ಅಯೋಧ್ಯೆ : ರಾಮಮಂದಿರಕ್ಕೆ ಬಂದ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುವಾರ ಅಯೋಧ್ಯೆ ಪೊಲೀಸರು 45,000 ರೂ. ನಗದು, ಚಿನ್ನದ ಒಡವೆಗಳು, ಒಂದು ವಾಹನ, ಒಂದು ದುಬಾರಿ ಮೊಬೈಲ್ ಫೋನ್ ಮತ್ತು ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಸ್ಟಡಿಯಲ್ಲಿರುವ ಮೂವರು ಪ್ರಮುಖ ಆರೋಪಿಗಳ ಎರಡನೇ ದಿನದ ವಿಚಾರಣೆ ಬಳಿಕ, ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.
ಜೂನ್ 26ರಂದು ಬಂಧಿಸಲ್ಪಟ್ಟ ಎಂಟು ಆರೋಪಿಗಳ ಪೈಕಿ ಲವಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ ಮತ್ತು ಕರುಣೇಶ್ ಪಾಂಡೆ ಎಂಬ ಮೂವರನ್ನು 40 ಗಂಟೆಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಈ ಅವಧಿಯಲ್ಲಿ ನಡೆದ ತನಿಖೆಯ ಭಾಗವಾಗಿ ಈ ಶೋಧ ಕಾರ್ಯ ನಡೆದಿದೆ.
ಲವಕುಶ್‌ಗೆ ಸೇರಿದ ಸ್ಥಳಗಳಿಂದ 35,000ರೂ. ನಗದು ಮತ್ತು ಆತನ ಪತ್ನಿಗಾಗಿ ಖರೀದಿಸಿದ್ದ ಎನ್ನಲಾದ 'ಲವಕುಶ್' ಎಂಬ ಬರಹವುಳ್ಳ ಚಿನ್ನದ ಪದಕವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ಲವಕುಶ್ ಪತ್ನಿಯ ಸಹೋದರ ಅನುಕಲ್ಪ್‌ಗೆ ಸೇರಿದ ಸ್ಥಳಗಳಲ್ಲಿ ಒಂದು ಚಿನ್ನದ ಹಾರ, ಒಂದು ಕಾರು ಮತ್ತು ಒಂದು ದುಬಾರಿ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಆಸ್ತಿಗಳನ್ನು ದೇಣಿಗೆಯಿಂದ ದುರುಪಯೋಗಪಡಿಸಿಕೊಂಡ ಹಣದಿಂದಲೇ ಖರೀದಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಡಿಜಿಟಲ್ ಐಡಿಗಳು ರದ್ದು
ಈ ನಡುವೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಮಾಜಿ ಮಂದಿರ ಆಡಳಿತಾಧಿಕಾರಿ ಗೋಪಾಲ್ ರಾವ್ ಅವರ ಡಿಜಿಟಲ್ ಐಡಿಗಳನ್ನು ರಾಮಮಂದಿರ ಆಡಳಿತ ಮಂಡಳಿಯು ಗುರುವಾರ ನಿಷ್ಕ್ರಿಯಗೊಳಿಸಿದೆ. ಈ ಐಡಿಗಳನ್ನು ಬಳಸಿ ಇನ್ನು ಮುಂದೆ ದರ್ಶನ ಪಾಸ್‌ಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

