ನವದೆಹಲಿ(PTI): 'ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ಹುದ್ದೆ, ಸ್ಥಾನಮಾನಕ್ಕಿಂತ ದೇಶ, ಯುವ ಸಮುದಾಯದ ಏಳಿಗೆ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಯೇ ಮುಖ್ಯ. ಧರ್ಮೇಂದ್ರ ಪ್ರಧಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಈ ತತ್ವಕ್ಕೆ ನಿದರ್ಶನವಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕಾರಣಕ್ಕೆ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಕ್ಕೆ ಶಾ ಹೀಗೆ ಪ್ರತಿಕ್ರಿಯಿಸಿದ್ದಾರೆ.
'ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ದೇಶದ ಯುವ ಜನತೆಯ ಭಾವನೆಗಳನ್ನು ಗೌರವಿಸುತ್ತದೆ. ಪ್ರಶ್ನೆಪತ್ರಿಕೆಗಳ ಸೋರಿಕೆಗೆ ಕಡಿವಾಣ ಹಾಕುವುದಕ್ಕಾಗಿ ಅಗತ್ಯ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ' ಎಂದು ಶನಿವಾರ ತಡರಾತ್ರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ಪ್ರಧಾನಿ ಮೋದಿ ಖಾತ್ರಿಪಡಿಸಿರುವುದು ಶ್ಲಾಘನೀಯ. ನೀಟ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದವರಿಗೆ ಈ ಕ್ರಮಗಳಿಂದ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ನನಗಿದೆ' ಎಂದು ಹೇಳಿದ್ದಾರೆ.
'ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಕ್ಕಾಗಿ ಪ್ರಧಾನ್ ಮಹತ್ವದ ಸುಧಾರಣೆ ತಂದರು. ಮಾತೃಭಾಷೆ ಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ, ಪಿಎಂ ಶ್ರೀ ಶಾಲೆಗಳ ವಿಸ್ತರಣೆ, ಡಿಜಿಟಲ್ ಶಿಕ್ಷಣ, ಕೌಶಲ ತರಬೇತಿ, ಉದ್ದಿಮೆ-ಶಿಕ್ಷಣ ನಡುವೆ ಸಮನ್ವಯವನ್ನು ತಮ್ಮ ಅಧಿಕಾರಾವಧಿಯಲ್ಲಿ ಬಲಪಡಿಸಿದ್ದರು' ಎಂದು ಪ್ರಧಾನ್ ಅವರನ್ನು ಶಾ ಹೊಗಳಿದ್ದಾರೆ.

