ದುಬೈ (AP): ಅಮೆರಿಕದ ದಾಳಿಗೆ ತಿರುಗೇಟು ನೀಡಿರುವ ಇರಾನ್, ಬಹರೇನ್, ಜೋರ್ಡನ್ ಹಾಗೂ ಕುವೈತ್‌ನಲ್ಲಿರುವ ಅದರ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದೆ. ದಾಳಿಯಿಂದ ಉಂಟಾದ ಹಾನಿ ಹಾಗೂ ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ.
ಇರಾನ್ ರಾಜಧಾನಿ ಟೆಹರಾನ್ ಸುತ್ತಲಿನ ಪ್ರದೇಶಗಳ ಮೇಲೆ ಗುರುವಾರ ಮುಂಜಾನೆ ಅಮೆರಿಕ ದಾಳಿ ನಡೆಸಿತು. ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳನ್ನು ನಡೆಸುವ ಸೆನ್ಮಾನ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಯಿತು ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಅಮೆರಿಕ ದಾಳಿಯಿಂದ ಸುಮಾರು 35 ಜನರು ಸಾವಿಗೀಡಾಗಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ತಿಳಿಸಿದೆ.
ಹೋಮೆಡಾನ್, ಹೊರ್ಮೊಜ್ಗಾನ್, ಖುಜೆಸ್ತಾನ್, ಲೊರೆಸ್ಟಾನ್, ಮರ್ಕಾಜಿ, ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಖರ್ಗ್ ಕಡೆಗೆ ಸಾಗುತ್ತಿದ್ದ ಇರಾನ್‌ನ ತೈಲದ ಹಡಗಿನ ಮೇಲೂ ದಾಳಿ ನಡೆದಿದೆ.
ಇರಾನ್‌ನ ರಕ್ಷಣಾ ಮತ್ತು ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿಕೊಂಡು ಗ್ರೇಟರ್ ಟುಂಬ್ ದ್ವೀಪದ ಮೇಲೆ ಬುಧವಾರ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ.
ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇರಾನ್‌ನ ಸೇನಾ ಬ್ಯಾರಕ್‌ಗಳನ್ನು ಗುರಿಯಾಗಿಸಿ, 13 ಕ್ಷಿಪಣಿಗಳಿಂದ ಅಮೆರಿಕ ದಾಳಿ ನಡೆಸಿದೆ. ಇದರಲ್ಲಿ ಏಳು ಸೈನಿಕರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಹೇಳಿದೆ. ತನ್ನ ದಾಳಿಯನ್ನು ತೀವ್ರಗೊಳಿಸುವುದಾಗಿಯೂ ಇರಾನ್ ಎಚ್ಚರಿಕೆ ನೀಡಿದೆ.
ತನ್ನ ರಾಜಧಾನಿಯನ್ನು ಗುರಿಯಾಗಿಸಿ ದಾಳಿ ನಡೆಸಿದ ಇರಾನ್‌ನ 8 ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಜೋರ್ಡನ್ ಹೇಳಿದೆ. ಇರಾನ್ ದಾಳಿಯನ್ನು ತಡೆದಿರುವುದಾಗಿ ಕುವೈತ್ ಸಹ ಹೇಳಿಕೊಂಡಿದೆ.
ಹೊರ್ಮುಜ್ ಕೇಂದ್ರೀಕರಿಸಿದ ಸಂಘರ್ಷ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಇರಾನ್‌ನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಹೊಡೆದುರುಳಿಸುತ್ತೇವೆ' ಎಂದು ಪದೇ ಪದೇ ಹೇಳಿಕೆ ನೀಡಿದ್ದಾರೆ. ಇದು ನಿಜವಾದರೆ ಪ್ರಾದೇಶಿಕ ಮೂಲಸೌಕರ್ಯಗಳ ಮೇಲೆ ವ್ಯಾಪಕ ದಾಳಿ ನಡೆಸುವುದಾಗಿ ಇರಾನ್ ಹೇಳಿದೆ. 'ಯಾವುದೇ ಸಂದರ್ಭದಲ್ಲಿ ಮತ್ತು ಯಾವುದೇ ರೀತಿಯಲ್ಲಿ ಅಮೆರಿಕವು ಹೊರ್ಮುಜ್ ಜಲಸಂಧಿಯಲ್ಲಿ ಹಸ್ತಕ್ಷೇಪ ಮಾಡಲು ನಾವು ಅನುಮತಿಸುವುದಿಲ್ಲ' ಎಂದು ಇರಾನ್ ಸೇನೆ ಹೇಳಿದೆ. ಈಗಿನ ಸಂಘರ್ಷವು ಹೊರ್ಮುಜ್ ಜಲಸಂಧಿಯನ್ನು ಕೇಂದ್ರೀಕರಿಸಿದೆ. ಅಮೆರಿಕದ ನಿಯಂತ್ರಣದಲ್ಲಿರುವ ಜಲಮಾರ್ಗವನ್ನು ಬಳಸಿ ಜಲಸಂಧಿ ಮೂಲಕ ಹಾದುಹೋಗಲು ಯತ್ನಿಸಿದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ. ತನ್ನ ಬಲಪ್ರಯೋಗದ ಮೂಲಕ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಸಂಚಾರಕ್ಕೆ ತೆರೆಯುವುದಾಗಿ ಅಮೆರಿಕ ಹೇಳಿದೆ.

