ಬೀಜಿಂಗ್ : ಚೀನಾ ಶುಕ್ರವಾರ ತನ್ನ ದೇಶದ ಮೊದಲ ಮರುಬಳಕೆ ರಾಕೆಟ್‍ನ ಮೊದಲ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದು ದೇಶದ ಮರುಬಳಕೆ ಬಾಹ್ಯಾಕಾಶ ತಂತ್ರಜ್ಞಾನ ಕಾರ್ಯಕ್ರಮದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.
ದಕ್ಷಿಣ ಚೀನಾದ ಹೈನಾನ್ ವಾಣಿಜ್ಯ ಬಾಹ್ಯಾಕಾಶ ಉಡಾವಣಾ ಸ್ಥಳದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 12:15 ಕ್ಕೆ ಉಡಾವಣೆಗೊಂಡ ಪ್ರಾಯೋಗಿಕ `ಲಾಂಗ್ ಮಾರ್ಚ್-10ಬಿ' ರಾಕೆಟ್‍ನ ಉಡಾವಣೆಯ ಸಂದರ್ಭದಲ್ಲಿ ಈ ಸಾಧನೆ ಮಾಡಲಾಗಿದೆ.
ರಾಕೆಟ್‍ನ ಮೊದಲ ಹಂತವು ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಮೇಲಿನ ಹಂತದಿಂದ ಪ್ರತ್ಯೇಕಗೊಂಡು, ಸುಮಾರು ಆರು ನಿಮಿಷಗಳ ನಂತರ ಮರಳಿ ಬಂದಿತು. ಈ ಬೂಸ್ಟರ್ ಲಂಬವಾಗಿ ಕೆಳಗಿಳಿದು ಸಮುದ್ರದಲ್ಲಿದ್ದ ವೇದಿಕೆಯೊಂದರ ಮೇಲಿದ್ದ ನೆಟ್-ಕ್ಯಾಪ್ಚರ್ ವ್ಯವಸ್ಥೆಯ ಮೂಲಕ ಯಶಸ್ವಿಯಾಗಿ ನೆಲ ಮುಟ್ಟಿದೆ. ರಾಕೆಟ್ ಉಡಾವಣೆ ಮತ್ತು ಬೂಸ್ಟರ್ ಮರುಪಡೆಯುವಿಕೆ ಎರಡೂ ಯಶಸ್ವಿಯಾಗಿವೆ ಎಂದು ಚೀನಾದ ಸರಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ದೃಢಪಡಿಸಿದೆ.
ಚೀನಾ ಈ ವರ್ಷದ ಅಂತ್ಯದೊಳಗೆ ಮತ್ತೊಂದು ಉಡಾವಣೆಗಾಗಿ ಈಗ ಮರುಪಡೆದಿರುವ ಲಾಂಗ್ ಮಾರ್ಚ್-10ಬಿ ಬೂಸ್ಟರ್ ಅನ್ನು ಮರುಬಳಕೆ ಮಾಡಲು ಯೋಜಿಸಿದೆ.

