HEALTH TIPS

ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲಿದೆ ಆಸ್ಟ್ರೇಲಿಯಾ: ಈ ಐತಿಹಾಸಿಕ ಒಪ್ಪಂದದ ಮಹತ್ವವೇನು?

 ನವದೆಹಲಿ:  ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಣಿಜ್ಯ ಉದ್ದೇಶದ ಯುರೇನಿಯಂ ಪೂರೈಕೆಗೆ ದಾರಿ ಮಾಡಿಕೊಡಲಿದೆ. ಇದರೊಂದಿಗೆ ರಕ್ಷಣೆ, ಕಡಲ ಭದ್ರತೆ, ನಿರ್ಣಾಯಕ ಖನಿಜಗಳು ಮತ್ತು ಉದಯೋನ್ಮುಖ ತಂತ್ರಜ್ಞಾನ ವಲಯಗಳಿಗೆ ಸಂಬಂಧಿಸಿದ ಹಲವಾರು ಒಪ್ಪಂದಗಳಿಗೂ ಉಭಯ ದೇಶಗಳು ಚಾಲನೆ ನೀಡಿವೆ. 


ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಆಸ್ಟ್ರೇಲಿಯಾದಲ್ಲಿ ಸುದೀರ್ಘ ಮಾತುಕತೆ ನಡೆಸಿದ ನಂತರ, ರಕ್ಷಣೆ ಮತ್ತು ಭದ್ರತೆಯ ಜಂಟಿ ಘೋಷಣೆ, ಕಡಲ ಸಹಕಾರದ ಮಾರ್ಗಸೂಚಿ ಹಾಗೂ ಸೈಬರ್ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ಸಹಭಾಗಿತ್ವವನ್ನು ಘೋಷಿಸಿದರು.

ಒಪ್ಪಂದದ ಪ್ರಾಮುಖ್ಯತೆ

ಈ ಪರಮಾಣು ಒಪ್ಪಂದವನ್ನು ಭೇಟಿಯ ಪ್ರಮುಖ ಯಶಸ್ಸು ಎಂದು ಬಣ್ಣಿಸಿದ ಪ್ರಧಾನಿ ಮೋದಿ, "ಇಂದು ನಾವು ಪರಮಾಣು ಇಂಧನ ಕ್ಷೇತ್ರದಲ್ಲಿ ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆಗೆ ಮಾರ್ಗವನ್ನು ಮುಕ್ತಗೊಳಿಸಲಿದೆ ಮತ್ತು ನಮ್ಮ ಸ್ವಚ್ಛ ಇಂಧನ ಗುರಿಗಳಿಗೆ ಹೊಸ ವೇಗವನ್ನು ನೀಡಲಿದೆ" ಎಂದು ಹೇಳಿದರು.

ಭಾರತ-ಆಸ್ಟ್ರೇಲಿಯಾ ನಾಗರಿಕ ಪರಮಾಣು ಒಪ್ಪಂದದ ಅಡಿಯಲ್ಲಿ ಮಾಡಿಕೊಳ್ಳಲಾದ ಈ ಆಡಳಿತಾತ್ಮಕ ವ್ಯವಸ್ಥೆಯು ಭಾರತದ ನಾಗರಿಕ ಪರಮಾಣು ವಿದ್ಯುತ್ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯಾದ ಯುರೇನಿಯಂ ಅನ್ನು ವಾಣಿಜ್ಯಿಕವಾಗಿ ಪೂರೈಸಲು ಅನುಕೂಲ ಮಾಡಿಕೊಡಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಒಪ್ಪಂದವು ಭಾರತದ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ನೆರವಾಗಲಿದೆ. ಜೊತೆಗೆ, ದೀರ್ಘಕಾಲದ ಇಂಧನ ಭದ್ರತೆಯನ್ನು ಬಲಪಡಿಸಲಿದೆ. ಪರಮಾಣು ಶಕ್ತಿಯ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಹಾಗೂ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ವಿಸ್ತರಿಸುವ ಗುರಿ ಹೊಂದಿರುವ 'ಶಾಂತಿ' (SಊಂಓಖಿI-Sಚಿಜಿe ಚಿಟಿಜ ಊoಟisಣiಛಿ ಂಜvಚಿಟಿಛಿemeಟಿಣ oಜಿ ಓuಛಿಟeಚಿಡಿ ಖಿeಛಿhಟಿoಟogಥಿ ಜಿoಡಿ Iಟಿಜiಚಿ) ಕಾಯ್ದೆಗೆ ಅನುಗುಣವಾಗಿ, ದೇಶದ ಸ್ವಚ್ಛ ಇಂಧನ ಗುರಿಗಳನ್ನು ಸಾಧಿಸಲು ಇದು ಬೆಂಬಲ ನೀಡಲಿದೆ.

ಈ ಒಪ್ಪಂದದ ಮಹತ್ವವನ್ನು ಎತ್ತಿಹಿಡಿದ ಅಲ್ಬನೀಸ್, "ಈ ವ್ಯವಸ್ಥೆಯು ಭಾರತಕ್ಕೆ ಆಸ್ಟ್ರೇಲಿಯಾದ ಯುರೇನಿಯಂ ರಫ್ತಿಗೆ ಅನುಕೂಲ ಮಾಡಿಕೊಡುತ್ತದೆ. ಇದು ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯದ ಪಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ, ಆಸ್ಟ್ರೇಲಿಯಾದ ಸಂಪನ್ಮೂಲ ವಲಯಕ್ಕೆ ಹೆಚ್ಚುವರಿ ಮಾರುಕಟ್ಟೆಯನ್ನು ಒದಗಿಸುತ್ತದೆ" ಎಂದು ತಿಳಿಸಿದರು.


ಪರಮಾಣು ಸಹಕಾರದ ಹೊರತಾಗಿ, ಉಭಯ ದೇಶಗಳು ನಿರ್ಣಾಯಕ ಖನಿಜಗಳ ವಲಯದಲ್ಲಿ ಸಹಯೋಗವನ್ನು ಬಲಪಡಿಸಲು ಒಪ್ಪಿಕೊಂಡಿವೆ. ಇದೇ ವೇಳೆ, ಪ್ರಧಾನಿ ಮೋದಿ ಅವರು 'ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳ ಮೇಲಿನ ಆಸ್ಟ್ರೇಲಿಯಾ-ಭಾರತ ಸಹಭಾಗಿತ್ವ'ಕ್ಕೆ ಚಾಲನೆ ನೀಡುವುದಾಗಿ ಘೋಷಿಸಿದರು.

ಉಭಯ ದೇಶಗಳು ನಿರ್ಣಾಯಕ ಖನಿಜಗಳ ಕಾರಿಡಾರ್ ಸ್ಥಾಪನೆಗಾಗಿ ಒಟ್ಟಾಗಿ ಕೆಲಸ ಮಾಡಲಿವೆ. 'ಭಾರತ-ಆಸ್ಟ್ರೇಲಿಯಾ ಕಡಲ ಭದ್ರತಾ ಸಹಕಾರ ಮಾರ್ಗಸೂಚಿ'ಯು ಮುಕ್ತ, ಸ್ಥಿರ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್ ವಲಯದ ನಿರ್ಮಾಣಕ್ಕೆ ಶ್ರಮಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ, ಉಭಯ ನಾಯಕರು ಭಯೋತ್ಪಾದನೆ ನಿಗ್ರಹ ಸಹಕಾರ ಮತ್ತು ಜಾಗತಿಕ ಸಂಘರ್ಷಗಳನ್ನು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಪರಿಹರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಉಭಯ ನಾಯಕರು ಜಂಟಿ ಘೋಷಣೆಯನ್ನು ಹೊರಡಿಸಿದರು. ಇದರ ಅಡಿಯಲ್ಲಿ ಆಯಕಟ್ಟಿನ ಸಮನ್ವಯವನ್ನು ಹೆಚ್ಚಿಸುವುದು, 'ಇಂಡಿಯಾ-ಆಸ್ಟ್ರೇಲಿಯಾ ಡಿಫೆನ್ಸ್ ಇನ್ನೋವೇಷನ್ ಕಾರಿಡಾರ್' ಮೂಲಕ ರಕ್ಷಣಾ ವಲಯದ ಸ್ಟಾರ್ಟ್‌ಅಪ್‌ಗಳನ್ನು ಪರಸ್ಪರ ಜೋಡಿಸುವುದು, ಕಡಲ ಸಹಕಾರವನ್ನು ವಿಸ್ತರಿಸುವುದು ಮತ್ತು ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಜಂಟಿ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಇದು ಮೋದಿ ಸಾಧನೆಯಲ್ಲ ಎಂದ ಕಾಂಗ್ರೆಸ್

ಭಾರತಕ್ಕೆ ಯುರೇನಿಯಂ ಪೂರೈಸುವ ಆಸ್ಟ್ರೇಲಿಯಾದ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಲಭಿಸಿದ ದೊಡ್ಡ ಯಶಸ್ಸು ಎಂಬ ಬಿಜೆಪಿಯ ಪ್ರತಿಪಾದನೆಯನ್ನು ಕಾಂಗ್ರೆಸ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ. ಈ ಪ್ರಕ್ರಿಯೆಯು ವರ್ಷಗಳ ಹಿಂದೆಯೇ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲೇ ಆರಂಭವಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.

2008ರ ಅಕ್ಟೋಬರ್‌ ನಲ್ಲಿ ಸಹಿ ಹಾಕಲಾದ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ನಂತರ, ಅಂದಿನ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು 2011ರ ಡಿಸೆಂಬರ್‌ ನಲ್ಲೇ ತಮ್ಮ ಲೇಬರ್ ಪಕ್ಷದ ಅನುಮೋದನೆಯನ್ನು ಪಡೆದುಕೊಂಡಿದ್ದರು ಎಂದು ವಿರೋಧ ಪಕ್ಷ ತಿಳಿಸಿದೆ.

ಮೋದಿ ಅವರ ನಾಯಕತ್ವದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಯುರೇನಿಯಂ ರಫ್ತು ಒಪ್ಪಂದವನ್ನು ಮಾಡಿಕೊಂಡಿವೆ ಎಂಬ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೇಳಿಕೆಯ ಬೆನ್ನಲ್ಲೇ ಈ ರಾಜಕೀಯ ವಾಗ್ವಾದ ನಡೆದಿದೆ.

ಬಿಜೆಪಿಯ ವಾದವನ್ನು ತಳ್ಳಿಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ರಫ್ತು ಮಾಡುವುದನ್ನು ಮೋದಿ ಸರ್ಕಾರದ ಸಾಧನೆ ಎಂದು ಬಿಂಬಿಸಲು ಬಿಜೆಪಿಯ ಜಾಲವು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.

"2008ರ ಅಕ್ಟೋಬರ್‌ ನಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ನಂತರ, 2011ರ ಡಿಸೆಂಬರ್ 4ರಂದು ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ತಮ್ಮ ಪಕ್ಷದ ಒಪ್ಪಿಗೆಯನ್ನು ಪಡೆದಿದ್ದರು" ಎಂದು ಜೈರಾಮ್ ರಮೇಶ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಾಯಕರು ಮತ್ತು ಬೆಂಬಲಿಗರು "ತಮ್ಮ ಜ್ಞಾನವನ್ನು ಇನ್ನಷ್ಟು ಸುಧಾರಿಸಿಕೊಳ್ಳುವ ಅಗತ್ಯವಿದೆ" ಎಂದು ಲೇವಡಿ ಮಾಡಿದ ಅವರು, ಭಾರತಕ್ಕೆ ಯುರೇನಿಯಂ ಮಾರಾಟಕ್ಕೆ ಅವಕಾಶ ಕಲ್ಪಿಸಲು ಆಸ್ಟ್ರೇಲಿಯಾದ ಲೇಬರ್ ಪಕ್ಷ ಬೆಂಬಲ ನೀಡಿತ್ತು ಎಂಬುದನ್ನು ಖಚಿತಪಡಿಸುವ 2011ರ ಡಿಸೆಂಬರ್‌ನ ಮಾಧ್ಯಮ ವರದಿಗಳ ಸ್ಕ್ರೀನ್‌ ಶಾಟ್‌ ಗಳನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಮಾಳವೀಯ, ಭಾರತವು ಪರಮಾಣು ಪ್ರಸರಣ ರಹಿತ ಒಪ್ಪಂದಕ್ಕೆ  ಸಹಿ ಹಾಕದ ಕಾರಣ 2010ರಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ನಿರಾಕರಿಸಿತ್ತು. ಆದರೆ, ಈಗ ಮೋದಿ ಅವರ ನಾಯಕತ್ವದಲ್ಲಿ ಈ ಒಪ್ಪಂದ ಸಾಧ್ಯವಾಗಿದೆ ಎಂದು ಹೇಳಿದ್ದರು.

"ಇದು ಕೇವಲ ಯುರೇನಿಯಂಗೆ ಸೀಮಿತವಾದುದಲ್ಲ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಬದಲಾದ ಸ್ಥಾನಮಾನವನ್ನು ಬಿಂಬಿಸುತ್ತದೆ. ಹಿಂದೆ ನಿರ್ಬಂಧಗಳ ಚೌಕಟ್ಟಿನಲ್ಲಿ ನೋಡಲಾಗುತ್ತಿದ್ದ ದೇಶವನ್ನು ಇಂದು ಅತ್ಯಂತ ವಿಶ್ವಾಸಾರ್ಹ ಕಾರ್ಯತಂತ್ರದ ಪಾಲುದಾರನಾಗಿ ಪರಿಗಣಿಸಲಾಗುತ್ತಿದೆ" ಎಂದು ಮಾಳವೀಯ ಹೇಳಿದ್ದರು.

ಗುರುವಾರ ಕೂಡ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಜೈರಾಮ್ ರಮೇಶ್, ಕಾಂಗ್ರೆಸ್ ದೇಶದಲ್ಲಿ ಮಹತ್ವದ 'ಟರ್ನಿಂಗ್ ಪಾಯಿಂಟ್‌'ಗಳನ್ನು ಸೃಷ್ಟಿಸಿದೆ. ಆದರೆ, ಬಿಜೆಪಿ ಕೇವಲ "ಯು-ಟರ್ನ್" ತೆಗೆದುಕೊಳ್ಳುವುದರಲ್ಲೇ ಪರಿಣತಿ ಹೊಂದಿದೆ ಎಂದು ಆರೋಪಿಸಿದರು. 2008ರ ಅಕ್ಟೋಬರ್ 8ರಂದು ಜಾರಿಗೆ ಬಂದ ಭಾರತ-ಅಮೆರಿಕ ಪರಮಾಣು ಸಹಕಾರ ಒಪ್ಪಂದದಿಂದಾಗಿ ಭಾರತ-ಆಸ್ಟ್ರೇಲಿಯಾ ನಾಗರಿಕ ಪರಮಾಣು ಸಹಕಾರ ಒಪ್ಪಂದ ಸಾಧ್ಯವಾಯಿತು. ಆದರೆ, ಅಂದು ಬಿಜೆಪಿ ಈ ಒಪ್ಪಂದವನ್ನು ವಿರೋಧಿಸಿತ್ತು ಎಂದು ಅವರು ನೆನಪಿಸಿದರು.

ಈ ನಾಗರಿಕ ಪರಮಾಣು ಇಂಧನ ಒಪ್ಪಂದವು ಭಾರತದ ಪರಮಾಣು ವಿದ್ಯುತ್ ಯೋಜನೆಗಳಿಗಾಗಿ ಆಸ್ಟ್ರೇಲಿಯಾದಿಂದ ವಾಣಿಜ್ಯಿಕವಾಗಿ ಯುರೇನಿಯಂ ಪೂರೈಕೆ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ, ಈ ಬೆಳವಣಿಗೆಯ ಶ್ರೇಯಸ್ಸು ಯಾವ ಸರ್ಕಾರಕ್ಕೆ ಸಲ್ಲಬೇಕು ಎಂಬ ಬಗ್ಗೆ ದೇಶದಲ್ಲಿ ರಾಜಕೀಯ ವಾಗ್ವಾದ ನಡೆಯುತ್ತಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries