ಪಟ್ನಾ: ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ವರಿಷ್ಠ ಲಾಲೂ ಪ್ರಸಾದ್ ಅವರ ಪರಿವಾರದೊಳಗಿನ ಮುನಿಸು ಗುರುವಾರ ಮತ್ತೊಮ್ಮೆ ಬಹಿರಂಗಗೊಂಡಿದೆ.
ಬಿಹಾರದ ಸರಣ್ ಜಿಲ್ಲೆಯ ಪಕ್ಷದ ಪದಾಧಿಕಾರಿಯೊಬ್ಬರನ್ನು ಅಮಾನತು ಮಾಡಿರುವ ಕುರಿತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ತೀವ್ರವಾಗಿ ಖಂಡಿಸಿದ್ದಾರೆ.
ಈ ಮೂಲಕ ಸಹೋದರ ಹಾಗೂ ಆರ್‌ಜೆಡಿ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್ ನೇತೃತ್ವದ ಪಕ್ಷದ ನಾಯಕತ್ವದ ವಿರುದ್ಧ ತಮಗಿರುವ ಭಿನ್ನಾಭಿಪ್ರಾಯವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಈಚೆಗೆ ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದ ಮೇಲೆ ಅಮಾನತುಗೊಂಡಿದ್ದ ಸರಣ್ ಜಿಲ್ಲೆಯ ಆರ್‌ಜೆಡಿ ವಕ್ತಾರ ಹರೇ ಲಾಲ್ ಯಾದವ್ ಅವರ ಬೆಂಬಲಕ್ಕೆ ರೋಹಿಣಿ ನಿಂತಿದ್ದಾರೆ.
ಪಕ್ಷದಲ್ಲೇ ಇದ್ದುಕೊಂ ವಿರೋಧಿಗಳಿಗಾಗಿ ಕೆಲಸ ಮಾಡುವವರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಹರೇ ಲಾಲ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತೇಜಸ್ವಿ ಯಾದವ್ ಹೆಸರನ್ನು ರೋಹಿಣಿ ನೇರವಾಗಿ ಪ್ರಸ್ತಾಪಿಸಿಲ್ಲ. ಆದರೆ, ತೇಜಸ್ವಿ ಆಪ್ತರಾದ ರಾಜ್ಯಸಭಾ ಸಂಸದ ಸಂಜಯ್ ಯಾದವ್, ವಿಧಾನ ಪರಿಷತ್ ಸದಸ್ಯ ಸುನಿಲ್ ಕುಮಾರ್ ಸಿಂಗ್ ಮತ್ತು ರಮೀಜ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹರೇ ಲಾಲ್ ಯಾದವ್ ಅವರ ಅಮಾನತನ್ನು 'ದುರದೃಷ್ಟಕರ' ಎಂದು ಕರೆದಿರುವ ಅವರು, '2024ರ ಲೋಕಸಭಾ ಚುನಾವಣೆಯಲ್ಲಿ ತಾವು ಬಿಜೆಪಿ ಅಭ್ಯರ್ಥಿ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಸರಣ್ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಡೀ ಜಿಲ್ಲಾ ಘಟಕವು ಮೇಲ್ನೋಟಕ್ಕೆ ಆರ್‌ಜೆಡಿಯಲ್ಲಿದ್ದುಕೊಂಡು ನಮ್ಮ ವಿರೋಧಿಗಳಿಗಾಗಿ ಕೆಲಸ ಮಾಡಿತ್ತು. ಚುನಾವಣೆಗಳ ವೇಳೆ ನಮ್ಮವರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸರಣ್ ಜಿಲ್ಲೆಯಲ್ಲಿ ಆರ್‌ಜೆಡಿಯ ಪ್ರತಿಯೊಬ್ಬ ಶಾಸಕ ಮತ್ತು ಪದಾಧಿಕಾರಿ ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡುವವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಹಿನ್ನಡೆ ಅನುಭವಿಸಿದಾಗಿನಿಂದ ರೋಹಿಣಿ ಆಚಾರ್ಯ, ಪಕ್ಷದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
'ನಾನು ಪಕ್ಷದಲ್ಲೇ ಮುಂದುವರಿದಿದ್ದೇನೆ. ಸಂಜಯ್ ಯಾದವ್ ಮತ್ತು ಅವರ ಗುಂಪಿನ ವಿರುದ್ಧ ಮಾತನಾಡಿದರೆ ಕ್ರಮ ಜರುಗಿಸುವುದಾದರೇ ನನ್ನ ವಿರುದ್ಧವೂ ಕ್ರಮ ಕೈಗೊಳ್ಳಲಿ' ಎಂದು ಆಚಾರ್ಯ ಹೇಳಿದ್ದಾರೆ.
'ನಾನು ಲಾಲು ಜೀ ಅವರ ಪುತ್ರಿ. ತಪ್ಪುಗಳ ಮುಂದೆ ನಾನು ಎಂದಿಗೂ ಶರಣಾಗುವುದಿಲ್ಲ. ಸಂಜಯ್ ಯಾದವ್, ಸುನಿಲ್ ಕುಮಾರ್ ಸಿಂಗ್ ಮತ್ತು ರಮೀಜ್ ವಿರುದ್ಧ ನಾನು ಧ್ವನಿ ಎತ್ತುತ್ತಲೇ ಇರುತ್ತೇನೆ. ನನ್ನನ್ನು ಬೆಂಬಲಿಸುವವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅವರು ನನ್ನನ್ನು ಬೆಂಬಲಿಸುತ್ತಲೇ ಇರುತ್ತಾರೆ' ಎಂದಿದ್ದಾರೆ.

