ಭೋಪಾಲ್ : ಈ ಹಿಂದೆ ಇಸ್ಲಾಂಪುರವೆಂಬ ಹೆಸರನ್ನು ಹೊಂದಿದ್ದ ಭೋಪಾಲ್ ಸಮೀಪದ ಐತಿಹಾಸಿಕ ಪಟ್ಟಣ ಜಗದೀಶಪುರದಲ್ಲಿ ರವಿವಾರ ವಿಶೇಷ ಸಭೆ ನಡೆಸಿದ ಮಧ್ಯಪ್ರದೇಶ ಸಂಪುಟವು ಸಮಾನ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಅನುಮೋದನೆ ನೀಡಿದೆ.
ಸಭೆಯ ಬಳಿಕ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ''ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಅನುಮೋದಿಸುವ ಸರಕಾರದ ನಿರ್ಧಾರವು ರಾಜ್ಯದ ಗತವೈಭವಕ್ಕೆ ಸಲ್ಲಿಸಿದ ಗೌರವವಾಗಿದೆ ಹಾಗೂ ಎಲ್ಲಾ ಪೌರರಿಗೂ ಸಮಾನತೆಯನ್ನು ಖಾತರಿಪಡಿಸುವತ್ತ ಇಟ್ಟಿರುವ ಒಂದು ದಿಟ್ಟ ಹೆಜ್ಜೆಯಾಗಿದೆ'' ಎಂದರು.
''ಸಮಾನನಾಗರಿಕ ಸಂಹಿತೆ ಮಸೂದೆ ಪೌರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೆಂದೂ ಮೋಹನ್ ಯಾದವ್ ಈ ಸಂದರ್ಭ ಸ್ಪಷ್ಟಪಡಿಸಿದರು
''ಸಮಾನ ನಾಗರಿಕ ಸಂಹಿತೆ ಮಸೂದೆಯು ಎಲ್ಲಾ ಸಮುದಾಯದವರಿಗೂ ಸಮಾನ ಅವಕಾಶಗಳನ್ನು ಹಾಗೂ ಹಕ್ಕುಗಳನ್ನು ಒದಗಿಸಲಿದೆ. '' ಓರ್ವ ವ್ಯಕ್ತಿ ರಾಮಚಂದ್ರ ಆಗಿರಲಿ, ಇಲ್ಲ ರಹೀಮನಾಗಿರಲಿ, ಪ್ರತಿಯೊಬ್ಬರೂ ಸಮಾನತೆಗೆ ಅರ್ಹರಾಗಿದ್ದಾರೆ'' ಎಂದು ಹೇಳಿದರು.
ಸಮಾನ ನಾಗರಿಕ ಸಂಹಿತೆ ಮಸೂದೆಯ ಕರಡನ್ನು ರಚಿಸುವ ಮುನ್ನ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ವಿಭಾಗೀಯ ಮಟ್ಟದಲ್ಲಿ ಸಮಾಲೋಚನೆಗಳನ್ನು ನಡೆಸಿತ್ತು ಎಂದರು.
ಭೋಪಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಚರ್ಚೆಗಳಲ್ಲಿ, ರಾಜಕೀಯ ಪಕ್ಷಗಳು ಹಾಗೂ ವಿವಿಧ ಧರ್ಮಗಳಿಗೆ ಸೇರಿದ ಸಾಮಾಜಿಕ ಸಂಘಟನೆಗಳು ಕೂಡಾ ಪಾಲ್ಗೊಂಡಿದ್ದವು. ಆದಾಗ್ಯೂ ಕಾಂಗ್ರೆಸ್ ಪಕ್ಷವು ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ದೂರವುಳಿದಿತ್ತು ಎಂದು ಮೋಹನ್ ಯಾದವ್ ತಿಳಿಸಿದರು.

