HEALTH TIPS

NTA: ನಂದನ್‌ ನಿಲೇಕಣಿ ನೇತೃತ್ವದ ಕಾರ್ಯಪಡೆಯಲ್ಲಿ ಇರುವ ತಜ್ಞರಿವರು..

 ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತರುವ ಕುರಿತು ಶಿಫಾರಸುಗಳನ್ನು ಮಾಡುವುದಕ್ಕಾಗಿ ಇನ್ಫೊಸಿಸ್‌ ಸಹಸಂಸ್ಥಾಪಕ ನಂದನ್‌ ನಿಲೇಕಣಿ ನೇತೃತ್ವದಲ್ಲಿ ಉನ್ನತಾಧಿಕಾರ ಕಾರ್ಯಪಡೆ ರಚಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. 


ಇಸ್ರೋ ಮಾಜಿ ಅಧ್ಯಕ್ಷ ಎಸ್.ಸೋಮನಾಥ್‌, ಗುಪ್ತಚರ ಸಂಸ್ಥೆ (ಐಬಿ) ಮಾಜಿ ನಿರ್ದೇಶಕ ತಪನ್‌ ಡೇಕಾ, ಚೆನ್ನೈ ಐಐಟಿ ನಿರ್ದೇಶಕ ವಿ.ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್‌ ಹಾಗೂ ಲಾಜಿಸ್ಟಿಕ್ಸ್ ತಜ್ಞ ಅಮೃತ್‌ಲಾಲ್ ಮೀನಾ ಈ ಕಾರ್ಯಪಡೆ ಸದಸ್ಯರಾಗಿದ್ದಾರೆ. ಇವರ ಹಿನ್ನೆಲೆ ಏನು, ಯಾವೆಲ್ಲ ಮಹತ್ವದ ನಿರ್ಧಾರಗಳಲ್ಲಿ ಇವರು ಭಾಗಿದಾರರು ಎಂದು ನೋಡುವುದಾದರೆ,

ನಂದನ್‌ ನಿಲೇಕಣಿ

ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಆಧಾರ್ ಯೋಜನೆಯ ರೂವಾರಿ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಸಂಸ್ಥಾಪಕರಾಗಿರುವ ಇವರು, ಜಿಎಸ್‌ಟಿ ವ್ಯವಸ್ಥೆಯ ತಾಂತ್ರಿಕ ಬೆನ್ನೆಲುಬಾಗಿದ್ದರು.

1955ರ ಜೂನ್‌ 2ರಂದು ಜನಿಸಿರುವ ಇವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದವರು. ಬೆಂಗಳೂರಿನ ಕಾಟನ್‌ ಬಿಷಪ್‌, ಧಾರವಾಡದ ಸೇಂಟ್ ಜೋಸಪ್‌ ಹೈಸ್ಕೂಲ್‌ನಲ್ಲಿ ಓದಿರುವ ಇವರು, ಬಾಂಬೆ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಎಸ್‌.ಸೋಮನಾಥ್

ಕೇರಳದ ಆಲಪ್ಪುಳ ಜಿಲ್ಲೆಯವರಾದ ಇವರು1963ರಲ್ಲಿ ಜನಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್. ಪದವಿಯನ್ನೂ ಪಡೆದಿದ್ದಾರೆ. ಮದ್ರಾಸ್‌ನ ಐಐಟಿಯಲ್ಲಿ ಪಿಎಚ್‌ಡಿ ಪಡೆದಿರುವ ಇವರು, 2022 ರಿಂದ 2025ರವರೆಗೆ ಇಸ್ರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಬಾಹ್ಯಾಕಾಶ ವಿಜ್ಞಾನಿಯಾಗಿ ಸುಮಾರು 40 ವರ್ಷಗಳ ಅನುಭವ ಹೊಂದಿದ್ದಾರೆ.

ತಪನ್‌ ಡೇಕಾ

ಅಸ್ಸಾಂನ ಬರ್ಪೇಟಾ ಜಿಲ್ಲೆಯ ಸಾರ್ಥೆಬರಿ ಗ್ರಾಮದಲ್ಲಿ 1963ರ ಫೆ.25ರಂದು ಜನಿಸಿದ್ದ ಡೇಕಾ, 1988ರಲ್ಲಿ ಐಪಿಎಸ್‌ಗೆ ಸೇರಿಕೊಂಡಿದ್ದರು.

ಹಿಮಾಚಲ ಪ್ರದೇಶ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು, 2022ರಿಂದ 2026ರವರೆಗೆ ಗುಪ್ತಚರ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

26/11 ಮುಂಬೈ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವಿ.ಕಾಮಕೋಟಿ

ತಮಿಳುನಾಡಿನ ಚೆನ್ನೈನಲ್ಲಿ 1968ರಲ್ಲಿ ಜನಿಸಿರುವ ಕಾಮಕೋಟಿ ಅವರು, ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಎಂ.ಎಸ್‌ ಮತ್ತು ಪಿಎಚ್‌ಡಿ ಪದವಿಯನ್ನೂ ಪಡೆದಿರುವ ಅವರು, 2022ರಿಂದ ಐಐಟಿ ಮದ್ರಾಸ್‌ನ ನಿರ್ದೇಶಕರಾಗಿದ್ದಾರೆ. ಇವರು ನಿಲೇಕಣಿ ನೇತೃತ್ವದ ಕಾರ್ಯಪಡೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರತಿನಿಧಿಸಲಿದ್ದಾರೆ.

ವಿಎಲ್‌ಎಸ್‌ಐ ವಿನ್ಯಾಸ, ಮಾಹಿತಿ ಭದ್ರತೆ ಮತ್ತು ಕಂಪ್ಯೂಟರ್ ಆರ್ಕಿಟೆಕ್ಚರ್‌ನಲ್ಲಿ ಪರಿಣತಿ ಹೊಂದಿದ್ದಾರೆ.

ಅನಿತಾ ಕರ್ವಾಲ್‌

ದೆಹಲಿ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿನಿಯಾಗಿರುವ ಅನಿತಾ ಕರ್ವಾಲ್‌, 1988ರ ಗುಜರಾತ್ ಕೆಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸಾರ್ವಜನಿಕ ಆಡಳಿತದಲ್ಲಿ 36 ವರ್ಷಗಳ ಅನುಭವ ಹೊಂದಿರುವ ಇವರು, ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಅನುಭವ ಹೊಂದಿದ್ದಾರೆ.

2017 ರಿಂದ 2021ರವರೆಗೆ ಸಿಬಿಎಸ್‌ಇ ಮುಖ್ಯಸ್ಥರಾಗಿ ನಂತರ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅಮೃತ್‌ಲಾಲ್ ಮೀನಾ

ರಾಜಸ್ಥಾನದ ಮೂಲದವರಾದ ಅಮೃತ್‌ಲಾಲ್ ಮೀನಾ ಅವರು 1989ರ ಬಿಹಾರ ಕೆಡರ್‌ನ ಐಎಎಸ್‌ ಅಧಿಕಾರಿ.

ಸಾರ್ವಜನಿಕ ಆಡಳಿತದಲ್ಲಿ 36 ವರ್ಷಗಳ ಅನುಭವ ಇರುವ ಇವರು, 25 ವರ್ಷ ಬಿಹಾರ ಸರ್ಕಾರ ಮತ್ತು 11 ವರ್ಷ ಭಾರತ ಸರ್ಕಾರದಡಿಯಲ್ಲಿ ಕೆಲಸ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries