ಮಾರ್ಪಟ್ಟಿದೆ.
►ಸೋನಮ್ ವಾಂಗ್ಚುಕ್ ಉಪವಾಸ ಕೂತಿರುವುದು ಏಕೆ?
ಜೂನ್ 28 ರಂದು ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಈ ಚಳವಳಿಗೆ ಕೈಜೋಡಿಸಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಉಪವಾಸ ಆರಂಭಿಸುವ ಮುನ್ನ ವಾಂಗ್ಚುಕ್ ಮತ್ತು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದರು. ತಾವು ಗಾಂಧಿ ಅವರ ಅಹಿಂಸಾತ್ಮಕ ಹೋರಾಟದ ತತ್ವಗಳನ್ನು ಅನುಸರಿಸುತ್ತಿರುವುದಾಗಿ ಹೇಳಿದ ವಾಂಗ್‌ಚುಕ್, ಈ ಸತ್ಯಾಗ್ರಹವು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರವನ್ನು ಪ್ರೇರೇಪಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಸರ್ಕಾರವು ಚಳವಳಿಗಾರರೊಂದಿಗೆ ಮಾತುಕತೆಗೆ ಒಪ್ಪುವವರೆಗೂ ತಮ್ಮ ಉಪವಾಸ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಸರ್ಕಾರದ ಕಡೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ಜುಲೈ 15 ರಂದು ಸಿಜೆಪಿ ಬಿಡುಗಡೆ ಮಾಡಿರುವ ವೈದ್ಯಕೀಯ ವರದಿಯ ಪ್ರಕಾರ, ವಾಂಗ್ಚುಕ್ ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿದ್ದು, 24 ಗಂಟೆಗಳ ಕಾಲ ವೈದ್ಯಕೀಯ ನಿಗಾದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 400 ಗ್ರಾಂ ತೂಕ ಇಳಿಕೆಯಾಗಿದ್ದು, ಒಟ್ಟಾರೆ ತೂಕ 57.15 ಕೆ.ಜಿಗೆ ಕುಸಿದಿದೆ. ಉಪವಾಸ ಆರಂಭವಾದ ದಿನದಿಂದ ಇದುವರೆಗೆ ಅವರ ದೇಹದ ತೂಕ ಒಟ್ಟು 8.9 ಕೆ.ಜಿ ಕಡಿಮೆಯಾಗಿದೆ. ಸದ್ಯ ಅವರ ರಕ್ತದೊತ್ತಡ (BP) 105/76 mmಊg, ರಕ್ತದಲ್ಲಿನ ಸಕ್ಕರೆ ಪ್ರಮಾಣ 80 mg/ಜಐ ಮತ್ತು ಆಮ್ಲಜನಕದ ಮಟ್ಟ ಶೇ. 97 ರಷ್ಟಿದ್ದು, ನಿರ್ಜಲೀಕರಣದ ಮಟ್ಟ ನಿಯಂತ್ರಣದಲ್ಲಿದೆ.
ಇವರೊಂದಿಗೆ ಇನ್ನೂ ಹಲವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದು, ಅವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
►ಪ್ರಸ್ತುತ ವಿದ್ಯಮಾನ ಏನು ?
ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದರಿಂದ ಉಪವಾಸ ಕೈಬಿಡುವಂತೆ ಆಯೋಜಕರು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. ಅಭಿಜೀತ್ ದಿಪ್ಕೆ ನೀಡಿರುವ ಮಾಹಿತಿ ಪ್ರಕಾರ, ವಾಂಗ್ಚುಕ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದು, ಕೇಂದ್ರ ಸರ್ಕಾರವು ಚಳವಳಿಯ ಬೇಡಿಕೆಗಳಿಗೆ ಸ್ಪಂದಿಸುವವರೆಗೆ ಹೋರಾಟ ಮುಂದುವರಿಸಲಿದ್ದಾರೆ.
ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡುಬರದ ಹಿನ್ನೆಲೆಯಲ್ಲಿ, ಈ ವಿವಾದವೀಗ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ.
ವಾಂಗ್ಚುಕ್ ಅವರ ಜೀವಕ್ಕೆ ತಕ್ಷಣದ ಅಪಾಯವಿರುವುದರಿಂದ ತುರ್ತು ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿದೆ ಎಂದು ವಾದಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ರಾಕೇಶ್ ಕುಮಾರ್ ಸೈನಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ವ್ಯಕ್ತಿಯ ಜೀವ ರಕ್ಷಿಸುವುದು ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದರೂ ಆಡಳಿತ ವ್ಯವಸ್ಥೆಯು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಮಾನವ ದೇಹದ ಉಳಿವಿಗೆ ಅಗತ್ಯವಿರುವ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ದ್ರವರೂಪದ ಆಹಾರದ ಮೂಲಕ ಬಲವಂತವಾಗಿ ನೀಡುವುದು ಸದ್ಯ ಮಾಡಬೇಕಿರುವ ಸರಳ ಕೆಲಸವಾಗಿದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಆರೋಗ್ಯವನ್ನು ರಕ್ಷಿಸುವುದು ಸರ್ಕಾರದ ಸಂವಿಧಾನಾತ್ಮಕ ಹೊಣೆಗಾರಿಕೆಯಾಗಿದೆ. ಸುರಕ್ಷತೆಯನ್ನು ಖಾತ್ರಿಪಡಿಸುವ ಬದಲು ಅಧಿಕಾರಿಗಳು ವಾಂಗ್ಚುಕ್ ಅವರನ್ನು "ಕುಖ್ಯಾತ ಅಪರಾಧಿ"ಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಕಾಯ್ದೆಯಡಿ, ವ್ಯಕ್ತಿಯ ಜೀವಕ್ಕೆ ಅಪಾಯವಿದ್ದಾಗ ಅಧಿಕಾರಿಗಳು ನಿಷ್ಕ್ರಿಯರಾಗಿರಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ, ಉಪವಾಸ ಕೈಬಿಡುವಂತೆ ಕೇಳಿಕೊಳ್ಳುತ್ತಿರುವವರ ಮನವಿಗೆ ವಾಂಗ್ಚುಕ್ ಸ್ಪಂದಿಸುತ್ತಿಲ್ಲ. ಸಿಜೆಪಿ ಹಂಚಿಕೊಂಡಿರುವ ಸಂದೇಶದಲ್ಲಿ ಅವರು, "ನನ್ನನ್ನು ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಕೇಳುವ ಬದಲು, ಜನರ ಧ್ವನಿಯನ್ನು ಆಲಿಸಲು ಸರ್ಕಾರ ಏಕೆ ನಿರಾಕರಿಸುತ್ತಿದೆ ಎಂದು ಕೇಳಿ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

