ಚೆನ್ನೈ: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮೇ 28ರ ಬಕ್ರೀದ್ ಹಬ್ಬದ ಮುನ್ನಾದಿನವಾಗಲಿ ಅಥವಾ ಬೇರೆ ಯಾವುದೇ ದಿನದಲ್ಲಾಗಲಿ ರಾಜ್ಯದಾದ್ಯಂತ ಯಾವುದೇ ಹಸು ಅಥವಾ ಕರುವನ್ನು ಹತ್ಯೆ ಮಾಡದಂತೆ ನೋಡಿಕೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಹಾಲು ಉತ್ಪಾದನೆ ಮತ್ತು ಗ್ರಾಮೀಣ ಆರ್ಥಿಕತೆಯ ಸುಧಾರಣೆಯ ಹಿತದೃಷ್ಟಿಯಿಂದ ಗೋಹತ್ಯೆಯನ್ನು ನಿಷೇಧಿಸಿದ್ದ 1976ರ ಆದೇಶದ ಆಧಾರದ ಮೇಲೆ ಹೈಕೋರ್ಟ್ ತೀರ್ಪು ನೀಡಿತ್ತು.
ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣೆ ಕಾಯ್ದೆ-1958ಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಉಲ್ಲೇಖಿಸಿದೆ.
ಈ ಕಾಯ್ದೆಯ ಅನ್ವಯ ಸಕ್ಷಮ ಅಧಿಕಾರಿಯಿಂದ ನೀಡಲಾದ ಪ್ರಮಾಣಪತ್ರದ ಆಧಾರದ ಮೇಲೆ ಕೆಲಸಕ್ಕೆ ಮತ್ತು ಸಂತಾನೋತ್ಪತ್ತಿಗೆ ಯೋಗ್ಯವಲ್ಲದ 10 ವರ್ಷಕ್ಕಿಂತ ಮೇಲ್ಪಟ್ಟ ಹಸುಗಳನ್ನು ಹತ್ಯೆ ಮಾಡಲು ಅನುಮತಿ ನೀಡುತ್ತದೆ.
ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಎಲ್‌ಐ) ವಿಚಾರಣೆ ನಡೆಸಿ ಹೈಕೋರ್ಟ್ ಈ ಆದೇಶವನ್ನು ನೀಡಿತ್ತು.
ಅರ್ಜಿದಾರರು ಕೇವಲ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರವೇ ಹತ್ಯೆ ಪ್ರಕ್ರಿಯೆಯನ್ನು ನಡೆಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. ಆದರೆ, ಮದ್ರಾಸ್ ಹೈಕೋರ್ಟ್ ರಾಜ್ಯದ ಯಾವುದೇ ಸ್ಥಳ ಮತ್ತು ದಿನಗಳಲ್ಲೂ ಗೋಹತ್ಯೆ ಮಾಡದಂತೆ ನಿಷೇಧ ಹೇರಿತ್ತು.

