HEALTH TIPS

ಯುಜಿಸಿ-ನೆಟ್ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ: ತನಿಖೆಗೆ ರಾಹುಲ್ ಆಗ್ರಹ

 ನವದೆಹಲಿ: ದೇಶದಾದ್ಯಂತ ಜೂನ್ 30 ರಂದು ನಡೆದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಯುಜಿಸಿ-ನೆಟ್‌) ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. 


ಪರೀಕ್ಷೆ ಆರಂಭವಾಗುವ ಕೆಲ ಗಂಟೆಗಳ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪಿಡಿಎಫ್‌ ಫೈಲ್‌ನಲ್ಲಿದ್ದ ಪ್ರಶ್ನೆಗಳೇ ಮೂಲ ಪರೀಕ್ಷೆಯಲ್ಲೂ (ಸಮಾಜಶಾಸ್ತ್ರ) ಬಂದಿವೆ ಎಂದು ಹರಿಯಾಣದ ವಿದ್ಯಾರ್ಥಿ ಸಂಘಟನೆಯ ನಾಯಕರು ಆರೋಪಿಸಿದ್ದಾರೆ.

ಈ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಕರಣ ಬಯಲಿಗೆ ತಂದ ಯೂಟ್ಯೂಬ್ ವಿಡಿಯೊ

ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಫಾರ್ ಆಲ್ಟರ್ನೇಟಿವ್ ಪಾಲಿಟಿಕ್ಸ್ (ಂSಂP) ಹರಿಯಾಣ ರಾಜ್ಯಾಧ್ಯಕ್ಷ ದೀಪಕ್ ಧನಕರ್ ಮತ್ತು ಸಂಘಟನೆಯ ನಾಯಕ ಅಂಕಿತ್ ಫೋಗಟ್ ಅವರು ಜುಲೈ 6 ರಂದು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಹಗರಣವನ್ನು ಬಯಲಿಗೆಳೆದಿದ್ದಾರೆ.

ಯುಜಿಸಿ-ನೆಟ್‌ ಪರೀಕ್ಷೆಗಿಂತ ಕೆಲ ವಾರಗಳ ಮೊದಲು, ಜಾಲವೊಂದು ನಮ್ಮನ್ನು ಸಂಪರ್ಕಿಸಿದ್ದು, ಅವರು ತಮ್ಮ ಬಳಿ ವಿವಿಧ ರಾಷ್ಟ್ರೀಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಇರುವುದಾಗಿ ಹೇಳಿಕೊಂಡಿದ್ದರು. ಯುಜಿಸಿ-ನೆಟ್, ಸಿಎಸ್‌ಐಆರ್-ನೆಟ್, ಹರಿಯಾಣ ಶಿಕ್ಷಕರ ಅರ್ಹತಾ ಪರೀಕ್ಷೆ (ಎಚ್‌ಟಿಇಟಿ) ಮತ್ತು ಸಹಾಯಕ ಜಿಲ್ಲಾ ವಕೀಲ (ಎಡಿಎ) ಸೇರಿ ವಿವಿಧ ರಾಷ್ಟ್ರೀಯ ಪರೀಕ್ಷೆಗಳ ವಿವಿಧ ಪ್ರಶ್ನೆಪತ್ರಿಕೆಗಳನ್ನು ತಂದುಕೊಡುವುದಾಗಿ ಆ ವ್ಯಕ್ತಿಗಳು ಹೇಳಿದ್ದರು.

₹ 2.25 ಲಕ್ಷಕ್ಕೆ ಬೇಡಿಕೆ

ಬಿಹಾರ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಸಕ್ರಿಯವಾಗಿರುವ ಈ ಜಾಲವು ಪ್ರಶ್ನೆಪತ್ರಿಕೆಗಾಗಿ ಪ್ರತಿ ಅಭ್ಯರ್ಥಿಯಿಂದ ₹2.25 ಲಕ್ಷಕ್ಕೆ ಬೇಡಿಕೆ ಇಟ್ಟಿತ್ತು ಎಂದು ವಿದ್ಯಾರ್ಥಿ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.

ಆರಂಭದಲ್ಲಿ ನಮಗೆ ಸಿಕ್ಕ ಪ್ರಶ್ನೆ ಪತ್ರಿಕೆಗಳು ಮೂಲ ಪರೀಕ್ಷೆಗೆ ಹೊಂದಿಕೆಯಾಗಿರಲಿಲ್ಲ. ಆದರೆ ಜೂನ್ 30ರ ಸಮಾಜಶಾಸ್ತ್ರ ಪರೀಕ್ಷೆಗೂ ಮೊದಲು ಅವರು ನಮಗೆ ಮತ್ತೊಂದು ಸೆಟ್ ಪ್ರಶ್ನೆಪತ್ರಿಕೆಗಳನ್ನು ತೋರಿಸಿದ್ದರು. ಆ ಪಿಡಿಎಫ್‌ ನಲ್ಲಿ ಸುಮಾರು 100 ಪ್ರಶ್ನೆಗಳಿದ್ದವು. ಅವುಗಳಲ್ಲಿ ಹೆಚ್ಚಿನ ಪ್ರಶ್ನೆಗಳು ಸಮಾಜಶಾಸ್ತ್ರ ಪರೀಕ್ಷೆಯಲ್ಲಿ ಬಂದಿದ್ದವು ಎಂದೂ ಅವರು ಹೇಳಿದ್ದಾರೆ.

4:08ಕ್ಕೆ ತಯಾರಾಗಿದ್ದ ಪಿಡಿಎಫ್:

ಜೂನ್ 30 ರಂದು ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಆರಂಭವಾಗುವ ಮುನ್ನವೇ, ಅಂದರೆ ಮುಂಜಾನೆ 4:08ಕ್ಕೆ ತಯಾರಿಸಲಾಗಿದ್ದ ಪಿಡಿಎಫ್ ಫೈಲ್‌ನಲ್ಲಿ ಸುಮಾರು 100 ಪ್ರಶ್ನೆಗಳಿದ್ದವು. ಅವುಗಳಲ್ಲಿ ಹಲವಾರು ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಈ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.

ಈ ಆರೋಪಗಳ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಧಾನಿ, ಶಿಕ್ಷಣ ಸಚಿವರ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾಜಶಾಸ್ತ್ರ ಪರೀಕ್ಷೆಯಲ್ಲಿದ್ದ ಸುಮಾರು 90 ಪ್ರಶ್ನೆಗಳು ಸೋರಿಕೆಯಾದ ದಾಖಲೆಗೆ (ಪ್ರಶ್ನೆ ಪತ್ರಿಕೆ ಪಿಡಿಎಫ್‌) ಹೊಂದಿಕೆಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಇದು ಅತ್ಯಂತ ಆಘಾತಕಾರಿ ಸಂಗತಿ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ. ಅಲ್ಲದೇ ಪ್ರಧಾನಿ ಹಾಗೂ ಶಿಕ್ಷಣ ಸಚಿವರಿಂದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

ಮುಂದುವರಿದು ಪರೀಕ್ಷೆಗೂ ಮುನ್ನ ಈ ಪ್ರಶ್ನೆಪತ್ರಿಕೆ ಕೇವಲ ಎನ್‌ಟಿಎ ಬಳಿ ಮಾತ್ರ ಇರಲು ಸಾಧ್ಯ. ಹಾಗಾಗಿ ಯಾರು ಸಿಸ್ಟಮ್ ಆಕ್ಸೆಸ್ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಎಐ ರಚಿತ ಪ್ರಶ್ನೆಗಳು ಎಂದಿದ್ದ ವಿದ್ಯಾರ್ಥಿಗಳು

ಈ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮುನ್ನಲೆಗೆ ಬರುವ ಮೊದಲೇ ಜೂನ್ 30 ರಂದು ಪರೀಕ್ಷೆ ಬರೆದಿದ್ದ ಹಲವು ವಿದ್ಯಾರ್ಥಿಗಳು ಎನ್‌ಟಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಸಮಾಜಶಾಸ್ತ್ರ ಪತ್ರಿಕೆಯಲ್ಲಿ ಹೆಚ್ಚಿನ ಪ್ರಮಾಣದ ಕಾಗುಣಿತ ದೋಷಗಳಿದ್ದವು. ಅಲ್ಲದೇ ಪ್ರಶ್ನೆಪತ್ರಿಕೆಯನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ತರಾತುರಿಯಲ್ಲಿ ಸಿದ್ಧಪಡಿಸಿದಂತೆ ಕಾಣುತ್ತಿದೆ ಎಂದು ಅವರು ದೂರಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries