ರಾಂಚಿ : ಜಾರ್ಖಂಡ್‌ನ ಲೋಹರ್ದಗಾದ ಹಾಸ್ಟೆಲ್ ಒಂದರಲ್ಲಿ 4 ವಿದ್ಯಾರ್ಥಿನಿಯರಿಗೆ ಹಾವು ಕಚ್ಚಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ರೋಚೊ ಮಹುವಾಟೋಲಿಯಲ್ಲಿರುವ ಸಂವಾಸಿರ ಹೈಯರ್ ಸೆಕೆಂಡರಿ ವಸತಿಯ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಏಳು ಜನರು ಮಲಗಿದ್ದ ವಿದ್ಯಾರ್ಥಿನಿಯರ ಕೋಣೆಗೆ ವಿಷಕಾರಿ ಹಾವು ಪ್ರವೇಶಿಸಿ, ನಿದ್ದೆಯಲ್ಲಿದ್ದ 4 ವಿದ್ಯಾರ್ಥಿನಿಯರಿಗೆ ಅದು ಕಚ್ಚಿದೆ. ಈ ಘಟನೆಯಲ್ಲಿ 14 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿ ಅನ್ನು ಅಲೋಡಿ ನವಟೋಲಿಯ ನಿವಾಸಿ ವರ್ಷ ಒರಾನ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

