ಇಂಫಾಲ್: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಂಗಳವಾರ (ಜುಲೈ 21) ನಡೆದ ಧರಣಿಯನ್ನು ಮಣಿಪುರ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಟೀಕಿಸಿದ್ದಾರೆ. 'ದೇಶದ ಯುವಕರಿಗೆ ಬೇಕಿರುವುದು ಪರಿಹಾರವೇ ಹೊರತು, ರಾಜಕೀಯ ನಾಟಕವಲ್ಲ' ಎಂದು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಂಗ್, 'ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಜಕೀಯಗೊಳಿಸಲು ಮತ್ತು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪದೇ ಪದೇ ನಡೆಸುತ್ತಿರುವ ಪ್ರಯತ್ನಗಳು ದುರದೃಷ್ಟಕರ' ಎಂದು ಹೇಳಿದ್ದಾರೆ.
'ಸಂಸತ್ತಿನಲ್ಲಿ ನೀಟ್ ವಿಚಾರವಾಗಿ ಸಮಗ್ರವಾಗಿ ಚರ್ಚಿಸಲು ಸಿದ್ಧವಿರುವುದಾಗಿ ಸರ್ಕಾರ ತಿಳಿಸಿದರೂ, ವಿರೋಧ ಪಕ್ಷವು ಪ್ರತಿಭಟನೆ ಮುಂದುವರಿಸಿದೆ. ಸ್ಥಾಪಿತ ಭದ್ರತಾ ಶಿಷ್ಟಾಚಾರ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ನಿರ್ಲಕ್ಷಿಸಿ ಪ್ರಧಾನಿಯವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದೆ' ಎಂದು ಟೀಕಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ 'ಸಂಸತ್ ಚಲೊ' ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಪ್ರಧಾನಿ ನಿವಾಸದ ಹೊರಗೆ ಧರಣಿ ಕುಳಿತಿದ್ದರು.
ಲೋಕಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಜೊತೆಗೆ, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಇತರ ಪಕ್ಷಗಳ ನಾಯಕರೂ ಪಾಲ್ಗೊಂಡಿದ್ದರು. ಅವರನ್ನೆಲ್ಲ, ದೆಹಲಿ ಪೊಲೀಸರು ವಶಕ್ಕೆ ಪಡೆದು, ಧರಣಿಯನ್ನು ತಡೆದಿದ್ದರು.
ಈ ಕುರಿತು 'ಪ್ರಜಾಸತ್ತಾತ್ಮಕ ಚರ್ಚೆ, ಅರ್ಥಪೂರ್ಣ ಸುಧಾರಣೆಗಳು, ಹೊಣೆಗಾರಿಕೆಯ ಮೂಲಕ ವಿದ್ಯಾರ್ಥಿಗಳ ಪ್ರತಿಯೊಂದು ನೈಜ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ ಯುವಕರಿಗೆ ಪರಿಹಾರ, ಖಾತ್ರಿ ಮತ್ತು ಜವಾಬ್ದಾರಿಯತ ನಾಯಕತ್ವ ಬೇಕಿದೆ; ರಾಜಕೀಯ ನಾಟಕವಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

