HEALTH TIPS

ತಿಹಾರ್ ಜೈಲೂಟ ತುಂಬಾ ಖಾರ, ಅಮೆರಿಕನ್ ಶೈಲಿಯ ಆಹಾರ ನೀಡಿ: ಶಂಕಿತ ಉಗ್ರನ ಮನವಿ

 ನವದೆಹಲಿ: 'ತಿಹಾರ್‌ ಜೈಲಿನಲ್ಲಿ ಅಮೆರಿಕನ್‌ ಶೈಲಿಯ ಆಹಾರವನ್ನು ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ' 

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ತರಬೇತಿ ನೀಡುತ್ತಿದ್ದ ಆರೋಪದಲ್ಲಿ ಜೈಲು ಸೇರಿರುವ ಅಮೆರಿಕ ಮೂಲದ ಮ್ಯಾಥ್ಯೂ ಆಯರನ್‌ ವ್ಯಾನ್‌ಡೈಕ್‌ ಎಂಬಾತ ದೆಹಲಿ ನ್ಯಾಯಾಲಯಕ್ಕೆ ಈ ರೀತಿ ಮನವಿ ಮಾಡಿದ್ದಾನೆ ಎಂದು 'ಹಿಂದೂಸ್ತಾನ್‌ ಟೈಮ್ಸ್‌' ವರದಿ ಮಾಡಿದೆ. 


ಈ ಅರ್ಜಿಯ ವಿಚಾರಣೆ ಜುಲೈ 21ರಂದು ನಡೆಯಲಿದೆ.

ಭಾರತ ವಿರೋಧಿ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ರೂಪಿಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಮ್ಯಾಥ್ಯೂನನ್ನು ಬಂಧಿಸಿದೆ. ಸದ್ಯ ರಾಷ್ಟ್ರ ರಾಜಧಾನಿಯ ತಿಹಾರ್‌ ಜೈಲಿನಲ್ಲಿರುವ ಆತ, ಅಮೆರಿಕ ಶೈಲಿಯ ಆಹಾರಕ್ಕೆ ಮನವಿ ಮಾಡಿದ್ದಾನೆ. ತುಂಬಾ ಖಾರ, ಹೆಚ್ಚು ಎಣ್ಣೆ ಮತ್ತು ಅತಿಯಾಗಿ ಕರಿದ ಆಹಾರವನ್ನು ತಿನ್ನಲು ಆಗುತ್ತಿಲ್ಲ ಎಂದು ಮ್ಯಾಥ್ಯೂ ಸುಮಾರು 50 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ಆತನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಕುರಿತು ನಡೆದ ಇತ್ತೀಚಿನ ವಿಚಾರಣೆ ವೇಳೆ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎನ್‌ಐಎ ಸ್ಪಷ್ಟಪಡಿಸಿದೆ. ಆದರೆ, ಜೈಲು ಅಧಿಕಾರಿಗಳು ಸಮಯ ಕೋರಿದ್ದಾರೆ. ಹೀಗಾಗಿ, ದೆಹಲಿಯ ಪಟಿಯಾಲಾ ಹೌಸ್‌ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಪ್ರಶಾಂತ್‌ ಶರ್ಮಾ ಅವರು ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದ್ದಾರೆ.

45 ವರ್ಷದ ವ್ಯಾನ್‌ಡೈಕ್‌ ಉಪವಾಸದ ವೇಳೆ ದ್ರವ ಆಹಾರವನ್ನೇ ಅವಲಂಬಿಸಿರುವುದಾಗಿ ಮತ್ತು ಸೋಯಾ ಹಾಲನ್ನು ಪೂರೈಸಬೇಕು ಎಂದು ಆತನ ವಕೀಲರಾದ ರೋಹಿತ್‌ ದಂಡ್ರಿಯಾಲ್‌ ಮತ್ತು ರೋಹಿತ್‌ ಗೌರ್‌ ಮನವಿ ಮಾಡಿದ್ದಾರೆ.

'ಜೈಲಿನ ಆಹಾರದಿಂದ ಆರೋಗ್ಯ ಕೆಟ್ಟಿದೆ'

ಜೈಲಿನಲ್ಲಿ ಮಸಾಲೆಯಿಂದ ಕೂಡಿದ ಖಾರದ ಆಹಾರ, ಎಣ್ಣೆಯುಕ್ತ ಹಾಗೂ ಕರಿದ ಆಹಾರವನ್ನು ಸಾಮಾನ್ಯ ಎಂಬಂತೆ ನೀಡಲಾಗುತ್ತಿದೆ. ಇದರಿಂದಾಗಿ, ಸರಿಯಾಗಿ ಊಟ ಸೇವಿಸಲು ಆಗುತ್ತಿಲ್ಲ ಎಂದು ವ್ಯಾನ್‌ಡೈಕ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬಹು ದಿನಗಳ ಉಪವಾಸದಿಂದಾಗಿ ವ್ಯಾನ್‌ಡೈಕ್‌ ಆರೋಗ್ಯ ಹದಗೆಟ್ಟಿದೆ. ದೇಹದ ಸ್ಥಿತಿ ಅತ್ಯಂತ ದುರ್ಬಲವಾಗಿದೆ. ರೋಗ ನಿರೋಧಕ ಶಕ್ತಿಯೂ ಕುಸಿದಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗಲೂ ಸಾಧ್ಯವಾಗದ ಸ್ಥಿತಿಯಲ್ಲಿ ವ್ಯಾನ್‌ಡೈಕ್ ಇದ್ದಾರೆ. ಪೌಷ್ಟಿಕಾಂಶದ ಕೊರತೆಯಿಂದ ಅವರ ದೃಷ್ಟಿಯೂ ಹಾಳಾಗಿದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಒಂದು ವೇಳೆ ಕೋರ್ಟ್‌ ಅನುಮತಿ ನೀಡಿದರೆ, ಜೈಲಿನಲ್ಲಿ ನೀಡುವ ಪ್ರತ್ಯೇಕ ಆಹಾರದ ವೆಚ್ಚವನ್ನು ಭರಿಸಲು ವ್ಯಾನ್‌ಡೈಕ್ ಕುಟುಂಬ ಸಿದ್ಧವಿದೆ ಎಂದು ತಿಳಿಸಲಾಗಿದ್ದು, ಮನವಿಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು ಎಂದು ಕೋರಲಾಗಿದೆ.

ಪಾಸ್ತಾ, ಚಿಕನ್, ಮೀನು, ಆಲಿವ್ ಎಣ್ಣೆಯಿಂದ ಮಾಡಿದ ಆಹಾರ ಸೇರಿದಂತೆ ತಾನು ನಿಯಮಿತವಾಗಿ ಸೇವಿಸುತ್ತಿದ್ದ ಆಹಾರಕ್ಕೆ ಅನುಗುಣವಾದ ಇತರ ವಸ್ತುಗಳಿಗೆ ವ್ಯಾನ್‌ಡೈಕ್ ಮನವಿ ಮಾಡಿದ್ದಾನೆ. ಜೈಲಿನೊಳಗೆ ಅಡುಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಕನಿಷ್ಠ ಸಲಕರಣೆಗಳನ್ನು ಒದಗಿಸುವಂತೆಯೂ ಕೋರಿದ್ದಾನೆ ಎಂದು ವರದಿಯಾಗಿದೆ.ವ್ಯಾನ್‌ಡೈಕ್ ಬೇಡಿಕೆ ಏನು?

ಇದೇ ಮೊದಲಲ್ಲ..

ವ್ಯಾನ್‌ಡೈಕ್ ಆಹಾರ ತಕರಾರಿನ ಸುದ್ದಿ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಇತರ ಆರೋಪಿಗಳೊಂದಿಗೆ ನ್ಯಾಯಾಂಗ ಬಂಧನವನ್ನು ಆಗಸ್ಟ್‌ 1ರವರೆಗೆ ವಿಸ್ತರಿಸಿ ನ್ಯಾಯಾಲಯವು ಜುಲೈ 3ರಂದು ಆದೇಶ ಮಾಡಿದಾಗಲೂ ಈ ತಕರಾರು ಕೇಳಿಬಂದಿತ್ತು.

ವ್ಯಾನ್‌ಡೈಕ್ ಜೈಲಿನ ಆಹಾರ ಸೇವಿಸುತ್ತಿಲ್ಲ. ಸೋಯಾ ಹಾಲು ಸೇರಿದಂತೆ ದ್ರವರೂಪದ ಆಹಾರವನ್ನಷ್ಟೇ ಸೇವಿಸುತ್ತಿದ್ದಾನೆ. ಹೊರಗಿನಿಂದ ಊಟ ತರಿಸಿಕೊಳ್ಳುವ ಬಗ್ಗೆ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾನೆ ಎಂದು ಹೇಳಲಾಗಿತ್ತು. ಅಷ್ಟೇಅಲ್ಲ. ಜುಲೈ 3ರಂದು ಆತನನ್ನು ವ್ಹೀಲ್‌ಚೇರ್‌ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಏನಿದು ಪ್ರಕರಣ?

ವ್ಯಾನ್‌ಡೈಕ್‌ನನ್ನು ಎನ್‌ಐಎ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಮಾರ್ಚ್‌ 13ರಂದು ಬಂಧಿಸಿದ್ದರು. ಅದೇ ದಿನ ಉಕ್ರೇನ್‌ನ ಆರು ಮಂದಿಯನ್ನೂ ವಶಕ್ಕೆ ಪಡೆಯಲಾಗಿತ್ತು. ಈ ಎಲ್ಲರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು.

ಆರೋಪಿಗಳು ಪ್ರವಾಸಿ ವೀಸಾದ ಆಧಾರದ ಮೇಲೆ ಭಾರತಕ್ಕೆ ಬಂದಿದ್ದರು. ಅಗತ್ಯ ಅನುಮತಿ ಇಲ್ಲದೆ, ಮಿಜೋರಾಂ ಮೂಲಕ ಮ್ಯಾನ್ಮಾರ್‌ಗೆ ನುಸುಳಿದ್ದರು. ಅಲ್ಲಿ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್‌ ಜೋಡಣೆ, ಅವುಗಳನ್ನು ಸಂಘರ್ಷಕ್ಕೆ ಬಳಸುವುದು ಹೇಗೆ ಎಂಬಿತ್ಯಾದಿ ವಿಚಾರಗಳ ತರಬೇತಿ ನೀಡುತ್ತಿದ್ದರು. ಈ ಚಟುವಟಿಕೆಯ ಮೂಲಕ ಭಾರತದ ಭದ್ರತೆಗೆ ಬೆದರಿಕೆ ಒಡ್ಡುವ ಪಿತೂರಿ ನಡೆದಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries