HEALTH TIPS

ತೀವ್ರ ಬಿಸಿಗಾಳಿ; ಫ್ರಾನ್ಸ್‌ನಲ್ಲಿ ಮೂರು ವಿದ್ಯುತ್‌ ಸ್ಥಾವರಗಳೇ ಸ್ಥಗಿತ

 ಫ್ರಾನ್ಸ್: ಒಂದು ಕಾಲದಲ್ಲಿ 'ಅಣುಶಕ್ತಿಯ ಮಹಾಶಕ್ತಿ' ಎಂದು ಗುರುತಿಸಿಕೊಂಡಿದ್ದ ಫ್ರಾನ್ಸ್, ಇಂದು ಪ್ರಕೃತಿಯ ಎದುರು ಅಸಹಾಯಕವಾಗಿ ನಿಂತಿದೆ. ದೇಶದ ವಿದ್ಯುತ್ ವ್ಯವಸ್ಥೆಯ ಜೀವನಾಡಿಯಾಗಿರುವ ಅಣು ವಿದ್ಯುತ್ ಸ್ಥಾವರಗಳೇ ತೀವ್ರ ಬಿಸಿಗಾಳಿಯ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಇದು ಕೇವಲ ಫ್ರಾನ್ಸ್‌ನ ಸುದ್ದಿಯಲ್ಲ, ಹವಾಮಾನ ಬದಲಾವಣೆ ಜಾಗತಿಕ ಇಂಧನ ವ್ಯವಸ್ಥೆಯನ್ನೇ ಹೇಗೆ ಸವಾಲಿಗೆ ದೂಡುತ್ತಿದೆ ಎಂಬುದರ ಎಚ್ಚರಿಕೆಯ ಸಂಕೇತವಾಗಿದೆ.

ಫ್ರಾನ್ಸ್‌ನಲ್ಲಿ ಮೂರನೇ ಬಾರಿಗೆ ಅಪ್ಪಳಿಸಿರುವ ಬಿಸಿಗಾಳಿಯಿಂದ ಗೋಲ್ಫೆಕ್, ಬುಗೆ ಮತ್ತು ಚೂಜ್ ಅಣು ವಿದ್ಯುತ್ ಸ್ಥಾವರಗಳ ಮೂರು ರಿಯಾಕ್ಟರ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಎಂಟು ರಿಯಾಕ್ಟರ್‌ಗಳು ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಕಾರಣ ಯಾವುದೇ ತಾಂತ್ರಿಕ ದೋಷವಲ್ಲ, ಪರಿಸರವನ್ನು ರಕ್ಷಿಸುವ ಅನಿವಾರ್ಯತೆ.

ಅಣು ವಿದ್ಯುತ್ ಸ್ಥಾವರಗಳು ಕಾರ್ಯನಿರ್ವಹಿಸುವಾಗ ಅಪಾರ ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ. ಅದನ್ನು ತಂಪಾಗಿಡಲು ನದಿಗಳ ನೀರನ್ನು ಬಳಸಲಾಗುತ್ತದೆ ಆದರೆ ಈಗಾಗಲ್ಲೇ ತೀವ್ರ ಬಿಸಿಯಿಂದ ನದಿಗಳ ನೀರಿನ ತಾಪಮಾನ ಏರಿಕೆಯಾಗಿರುವ ಕಾರಣ, ಮತ್ತಷ್ಟು ಬಿಸಿಯಾದರೆ ಜಲಚರ ಜೀವಿಗಳಿಗೆ ಹಾಗೂ ನದಿ ಪರಿಸರ ವ್ಯವಸ್ಥೆಗೆ ಹಾನಿಯಾಗಬಹುದು. ಈ ಕಾರಣದಿಂದ ಪರಿಸರ ನಿಯಮಗಳನ್ನು ಪಾಲಿಸಲು ರಿಯಾಕ್ಟರ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ಇದರಿಂದ ಮತ್ತೊಂದು ಪ್ರಶ್ನೆ ಉದ್ಭವಿಸಿದೆ. ಹವಾಮಾನ ಬದಲಾವಣೆಯ ಪರಿಣಾಮ ಕೇವಲ ಕೃಷಿ, ಆರೋಗ್ಯ ಅಥವಾ ಕಾಳ್ಗಿಚ್ಚಿಗೆ ಮಾತ್ರ ಸೀಮಿತವಲ್ಲ, ವಿದ್ಯುತ್ ಉತ್ಪಾದನೆಗೂ ಅದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ವಿಶ್ವದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ದೇಶವೂ ಪ್ರಕೃತಿಯ ಮುಂದೆ ಎಷ್ಟು ಅಸಹಾಯಕವಾಗಬಹುದು ಎಂಬುದನ್ನು ಫ್ರಾನ್ಸ್‌ನ ಈ ಘಟನೆ ತೋರಿಸಿದೆ.

ಈ ಬಿಸಿಗಾಳಿಯ ಪರಿಣಾಮವಾಗಿ ದೇಶದ ಮೂರನೇ ಭಾಗಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗರಿಷ್ಠ ಎಚ್ಚರಿಕೆ ಘೋಷಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಸುಮಾರು 2.5 ಕೋಟಿ ಜನರು ಇದರ ನೇರ ಪರಿಣಾಮ ಅನುಭವಿಸುತ್ತಿದ್ದಾರೆ. ಪ್ರವಾಸಿ ತಾಣಗಳು ಮುಂಚಿತವಾಗಿ ಮುಚ್ಚಲಾಗಿದೆ, ಕ್ರೀಡಾಕೂಟಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ, ಕಾಳ್ಗಿಚ್ಚು ಮತ್ತು ನೀರಿನಲ್ಲಿ ಮುಳುಗಿ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

ಒಂದು ಕಾಲದಲ್ಲಿ ಚಳಿಗಾಲಕ್ಕೆ ಹೆಸರಾಗಿದ್ದ ಯುರೋಪಿನ ದೇಶಗಳು ಈಗ ಉರಿಯುವ ಬೇಸಿಗೆಯನ್ನು ಎದುರಿಸುತ್ತಿವೆ. ಫ್ರಾನ್ಸ್‌ನಲ್ಲಿ ಅಣು ರಿಯಾಕ್ಟರ್‌ಗಳ ಸ್ಥಗಿತವು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಭವಿಷ್ಯದಲ್ಲಿ ಇಂಧನ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ನಡುವೆ ಸಮತೋಲನ ಸಾಧಿಸುವುದು ಎಷ್ಟು ದೊಡ್ಡ ಸವಾಲಾಗಲಿದೆ ಎಂಬುದಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries