ಅಯೋಧ್ಯೆ: ಖಿಲೋನಿ-ಸುಚಿತಾಗಂಜ್ ನಗರ ಪಂಚಾಯಿತಿಯನ್ನು 'ಮಾ ಜ್ವಾಲಾ ಜಿ' ಮತ್ತು ಭದರಸಾ ಪುರಸಭೆಯನ್ನು 'ಭರತ ನಗರ' ಎಂದು ಮರುನಾಮಕರಣ ಮಾಡಿರುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.
ಬಿಕಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಖಿಲೋನಿ-ಸುಚಿತಾಗಂಜ್ ನಗರ ಪಂಚಾಯಿತಿ ಹೆಸರನ್ನು ಬದಲಾಯಿಸುವಂತೆ ಸ್ಥಳೀಯ ಬಿಜೆಪಿ ಶಾಸಕ ಅಮಿತ್ ಸಿಂಗ್ ಚೌಹಾಣ್ ಬೇಡಿಕೆ ಇಟ್ಟಿದ್ದರು. ಅದರಂತೆ ಹೆಸರು ಬದಲಾಯಿಸಲಾಗಿದೆ' ಎಂದು ತಿಳಿಸಿದ್ದಾರೆ.
'ಭದರಸಾ ಪುರಸಭೆಯನ್ನು ಇನ್ನು ಮುಂದೆ 'ಭರತ ನಗರ' ಎಂದು ಕರೆಯಲಾಗುವುದು. ಶ್ರೀರಾಮನ ಕಿರಿಯ ಸಹೋದರ ಭರತನ ಭಕ್ತಿ ಮತ್ತು ತ್ಯಾಗಕ್ಕೆ ಗೌರವ ನೀಡುವ ಉದ್ದೇಶದಿಂದ ಭರತನ ಹೆಸರನ್ನೇ ಪುರಸಭೆಗೆ ಇಡಲಾಗಿದೆ' ಎಂದು ಹೇಳಿದ್ದಾರೆ.
'ಶ್ರೀರಾಮನ ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುತ್ತಾ ಭರತನು ಭರತ್ ಕುಂಡದ ಬಳಿ 14 ವರ್ಷ ಕಳೆದನು. ಆ ಸಮಯದಲ್ಲಿ ಶ್ರೀರಾಮನ ಪಾದಗಳು ಸಾಂಕೇತಿಕವಾಗಿ ಅಯೋಧ್ಯೆಯನ್ನು ಆಳಿದವು. ಭರತನಂತಹ ಸಹೋದರನನ್ನು ಜಗತ್ತಿನ ಯಾವ ಭಾಗದಲ್ಲೂ ಕಾಣುವುದು ಕಷ್ಟ' ಎಂದು ಬಣ್ಣಿಸಿದ್ದಾರೆ.
ಅಯೋಧ್ಯೆಯ ಸಾಂಸ್ಕೃತಿಕ ಪರಂಪರೆಯನ್ನು ಇಡೀ ದೇಶವೇ ಗುರುತಿಸಿದೆ ಎಂದು ಹೇಳಿದ ಅವರು, 'ಮರುನಾಮಕರಣಗೊಂಡ ಭರತ ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.
ಇದಕ್ಕೂ ಮುನ್ನ, ಶಹಜಹಾನ್‌ಪುರದ ಜಲಾಲಾಬಾದ್ ತಹಸಿಲ್ ಅನ್ನು 'ಭಗವಾನ್ ಪರಶುರಾಮಪುರಿ' ಎಂದು, ಫಾಜಿಲ್ ನಗರಕ್ಕೆ 'ಪಾವಾಗಢ' ಎಂದು, ಅಲಹಾಬಾದ್ ಅನ್ನು 'ಪ್ರಯಾಗ್‌ರಾಜ್' ಮತ್ತು ಫೈಜಾಬಾದ್ ಜಿಲ್ಲೆಯನ್ನು 'ಅಯೋಧ್ಯೆ' ಎಂದು ಮರುನಾಮಕರಣ ಮಾಡಲಾಗಿತ್ತು.

