ಪೆರ್ಲ: ಅತ್ಯುತ್ತರ ಕೇರಳದ ಮಂಜೇಶ್ವರ ತಾಲೂಕು ಎಣ್ಮಕಜೆ ಪಂಚಾಯಿತಿಯ ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿರುವ ಸೇರಾಜೆಯ ಜನತೆ ತಮ್ಮ ಹಳೇ ದೋಣಿಯ ನಂಟು ಇನ್ನೂ ಕಡಿದುಕೊಂಡಿಲ್ಲ. ಸೀರೆಹೊಳೆಯನ್ನು ಅಡ್ಡ ದಾಟಲು ಸೇರಾಜೆ ಹಾಗೂ ಕಾಮಜಾಲು, ಬಾಳೆಕಲ್ಲು ಜನತೆಗೆ ಈ ಪುಟ್ಟ ದೋಣಿ ಬಿಟ್ಟರೆ, ಅನ್ಯ ಮಾರ್ಗವಿಲ್ಲ.
ಕೇರಳ ಮತ್ತು ಕರ್ನಾಟಕದ ಗಡಿಯಾಗಿ ಗುರುತಿಸಲ್ಪಟ್ಟಿರುವ ಸೇರಾಜೆಯ ಸೀರೆ ಹೊಳೆಯನ್ನು ಅಡ್ಡದಾಟಿ ಸಂಚರಿಸಬೇಕಾದರೆ, ಕಿರು ದೋಣಿಯೇ ಏಕೈಕ ಆಸರೆ. ಸೇರಾಜೆ ಹೊಳೆಯ ಎರಡೂ ಪಾಶ್ರ್ವದಲ್ಲಿರುವ ಕುಟುಂಬಗಳಿಗೆ ತಮ್ಮ ಸಂಬಂಧಿಕರು ಅಥವಾ ಜಮೀನಿಗೆ ಹೋಗಿ ಬರಬೇಕಾದರೆ ಹೊಳೆ ದಾಟಿ ಸಂಚರಿಸುವುದು ಅನಿವಾರ್ಯ. ಸೇರಾಜೆ ಜನತೆಗೆ ಬಾಳೆಕಲ್ಲು, ಕಾಮಜಾಲು, ಕುಕ್ಕಾಜೆ, ಮಾಣಿಲ, ತಾರಿದಳ ಸಂಚರಿಸಬೇಕಾದರೆ ಹೊಳೆದಾಟಿ ತೆರಳಬೇಕು. ಇದೇ ಕಾರಣಕ್ಕಾಗಿ ಇಲ್ಲಿನ ಜನತೆಗೆ ಸಣ್ಣ ದೋಣಿ ಬಲು ದೊಡ್ಡ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದೆ. ಹೊಳೆಯ ಒಂದು ಪಶ್ರ್ವದಲ್ಲಿ ಎಣ್ಮಕಜೆ ಹಾಗೂ ಪುತ್ತಿಗೆ ಪಂಚಾಯಿತಿಗೆ ಸಂಪರ್ಕ ಕಲ್ಪಿಸುತ್ತಿದ್ದರೆ, ಅತ್ತ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ ಪಂಚಾಯಿತಿಗೆ ಸಂಪರ್ಕ ಕಲ್ಪಿಸುತ್ತಿದೆ.
ಇಲ್ಲಿನ ದೋಣಿಗೆ ಏಳೆಂಟು ದಶಕಕ್ಕೂ ಹೆಚ್ಚಿನ ಇತಿಹಾಸವಿದೆ. ಹಿರಿಯ ಬಿಲ್ಲವ ಮುಖಂಡ, ಕಮ್ಯೂನಿಸ್ಟ್ ನೇತಾರ ಸೇರಾಜೆ ಮದನ ಮಾಸ್ಟರ್ ಅವರ ಪ್ರಯತ್ನದ ಫಲವಾಗಿ ದೋಣಿ ಯಾನ ಆರಂಭಗೊಂಡಿರುವುದಾಗಿ ಸ್ಥಳೀಯರು ನೆನಪಿಸುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರು ದೋಣಿಯಲ್ಲಿ ಅಪಾಯಕಾರಿಯಾಗಿ ಸಂಚಾರ ನಡೆಸಬೇಕಾದ ಅನಿವಾರ್ಯತೆಯಿದೆ. ದೋಣಿ ನಡೆಸುವವರ ಚಾಕಚಕ್ಯತೆ ಇಲ್ಲಿ ಬಲು ಮುಖ್ಯ. ಕಳೆದ ಹಲವು ವರ್ಷಗಳಿಂದ ಇಲ್ಲಿನ ನಿವಾಸಿ ದೂಮ ಪೂಜಾರಿ ದೋಣಿ ನಡೆಸುತ್ತಿದ್ದಾರೆ. ನೀರಿನ ಸೆಳೆತ ಕಡಿಮೆ ಇರುವ ಪ್ರದೇಶದಲ್ಲಿ ಅತೀ ಜಾಗರೂಕತೆಯಿಂದ ದೋಣಿಯನ್ನು ಮುನ್ನಡೆಸಿಕೊಂಡು ಹೋಗಬೇಕಾಗುತ್ತದೆ ಎಂಬುದಾಗಿ 72ರ ಹರೆಯದ ದೂಮ ಪೂಜಾರಿ ತಿಳಿಸುತ್ತಾರೆ.
ತೂಗು ಸೇತುವೆಗೆ ಮನವಿ:
ಸೀರೆಹೊಳೆಗೆ ಬಾಕಿಲಪದವು ಹಾಗೂ ಪೂವನಡ್ಕದಲ್ಲಿ ಸೇತುವೆ ನಿರ್ಮಾಣದ ಯೋಜನೆಯನ್ನು ಕೇರಳ ಹಾಗೂ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದು, ಸೇರಾಜೆ ಜನತೆಗೆ ಮಾತ್ರ ಇವೆರಡೂ ಸೇತುವೆಗಳಿಂದ ಹೆಚ್ಚಿನ ಪ್ರಯೋಜನ ಲಭ್ಯವಾಗುತ್ತಿಲ್ಲ. ಇಲ್ಲಿನ ಜನತೆಗೆ ಮಳೆಗಾಲದಲ್ಲಿ ತಮ್ಮ ಕೃಷಿ ಭೂಮಿಗೆ ತೆರಳಲು, ಸಂಬಂಧಿಕರ ಮನೆಗೆ ತೆರಳಬೇಕಾದರೆ ಏಕೈಕ ಆಸರೆಯಾಗಿರುವ ಸಣ್ಣ ದೋಣಿಯನ್ನು ಆಶ್ರಯಿಸಿರಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ಸೇರಾಜೆಯಲ್ಲಿ ತೂಗು ಸೇತುವೆಯೊಂದನ್ನು ನಿರ್ಮಿಸುವಂತೆ ಇಲ್ಲಿನ ಜನತೆ ಸಂಬಂಧಪಟ್ಟವರನ್ನು ಆಗ್ರಹಿಸುತ್ತಾ ಬಂದಿದ್ದಾರೆ. ನೂರು ಮೀಟರ್‍ಗೂ ಕಡಿಮೆ ಅಗಲ ಹೊಂದಿರುವ ಇಲ್ಲಿನ ಹೊಳೆಗೆ ತೂಗು ಸೇತುವೆ ನಿರ್ಮಿಸುವುದು ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗದು ಎಂಬುದು ಇಲ್ಲಿನ ಜನತೆಯ ಅಭಿಪ್ರಾಯವಾಗಿದೆ. ಬೇಸಿಗೆಯಲ್ಲಿ ಸ್ಥಳೀಯ ಕೃಷಿಕರು ಸಾವಿರಾರು ರೂ.ಖರ್ಚುಮಾಡಿ ಹೊಳೆಗೆ ಅಡ್ಡ ಕೃಷಿ ಅಗತ್ಯಕ್ಕಾಗಿ ತಾತ್ಕಾಲಿಕ ಕಟ್ಟವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಏಪ್ರಿಲ್-ಮೇ ತಿಂಗಳ ವರೆಗೂ ಹೊಳೆಯಲ್ಲಿ ನೀರು ದಾಸ್ತಾನುಗೊಳ್ಳುತ್ತಿರುವುದರಿಂದ ಬೇಸಿಗೆ ಹಾಗೂ ಮಳೆಗಾಲದಲ್ಲಿ ದೋಣಿಯನ್ನೇ ಆಶ್ರಯಿಸಿರಬೇಕಾಗುತ್ತಿದೆ.



