HEALTH TIPS

ಶಿಕ್ಷಕರಾಗಿದ್ದ ಚಂಪತ್ ರಾಯ್ ರಾಮಮಂದಿರ ಟ್ರಸ್ಟ್ ಮುನ್ನಡೆಸಿದ್ದು ಹೇಗೆ?

 ನವದೆಹಲಿ: ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್‌ ರಾಯ್‌ ಈಚೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್‌ ಮಿಶ್ರಾ ಕೂಡ ಟ್ರಸ್ಟ್‌ನ ಅಧ್ಯಕ್ಷ ಮಹಂತ್‌ ನೃತ್ಯ ಗೋಪಾಲ್‌ ದಾಸ್‌ ಅವರಿಗೆ ರಾಜೀನಾಮೆ ನೀಡಿದ್ದಾರೆ.


ದೇಣಿಗೆ ದುರುಪಯೋಗದ ಆರೋಪ ಕೇಳಿಬಂದ ತಕ್ಷಣ, ನಿಷ್ಪಕ್ಷಪಾತ ತನಿಖೆ ನಡೆಸಲು ರಾಯ್‌ ಹಾಗೂ ಮಿಶ್ರಾ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ತನ್ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಅವರ ರಾಜೀನಾಮೆಯನ್ನು ಅಂಗೀಕರಿಸಿತ್ತು. ಹಾಗಾದರೆ, ಚಂಪತ್‌ ರಾಯ್‌ ಯಾರು?, ಅವರ ಹಿನ್ನೆಲೆ ಏನು?, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆಗುವುದಕ್ಕೂ ಮುನ್ನ ಅವರು ಏನು ಮಾಡುತ್ತಿದ್ದರು ಎಂಬುದರ ಕುರಿತು ತಿಳಿಯೋಣ.

ರಾಯ್‌ ಅವರ ಆರಂಭಿಕ ಜೀವನ ಮತ್ತು ಶಿಕ್ಷಣ

ಚಂಪತ್ ರಾಯ್ ಅವರು 1946ರಲ್ಲಿ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಜನಿಸಿದರು. ವಿದ್ಯಾಭ್ಯಾಸ ಮುಗಿಸಿದ ಬಳಿಕ ಬಿಜ್ನೋರ್‌ನ ಆರ್‌ಎಸ್‌ಎಂ ಪದವಿ ಕಾಲೇಜಿನಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.

1975-77ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಒಡನಾಟದ ಕಾರಣದಿಂದಾಗಿ ಅವರನ್ನು ಬಂಧಿಸಲಾಗಿತ್ತು. ಅವರು 18 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು ಎಂದು ವರದಿಯಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಮತ್ತೆ ಬೋಧನಾ ವೃತ್ತಿಗೆ ಮರಳದೆ ಸಂಪೂರ್ಣವಾಗಿ ಹಿಂದೂ ಪರ ಚಳವಳಿಗಳಲ್ಲಿ ತೊಡಗಿಸಿಕೊಂಡರು.

ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ನಂಟು

ಚಿಕ್ಕ ವಯಸ್ಸಿನಿಂದಲೇ ಆರ್‌ಎಸ್‌ಎಸ್‌ನಿಂದ ಪ್ರಭಾವಿತರಾಗಿದ್ದ ರಾಯ್, 1980ರಲ್ಲಿ ಅಧಿಕೃತವಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೇರಿದ್ದರು.

ವಿಎಚ್‌ಪಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಅವರು, ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಅಂತಿಮವಾಗಿ ಅದರ ಅಂತರರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಚುನಾವಣಾ ರಾಜಕೀಯಕ್ಕಿಂತ ಹೆಚ್ಚಾಗಿ ಹಿಂದೂ ಪರ ಚಳವಳಿಗಾಗಿ ಹೆಸರುವಾಸಿಯಾಗಿದ್ದರು. ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಧಾರ್ಮಿಕ ಅಭಿಯಾನ ಮತ್ತು ಹಿಂದೂ ಜಾಗೃತಿ ಕಾರ್ಯಕ್ರಮಗಳಿಗೆ ಮುಡಿಪಾಗಿಟ್ಟಿದ್ದರು.

ರಾಮಜನ್ಮಭೂಮಿ ಚಳವಳಿಯಲ್ಲಿ ಪ್ರಮುಖ ಪಾತ್ರ

ಚಂಪತ್ ರಾಯ್ ಅವರು 1980ರ ದಶಕದಿಂದಲೂ ರಾಮಜನ್ಮಭೂಮಿ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಚಳವಳಿಯ ಸಂದರ್ಭದಲ್ಲಿ ಕರಸೇವಕರನ್ನು ಒಟ್ಟುಗೂಡಿಸುವಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖ ವಿಎಚ್‌ಪಿ ನಾಯಕರಲ್ಲಿ ಇವರೂ ಒಬ್ಬರಾಗಿದ್ದರು. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಘಟನೆಗಳೊಂದಿಗೂ ರಾಯ್ ಹೆಸರು ತಳಕು ಹಾಕಿಕೊಂಡಿತ್ತು.

2019ರ ಸುಪ್ರೀಂ ಕೋರ್ಟ್‌ನ ಅಯೋಧ್ಯಾ ತೀರ್ಪು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ರಚನೆಯ ನಂತರ ರಾಯ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಬಳಿಕ ಅವರು ಟ್ರಸ್ಟ್‌ನ ದಿನನಿತ್ಯದ ಆಡಳಿತದ ಮೇಲ್ವಿಚಾರಣೆ ನಡೆಸುವ ಮೂಲಕ ರಾಮಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಯೋಧ್ಯೆಯ ಧಾರ್ಮಿಕ ಇತಿಹಾಸ, ಭೌಗೋಳಿಕತೆ ಮತ್ತು ರಾಮಜನ್ಮಭೂಮಿ ಚಳುವಳಿಯ ಬಗ್ಗೆ ಅವರಿಗಿರುವ ವಿವರವಾದ ಜ್ಞಾನದ ಕಾರಣದಿಂದಾಗಿ ಬೆಂಬಲಿಗರು ಅವರನ್ನು ಹೆಚ್ಚಾಗಿ 'ಅಯೋಧ್ಯೆಯ ವಿಶ್ವಕೋಶ' ಎಂದೇ ಕರೆಯುತ್ತಾರೆ.

ರಾಯ್ ರಾಜೀನಾಮೆ ನೀಡಿದ್ದೇಕೆ?

ಹಲವು ವರ್ಷಗಳ ಕಾಲ ರಾಯ್ ಅವರು ರಾಮಮಂದಿರ ಟ್ರಸ್ಟ್‌ನ ಪ್ರಮುಖ ಭಾಗವಾಗಿದ್ದರು. ಆದರೆ, ದೇವಸ್ಥಾನದ ದೇಣಿಗೆ ದುರುಪಯೋಗದ ಆರೋಪದ ಕುರಿತು ಪೊಲೀಸ್ ತನಿಖೆ ಆರಂಭವಾದ ನಂತರ, 2026ರ ಜೂನ್‌ನಲ್ಲಿ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ರಾಮಮಂದಿರದಲ್ಲಿ ₹7ರಿಂದ ₹7.5 ಕೋಟಿ ದೇಣಿಗೆ ಹಣ ನಾಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ದೇಣಿಗೆ ಎಣಿಕೆಯಲ್ಲಿ ತೊಡಗಿದ್ದ ಸಿಬ್ಬಂದಿ ಮತ್ತು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಬ್ಯಾಂಕ್ ಅಧಿಕಾರಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ರಾಯ್ ಅವರ ಕಾರು ಚಾಲಕ ಮತ್ತು ಆಪ್ತ ಸಹಾಯಕ ರಾಮಶಂಕರ್ ಯಾದವ್ ಅಲಿಯಾಸ್ ತಿನ್ನು ಎಂಬಾತನನ್ನೂ ಬಂಧಿಸಲಾಗಿದೆ.

ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ರಾಯ್‌ ಅವರು ನೈತಿಕ ಹೊಣೆಗಾರಿಕೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries