ನವದೆಹಲಿ: 2025-26ನೇ ಸಾಲಿನಲ್ಲಿ ಎಥೆನಾಲ್ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಈ ತೀರ್ಪು, ಪೆಟ್ರೋಲ್ ಜೊತೆಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ಯೋಜನೆ ಮೇಲೆ ಪರಿಣಾಮ ಬೀರಲಿದೆ.
ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಮತ್ತು ಶೀಲ್ ನಾಗು ಅವರನ್ನು ಒಳಗೊಂಡ ನ್ಯಾಯಪೀಠವು, ಕೇಂದ್ರ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ, ಈ ಮಧ್ಯಂತರ ಆದೇಶ ಹೊರಡಿಸಿದೆ.
ಪ್ರಸಕ್ತ ವರ್ಷದ ಪೂರೈಕೆಯನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಳ ಮಾಡುವಂತೆ ಹಲವು ತೈಲ ಮಾರುಕಟ್ಟೆ ಕಂಪನಿಗಳಿಗೆ ಕರ್ನಾಟಕ ಹೈಕೋರ್ಟ್ ಕೇಳಿತ್ತು.
ಭಾರತ್ ಪೆಟ್ರೋಲಿಯಂ ಸಹಕಾರ ನಿಯಮಿತ ಪರವಾಗಿ ವಾದ ಮಂಡಿಸಿದ ವೆಂಕಟರಮಣಿ ಅವರು, ಹೈಕೋರ್ಟ್ ಆದೇಶವು ರಾಷ್ಟ್ರೀಯ ಎಥೆನಾಲ್ ಮಿಶ್ರಣ ನೀತಿಯನ್ನು ಅಸ್ಥಿರಗೊಳಿಸಲಿದೆ ಎಂದು ಹೇಳಿದರು.

