ನವದೆಹಲಿ: ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ AI-171 ವಿಮಾನ ದುರಂತದ ( Ahmedabad Plane Crash ) ತನಿಖೆ ಅಂತಿಮ ಹಂತ ತಲುಪಿದ್ದು, ವಿಮಾನದ ಪ್ರಮುಖ ಭಾಗವಾದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಯಾವುದೇ ದೋಷವಿರಲಿಲ್ಲ ಎಂಬ ಅಂಶ ವರದಿಯಿಂದ ಬಹಿರಂಗಗೊಂಡಿದೆ.
ಇಂಧನ ಸ್ವಿಚ್‌ನಲ್ಲಿ ದೋಷವಿಲ್ಲಕಳೆದ ವರ್ಷ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 260 ಮಂದಿ ಬಲಿಯಾಗಿದ್ದರು. ಈ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದ್ದು, ಮೂಲ ತಯಾರಕರ (OEM) ಸುಧಾರಿತ ಪರೀಕ್ಷೆಯ ಪ್ರಕಾರ ಏರ್ ಇಂಡಿಯಾ AI-171 ವಿಮಾನದ ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ಯಾಂತ್ರಿಕೃತ ವ್ಯವಸ್ಥೆಯಲ್ಲಿ ಯಾವುದೇ ಅಸಹಜತೆ ಅಥವಾ ದೋಷವಿಲ್ಲ ಎಂಬುದು ಪತ್ತೆಯಾಗಿದೆ.
ರಾಜ್ಯಸಭೆಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಸಂಪೂರ್ಣ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್‌ನ ಸೂಕ್ಷ್ಮ ಪರೀಕ್ಷೆಯು ಅಮೆರಿಕದ ಸಿಯಾಟ್ಲ್‌ನಲ್ಲಿರುವ ಒಇಎಂ ಸೌಲಭ್ಯದಲ್ಲಿ ಪ್ರಸ್ತುತ ಭರದಿಂದ ಸಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ವಿಮಾನ ದುರಂತದ ತನಿಖಾ ವರದಿ ಸಿದ್ಧಪಡಿಸುವಲ್ಲಿ ವಿಳಂಬ ಮಾಡಲಾಗಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ಬಲವಾಗಿ ತಳ್ಳಿಹಾಕಿದೆ. ಪ್ರಮುಖ ವಿಮಾನ ಅಪಘಾತಗಳ ತನಿಖೆಯು ನಿಗದಿತ ಗಡುವಿಗೆ ಬದ್ಧವಾಗಿರುವುದಿಲ್ಲ ಬದಲಿಗೆ ಅದೊಂದು ಹೆಚ್ಚುವರಿ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ತಿಳಿಸಲಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಈ ಮಾದರಿಯ ವಿಮಾನಗಳನ್ನು ನೆಲಕ್ಕಿಳಿಸಿದ ಬಳಿಕ, ಮುಂದುವರಿದ ಹಾರಾಟ ಯೋಗ್ಯತೆ ಪರಿಶೋಧನೆಗಳ ಭಾಗವಾಗಿ ನಾಗರಿಕ ವಿಮಾನಯಾನ ಮಹಾನನಿರ್ದೇಶನಾಲಯ (DGCA) ವಿಶೇಷ ಪರೀಕ್ಷೆಗಳನ್ನು ನಡೆಸುವಂತೆ ಆದೇಶಿಸಿತ್ತು. ಅದರಂತೆ ಇಂಧನ ಸ್ವಿಚ್‌ನ ರಚನಾತ್ಮಕ ಸಮಗ್ರತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇನ್ನೂ ಅಪಘಾತಕ್ಕೆ ಕಾರಣವಾದ ಎಲ್ಲಾ ಸಂಭಾವ್ಯ ಅಂಶಗಳು ಹಾಗೂ ಕಾರಣಗಳ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ತನಿಖೆ ಸಂಪೂರ್ಣ ಮುಕ್ತಾಯಗೊಂಡ ಕೂಡಲೇ ಎಲ್ಲಾ ತನಿಖಾ ಅಂಶಗಳನ್ನು ಒಳಗೊಂಡ ಅಂತಿಮ ವರದಿಯನ್ನು ಎಎಐಬಿ (AAIB) ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಮುರುಳಿದರ ಮೊಹೋಲ್ ಉತ್ತರಿಸಿದ್ದಾರೆ.
ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. 2025, ಜೂನ್ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು.
* ಎಲ್ಲಿ ದುರಂತ?: ಅಹಮದಾಬಾದ್ನ ಮೇಘಾನಿ ನಗರ * ಎಷ್ಟೊತ್ತಿಗೆ?: ಮಧ್ಯಾಹ್ನ 1.38 * ಯಾವ ವಿಮಾನ?: ಏರ್ ಇಂಡಿಯಾ ಎ1-171 * ಎಲ್ಲಿಗೆ ಹೊರಟಿತ್ತು?: ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣ * 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್ನಲ್ಲಿ ಪತನ
ಪತನ ಸುತ್ತ ವಿವಾದದ ಹುತ್ತ
ಇನ್ನು ಈ ವಿಮಾನ ಪತನದ ಸುತ್ತ ಸಾಕಷ್ಟು ವಿವಾದಗಳಿವೆ. ಬೇಕಂತಲೇ ವಿಮಾನದ ಇಂಧನ ಸ್ವಿಚ್‌ಗಳನ್ನು ಆಫ್ ಮಾಡಲಾಗಿದೆ ಎಂಬ ಆಘಾತಕಾರಿ ವಿಚಾರವನ್ನು ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಇತ್ತೀಚೆಗಷ್ಟೇ ವರದಿ ಮಾಡಿತು. ವಿಮಾನದ ಕಾಕ್‌ಪಿಟ್‌ನಿಂದ ಬಂದ ಧ್ವನಿ ರೆಕಾರ್ಡಿಂಗ್‌ಗಳ ವಿಶ್ಲೇಷಣೆಯಿಂದ ಈ ಸಂಗತಿ ಬಯಲಾಗಿದೆ ಎಂದು ಪತ್ರಿಕೆ ಹೇಳಿದೆ. ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಈ ದುರಂತವು ತಾಂತ್ರಿಕ ದೋಷದಿಂದ ಉಂಟಾಗಿಲ್ಲ, ಬದಲಾಗಿ "ಉದ್ದೇಶಪೂರ್ವಕ ಕೃತ್ಯ"ದ ಪರಿಣಾಮ ಎಂದು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನುವ ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ಚರ್ಚೆಗಳ ಬಗ್ಗೆ ತಿಳಿದಿರುವಂತಹ ಎರಡು ಮೂಲಗಳನ್ನು ಉಲ್ಲೇಖಿಸಿ ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ವರದಿ ಮಾಡಿತು.
ಕೊರಿಯೆರ್ ಡೆಲ್ಲಾ ಸೆರಾ ವರದಿಯ ಪ್ರಕಾರ, ಜೂನ್ 12, 2025 ರಂದು ವಿಮಾನದ ಇಂಜಿನ್‌ಗೆ ಇಂಧನ ಕಡಿತಗೊಂಡ ನಂತರ ಸಂಭವಿಸಿದ ಅಪಘಾತವು ಯಾಂತ್ರಿಕ ವೈಫಲ್ಯದಿಂದಲ್ಲ, ಬದಲಾಗಿ ಉದ್ದೇಶಪೂರ್ವಕ ಕ್ರಮದಿಂದ ಸಂಭವಿಸಿದೆ ಎಂದು ಭಾರತೀಯ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ. ಅಧಿಕಾರಿಗಳು ಈಗ ತಮ್ಮ ಅಂತಿಮ ವರದಿಯನ್ನು ರೂಪಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಸಹಾಯ ಮಾಡುತ್ತಿರುವ ಅಮೆರಿಕದ ತಜ್ಞರು ಈ ಸಂಶೋಧನೆಗಳನ್ನು "ಒಂದು ಪ್ರಗತಿ" ಎಂದು ಬಣ್ಣಿಸಿದ್ದಾರೆ ಅಂತ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಘಟನೆಯ ಬಗ್ಗೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) 2025ರ ಜುಲೈ ತಿಂಗಳಲ್ಲಿ 15 ಪುಟಗಳ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತು.
ಇದರಲ್ಲಿ ವಿಮಾನ ದುರಂತಕ್ಕೆ ಕಾರಣವಾದ ನಿರ್ಣಾಯಕ ತಾಂತ್ರಿಕ ಘಟನೆಗಳು ಮತ್ತು ಕಾಕ್ಪಿಟ್ನಲ್ಲಿ ಪೈಲಟ್ಗಳಿಬ್ಬರ ಸಂಭಾಷಣೆ ವಿನಿಮಯಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿತು. ವಿಮಾನದಲ್ಲಿದ್ದ ಪೈಲಟ್ "ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?" ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್ ಹೇಳುವುದನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ ಎಂಬ ಅಂಶ ವರದಿಯಲ್ಲಿತ್ತು. ಇದೇ ಅಂಶವನ್ನು ಇಟಾಲಿಯನ್ ಪತ್ರಿಕೆಯು ಸಹ ಉಲ್ಲೇಖಿಸಿದೆ. ಪೈಲಟ್‌ಗಳಲ್ಲಿ ಒಬ್ಬರು ಇಂಜಿನ್ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಆಫ್ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಇದರಿಂದಾಗಿ ವಿಮಾನವು ಶಕ್ತಿಯನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಅಂದಹಾಗೆ, ಈ ವಿಮಾನದಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಪೈಲಟ್-ಇನ್-ಕಮಾಂಡ್ ಆಗಿದ್ದರೆ, ಮೊದಲ ಅಧಿಕಾರಿ ಕ್ಲೈವ್ ಕುಂದರ್ ಸಹ-ಪೈಲಟ್ ಆಗಿದ್ದರು.
ಇನ್ನು ಈ ಅಪಘಾತದ ಹಿಂದೆ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಕೈವಾಡ ಇರುವುದಾಗಿ ಶಂಕಿಸಲಾಗಿದೆ. ಏಕೆಂದರೆ, ಅಪಘಾತಕ್ಕೂ ಮುನ್ನ ಒಂದು ತಿಂಗಳಿಂದ ಸಭರ್ವಾಲ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು. ಯಾವಾಗ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ವರದಿ ಹೊರ ಬಂತೋ, ಪೈಲಟ್‌ಗಳ ಸಂಘಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಏಕೆಂದರೆ, ವರದಿಯಲ್ಲಿ ಪೈಲಟ್ಗಳದ್ದೇ ತಪ್ಪು ಎಂದು ಉಲ್ಲೇಖಿಸಲಾಗಿತ್ತು. ಸಭರ್ವಾಲ್ ಅವರ ತಂದೆ ಕೂಡ ತಮ್ಮ ಮಗನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದರು ಮತ್ತು ಹೊಸ ತನಿಖೆಗೆ ಒತ್ತಾಯಿಸಿದರು. ತಮ್ಮ ಮಗನ ಮಾನಸಿಕ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳನ್ನು ತಳ್ಳಿಹಾಕಿದರು. ಪತ್ನಿಯೊಂದಿಗಿನ ವಿಚ್ಛೇದನ ಸೇರಿದಂತೆ ಸಭರ್ವಾಲ್ ಅವರ ವೈಯಕ್ತಿಕ ಸಮಸ್ಯೆಗಳು ಆತಂಕ ಅಥವಾ ಖಿನ್ನತೆಗೆ ಕಾರಣವಾಗಿವೆ ಎಂಬ ಆರೋಪಗಳನ್ನು ತಂದೆ ನಿರಾಕರಿಸಿದರು.
ಇದೀಗ ನಾಗರಿಕ ವಿಮಾನಯಾನ ಸಚಿವರು ಅಧಿವೇಶನದಲ್ಲಿ ಉತ್ತರ ನೀಡಿದ್ದು, ಎಲ್ಲ ಸಂದೇಹಗಳಿಗೆ ಉತ್ತರ ಸಿಗಲು ಅಂತಿಮ ವರದಿ ಬರುವವರೆಗೂ ಕಾಯಬೇಕಿದೆ.

