ನವದೆಹಲಿ: ಭಾರತ-ನ್ಯೂಜಿಲೆಂಡ್ ನಡುವಿನ ಪ್ರಸ್ತಾಪಿತ ವ್ಯಾಪಾರ ಒಪ್ಪಂದವು ಭಾರತದ ಮಾರುಕಟ್ಟೆಗೆ ನ್ಯೂಜಿಲೆಂಡ್‌ನ ಉದ್ಯಮಗಳಿಗೆ ಪ್ರವೇಶ ವಿಸ್ತರಿಸುವ ಮೂಲಕ ದೇಶಕ್ಕೆ ಅತ್ಯಂತ ಅನುಕೂಲಕರವಾಗಿರಲಿದೆ ಎಂದು ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಹೇಳಿದ್ದಾರೆ.
ಇದೇ 10ರಂದು ಪ್ರಧಾನಿ ನರೇಂದ್ರ ಮೋದಿ, ನ್ಯೂಜಿಲೆಂಡ್ ಭೇಟಿಗೆ ಸಮಯ ನಿಗದಿಯಾಗಿದ್ದು, ಅದರ ಬೆನ್ನಲ್ಲೇ ಲಕ್ಸನ್ ಈ ಹೇಳಿಕೆ ನೀಡಿದ್ದಾರೆ.
ಈ ಒಪ್ಪಂದ ಆರ್ಥಿಕ ಅನುಕೂಲತೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಒಪ್ಪಂದದ ಬಳಿಕ ಮೊದಲ ದಿನದಿಂದಲೇ ಭಾರತಕ್ಕೆ ನ್ಯೂಜಿಲೆಂಡ್ ಮಾಡುವ ರಫ್ತಿನ ಶೇ 57ರಷ್ಟು ಉತ್ಪನ್ನಗಳು ತೆರಿಗೆ ರಹಿತವಾಗಿರುತ್ತವೆ ಎಂದಿದ್ದಾರೆ.
'ನಮ್ಮ ಮತ್ತು ಭಾರತ ವ್ಯಾಪಾರ ಒಪ್ಪಂದದ ಮೂಲಕ ನ್ಯೂಜಿಲೆಂಡ್ ವ್ಯಾಪಾರ ವೃದ್ಧಿಸಲಿದೆ. ನಾವು ಭಾರತಕ್ಕೆ ರಫ್ತು ಮಾಡುವ ವಸ್ತುಗಳ ಪೈಕಿ ಶೇ 57ರಷ್ಟು ವಸ್ತುಗಳು ಮೊದಲ ದಿನದಿಂದಲೇ ಸುಂಕ ಮುಕ್ತವಾಗಿರುತ್ತವೆ' ಎಂದು ಲಕ್ಸನ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಲಕ್ಸನ್ ಅವರ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಅವರು ಜುಲೈ 10 ರಿಂದ 11 ರವರೆಗೆ ನ್ಯೂಜಿಲೆಂಡ್‌ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.
ಆಕ್ಲೆಂಡ್‌ನಲ್ಲಿ ಮೋದಿ ಅವರು ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯು ವ್ಯಾಪಾರ, ವಾಣಿಜ್ಯ ಮತ್ತು ರಕ್ಷಣೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವತ್ತ ಗಮನಹರಿಸುತ್ತದೆ.

