ನವದೆಹಲಿ: ಭಾರತವನ್ನು ಅರಿಯಲು ವರ್ಚುವಲ್ (ಮೊಬೈಲ್/ಇಂಟರ್ನೆಟ್) ಮೂಲಕ ತಿಳಿಯುವ ಬದಲು ಯುವಕರು ನೇರವಾಗಿ ಗಡಿಯಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿ. ಅಲ್ಲಿನ ಜನರೊಂದಿಗೆ ಬೆರೆಯುವುದರಿಂದ 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ' ಯೋಜನೆ ಅರ್ಥ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಸಲಹೆ ನೀಡಿದ್ದಾರೆ.
ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿ ಗಡಿಭಾಗದಲ್ಲಿರುವ 74 'ಚೈತನ್ಯಶೀಲ' ಹಳ್ಳಿಗಳನ್ನು ಒಳಗೊಂಡ 2026ರ ವಿವಿವಿ ಕಾರ್ಯಕ್ರಮದಲ್ಲಿ ಭಾಗಿಯಾದ ಯುವಕರ ಜತೆ ಸಂವಾದ ನಡೆಸಿರುವ ಮೋದಿ ಅವರು, 'ನಮ್ಮ ದೇಶದ ಗಡಿ ಭಾಗದ ಹಳ್ಳಿಗಳಲ್ಲಿ ದೇಶಪ್ರೇಮ ಇನ್ನೂ ಉಳಿದಿವೆ. ಈ ಯೋಜನೆಯಲ್ಲಿ ಭಾಗಿಯಾಗುವ ಯುವಕರು ಡಿಜಿಟಲ್ ಮೂಲಕ ಮಾಹಿತಿ ಪಡೆಯುವುದಕ್ಕಿಂತ ಆ ಹಳ್ಳಿಗಳಿಗೆ ನೇರ ಭೇಟಿ ನೀಡಿ ಹಳ್ಳಿಗರೊಂದಿಗೆ ಸಂಪರ್ಕ ಸಾಧಿಸಲು ಹೆಚ್ಚಿನ ಸಹಾಯ ಆಗಲಿದೆ' ಎಂದಿದ್ದಾರೆ.
ದೇಶದ ಗಡಿ ಭಾಗದಲ್ಲಿರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ವಿಶೇಷ ಯೋಜನೆ 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ'. ಇದು ಗಡಿ ಭಾಗದ ಹಳ್ಳಿಗಳ ಜನರು ವಲಸೆ ಹೋಗುವುದನ್ನು ತಪ್ಪಿಸುವುದು, ಗಡಿ ಭದ್ರತೆಯನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.
ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ - ಯೋಜನೆಯಡಿ ಭಾರತದ ಉತ್ತರ ಭಾಗದಲ್ಲಿರುವ ಗಡಿ ಗ್ರಾಮಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಗಡಿ ಗ್ರಾಮಗಳಲ್ಲಿ ವಸತಿ ಯೋಜನೆ, ರಸ್ತೆ ಸಂಪರ್ಕ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು. ಈ ಮೂಲಕ ಅಲ್ಲಿನ ಜನರ ವಲಸೆ ತಪ್ಪಿಸುವುದು. ಜೊತೆಗೆ, ಗಡಿ ಭದ್ರತಾ ಸೇವೆಯನ್ನು ಬಲವರ್ಧನೆಗೊಳಿಸುವುದು. ಗಡಿ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿದೆ.

