ನವದೆಹಲಿ:ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯು ಕೇಂದ್ರದ ಒಬ್ಬ ಸಚಿವ ರಾಜೀನಾಮೆ ನೀಡುವಂತೆ ಮಾಡಿದೆ. 50 ದಿನಗಳಿಗೂ ಕಡಿಮೆ ಅವಧಿಯ ಈ ಹೋರಾಟವು ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲ; ಒಗ್ಗಟ್ಟಾಗಿ ಮುನ್ನಡೆಯಲು ವಿಫಲವಾಗುತ್ತಿರುವ ಪ್ರಮುಖ ವಿರೋಧ ಪಕ್ಷಗಳಿಗೂ ಸಂದೇಶ ರವಾನಿಸಿದೆ.
ವಿವಿಧ ಪಕ್ಷಗಳ ಸಂಸದರು ಬಿಜೆಪಿ ಸೇರುತ್ತಿರುವ ಕಾರಣ ವಿರೋಧ ಪಕ್ಷಗಳ ಬಲ ಕುಸಿಯುತ್ತಿರುವ ಹೊತ್ತಿನಲ್ಲಿ ಹೋರಾಟಕ್ಕೆ ನಿಂತ ವಿದ್ಯಾರ್ಥಿಗಳು ಅತಿದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. 'ಧರ್ಮೇಂದ್ರ ಪ್ರಧಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು' ಎಂಬುದಾಗಿ ಹೋರಾಟದ ಆರಂಭದಿಂದಲೂ ಇಟ್ಟಿದ್ದ ಬೇಡಿಕೆಯ ವಿಚಾರದಲ್ಲಿ ನಿಲುವಿಗೆ ಅಚಲವಾಗಿ ನಿಲ್ಲುವ ಮೂಲಕ, ತಾವು ಮತ ಹಾಕುವ ಪಕ್ಷ ಮತ್ತು ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು, ಪ್ರಮಾದಗಳು ಆದಾಗ ಅವರು ಬೆಲೆ ತೆರುವಂತಾಗಬೇಕು ಎಂಬ ಸಂದೇಶವನ್ನು ಮತದಾರರಿಗೂ ನೀಡಿದೆ.
ಪ್ರಧಾನಿ ಮೋದಿ ಸರ್ಕಾರವು ಹೋರಾಟವನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ, ಆಡಳಿತ ಪಕ್ಷವು (ಬಿಜೆಪಿ) ಇತ್ತೀಚಿನ ಚುನಾವಣೆಗಳಲ್ಲಿ ಗಳಿಸಿರುವ ಯಶಸ್ಸು ಮತ್ತು ಪಕ್ಷಗಳನ್ನು ಒಡೆದು ಸಂಸತ್ತಿನಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ವಿದ್ಯಾರ್ಥಿ ಚಳವಳಿ ತೋರಿಸಿಕೊಟ್ಟಿದೆ.
ಚಳವಳಿ ಸಂದರ್ಭದಲ್ಲಿ ಪ್ರದರ್ಶಿಸಲಾದ ಭಿತ್ತಿಪತ್ರಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮೀಮ್‌ಗಳು ಅಸಭ್ಯವೆನಿಸುವಂತಿದ್ದರೂ, ಅವೆಲ್ಲವೂ ಆಡಳಿತ ವಿಧಾನದಲ್ಲಿ ಬದಲಾವಣೆ ಬಯಸುತ್ತಿರುವ ಯುವಜನರ ಆಕ್ರೋಶದ ಅಭಿವ್ಯಕ್ತಿಗಳಾಗಿದ್ದವು ಎಂಬುದು ಗಮನಿಸಬೇಕಾದ ಸಂಗತಿ.
ಮೇಲ್ನೋಟಕ್ಕೆ ಈ ಹೋರಾಟವನ್ನು ಆಡಳಿತ ಪಕ್ಷದ ವಿರುದ್ಧದ ಯಶಸ್ಸು ಎಂದು ಪರಿಗಣಿಸಲಾಗುತ್ತಿದ್ದರೂ, ಅದರ ಉದ್ದೇಶವು ವಿರೋಧ ಪಕ್ಷಗಳೂ ಸೇರಿದಂತೆ ಇಡೀ ರಾಜಕೀಯ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ.
'ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಹಣದ ಬಲದಿಂದ ಸುಳ್ಳು ನಿರೂಪಣೆಗಳನ್ನು ಮಾಡಿ, ತನಗೆ ಪೂರಕವಾದ ವಾತಾವರಣ ಸೃಷ್ಟಿಸಿಕೊಳ್ಳುವ ಸರ್ಕಾರವನ್ನು ಹೇಗೆ ಎದುರಿಸಬೇಕು ಎಂಬ ಪಾಠವನ್ನು ಈ ಆಂದೋಲನ ಎಲ್ಲ ಪಕ್ಷಗಳಿಗೂ ಕಲಿಸಿದೆ' ಎಂದು ಸಿಪಿಐ ರಾಜ್ಯಸಭಾ ನಾಯಕ ಪಿ.ಸಂತೋಷ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ʼಕಾಕ್ರೋಚ್ʼ ಮುಂದಿನ ನಡೆ ಏನು?ನಮ್ಮ ಎಲ್ಲ ಬೇಡಿಕೆಗಳಿಗೆ ಸರ್ಕಾರ ಒಪ್ಪಿದೆ, ಪ್ರತಿಭಟನೆ ಅಂತ್ಯಗೊಂಡಿದೆ: ಸಿಜೆಪಿ
'ಸಂವಿಧಾನವು ಆಡಳಿತ ನಡೆಸಲು ಒಂದು ಮಾದರಿಯನ್ನು ನೀಡುತ್ತದೆ. ಸರ್ಕಾರವು ಅದನ್ನು ಉಲ್ಲಂಘಿಸಿದ ಪರಿಣಾಮ ಈ ಚಳವಳಿ ನಡೆಯಿತು. ಸರ್ಕಾರವು ಸಂವಿಧಾನವನ್ನು ಉಲ್ಲಂಘಿಸಿದಾಗ ವಿರೋಧ ಪಕ್ಷಗಳು ಅದರ (ಸಂವಿಧಾನದ) ಮೂಲ ಆಶಯಗಳು, ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂಬುದನ್ನು ಈ ಚಳವಳಿ ಕಲಿಸಿದೆ' ಎಂದು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.
'ಜನಾಂದೋಲನಗಳ ಮೂಲಕ ಅನ್ಯಾಯದ ವಿರುದ್ಧ ನಿಲ್ಲುವುದೇ ಪ್ರಜಾಪ್ರಭುತ್ವದ ಸಾರ. ಪಕ್ಷಗಳು ಜನರೊಂದಿಗೆ ಮುನ್ನಡೆಯುವುದನ್ನು ಮರೆತಿವೆ' ಎಂದು ವಿರೋಧ ಪಕ್ಷದ ಮತ್ತೊಬ್ಬ ನಾಯಕ ಹೇಳಿದ್ದಾರೆ.

