ಮುಂಬೈ: ಮತಾಂತರ ಯತ್ನ ಪ್ರಕರಣದ ಆರೋಪಿಯಾಗಿರುವ ಟಿಸಿಎಸ್ ಉದ್ಯೋಗಿ ನಿದಾ ಖಾನ್‌ಗೆ ನಾಸಿಕ್‌ನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶ್ರೀಕೃಷ್ಣನು ಸೆರೆಯಲ್ಲಿ ಜನಿಸಿದ್ದನ್ನು ಉಲ್ಲೇಖಿಸಿದ ನ್ಯಾಯಾಲಯ, ಯಾವುದೇ ಮಗು ಜೈಲಿನಲ್ಲಿ ಜನಿಸುವುದರಿಂದ ಉಂಟಾಗುವ ಮಾನಸಿಕ ಆಘಾತ ಅಥವಾ ಸಾಮಾಜಿಕ ಕಳಂಕವನ್ನು ಅನುಭವಿಸಬಾರದು ಎಂದು ಅಭಿಪ್ರಾಯಿಸಿದೆ.
''ಅರ್ಜಿದಾರಳಾದ ನಿದಾ ಖಾನ್ ಅವರು ಐದು ತಿಂಗಳ ಗರ್ಭಿಣಿ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಶ್ರೀಕೃಷ್ಣನಂತೆ ಕಾರಾಗೃಹದಲ್ಲಿ ಜನ್ಮ ತಳೆಯುವ ಆಘಾತ ಅಥವಾ ಅದಕ್ಕೆ ಅಂಟಿಕೊಳ್ಳುವ ಸಾಮಾಜಿಕ ಕಳಂಕವು ಯಾರಿಗೂ ಸಹನೀಯವಲ್ಲ. ಇಂತಹ ದುಃಖಕರ ಪರಿಸ್ಥಿತಿಯನ್ನು ತಪ್ಪಿಸಲು ಮತ್ತು ನವಜಾತ ಶಿಶುವನ್ನು ಸ್ವಾಗತಿಸಲು ಹಾಗೂ ಒಟ್ಟಾರೆ ಯೋಗಕ್ಷೇಮಕ್ಕಾಗಿ ಆರೋಪಿ ಅರ್ಜಿದಾರರ ಪರವಾಗಿ ನ್ಯಾಯಾಂಗ ವಿವೇಚನೆಯನ್ನು ಬಳಸವುದು ನ್ಯಾಯಸಮ್ಮತ ಮತ್ತು ಸೂಕ್ತವಾಗಿರುತ್ತದೆ'' ಎಂದು ವಿಶೇಷ ನ್ಯಾಯಾಧೀಶ ಕೆ.ಜಿ. ಜೋಶಿ ಅವರು ಆದೇಶದಲ್ಲಿ ಹೇಳಿದ್ದಾರೆ.
ಟಿಸಿಎಸ್ ನಾಸಿಕ್ ಪ್ರಕರಣಕ್ಕೆ ಸಂಬಂಧಿಸಿ ನಾಸಿಕ್ ನಗರ ಪೊಲೀಸರು ಮಾರ್ಚ್ 26 ಮತ್ತು ಎಪ್ರಿಲ್ 3ರ ನಡುವೆ ದಾಖಲಿಸಿದ 9 ಎಫ್‌ಐಆರ್‌ಗಳಲ್ಲಿ ಆರೋಪಿಯಾಗಿರುವ ಎಂಟು ಮಂದಿ ಉದ್ಯೋಗಿಗಳಲ್ಲಿ ನಿದಾ ಖಾನ್ ಕೂಡ ಒಬ್ಬರಾಗಿದ್ದಾರೆ. ನಾಸಿಕ್‌ನ ಟಿಸಿಎಸ್ ಬಿಪಿಒ ಕಚೇರಿಯಲ್ಲಿ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಮತಾಂತರಕ್ಕೆ ಯತ್ನಿಸಿದ ಆರೋಪಗಳನ್ನು ಈ ಪ್ರಕರಣಗಳು ಒಳಗೊಂಡಿವೆ.

