ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಅಂತ್ಯಕ್ಕೆ ಮಧ್ಯಂತರ ಒಪ್ಪಂದ ಏರ್ಪಟ್ಟಿದ್ದರಿಂದ ತೈಲ ಬೆಲೆಗಳಲ್ಲಿ ಕುಸಿತ ಕಂಡುಬಂದಿತ್ತು. ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರ ಆರಂಭವಾಗಿದ್ದರಿಂದ ವಾಣಿಜ್ಯ ಹಡಗುಗಳ ಸಂಚಾರ ಸುಗಮಗೊಂಡಿತ್ತು. ಆದರೆ, ಈಗ ಮತ್ತೆ ಉಭಯ ದೇಶಗಳು ಪರಸ್ಪರ ದಾಳಿ ನಡೆಸುತ್ತಿರುವುದು ತೈಲ ಬೆಲೆ ಮತ್ತೆ ಏರಿಕೆಯಾಗಲಿದೆಯೇ ಎಂಬ ಆತಂಕ ಮೂಡಿಸಿದೆ.
ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಮೇಲೆ ಅಮೆರಿಕ ಮತ್ತೆ ದಾಳಿ ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ, ಇರಾನ್ ಸಹ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕ ನೆಲೆಗಳ ಮೇಲೆ ಡ್ರೋನ್ ಮತ್ತು ರಾಕೆಟ್ ದಾಳಿ ಆರಂಭಿಸಿದೆ. ಯುದ್ಧ ನಿಂತೇಹೋಯಿತು ಎನ್ನುವಷ್ಟರಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿರುವುದು ಜಾಗತಿಕವಾಗಿ ಮತ್ತೆ ತೈಲ ಬಿಕ್ಕಟ್ಟಿನ ಸೂಚನೆ ನೀಡಿದೆ.
ಯುದ್ಧ ಪೂರ್ವ ಹಂತಕ್ಕೆ ಕುಸಿದಿದ್ದ ಕಚ್ಚಾ ತೈಲ ದರ
ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಂತರ ಒಪ್ಪಂದ ಏರ್ಪಟ್ಟು ಉಭಯ ದೇಶಗಳು ಎಲ್ಲ ವಲಯಗಳಲ್ಲೂ ಯುದ್ಧ ಸ್ಥಗಿತಕ್ಕೆ ಒಪ್ಪಿದ್ದವು. ಒಪ್ಪಂದದ ಅನ್ವಯ 60 ದಿನಗಳ ಕಾಲ ಮಾತುಕತೆ ಮೂಲಕ ಶಾಶ್ವತವಾಗಿ ಯುದ್ಧ ಅಂತ್ಯಕ್ಕೆ ನಿರ್ಣಯಿಸಲಾಗಿತ್ತು. ಈ ಅವಧಿಯಲ್ಲಿ ಹೊರ್ಮುಜ್ ಜಲಸಂಧಿ ತೆರೆದಿದ್ದರಿಂದ ವಾಣಿಜ್ಯ ಹಡಗುಗಳ ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತೈಲ ಪೂರೈಕೆ ಸರಪಳಿ ಸಹ ಸಹಜ ಸ್ಥಿತಿಗೆ ಬಂದಿದ್ದರಿಂದ ಕಚ್ಚಾ ತೈಲ ಬೆಲೆಯೂ ಗಮನಾರ್ಹ ಪ್ರಮಾಣದಲ್ಲಿ ಇಳಿದಿತ್ತು. ಯುದ್ಧ ಉತ್ತುಂಗದಲ್ಲಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ120 ಡಾಲರ್‌ವರೆಗೆ ತಲುಪಿದ್ದ ಬ್ಯಾರೆಲ್ ಕಚ್ಚಾತೈಲ ಬೆಲೆ ಮಧ್ಯಂತರ ಒಪ್ಪಂದದ ನಂತರ ಯುದ್ಧ ಪೂರ್ವ ಹಂತ 72 ಡಾಲರ್ ಆಸುಪಾಸಿಗೆ ಬಂದಿತ್ತು. ಬುಧವಾರ ಅಮೆರಿಕ, ಇರಾನ್ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ದರ ಶೇ 1.04ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರೆಲ್‌ಗೆ 78.83 ಡಾಲರ್‌ಗೆ ಏರಿದೆ.
ಇರಾನ್ ಜೊತೆಗಿನ ಮಧ್ಯಂತರ ಒಪ್ಪಂದ ಮುಗಿದ ಅಧ್ಯಾಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಯುದ್ಧ ಹೀಗೆ ಮುಂದುವರಿದರೆ ಮತ್ತೆ ಕಚ್ಚಾ ತೈಲ ಬೆಲೆ 100 ಡಾಲರ್ ದಾಟುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.
ಫೆಬ್ರುವರಿಯಿಂದ ನಡೆಯುತ್ತಿರುವ ಯುದ್ಧವು ಈಗಾಗಲೇ ತೈಲ ಸೇರಿದಂತೆ ಜಾಗತಿಕ ಪೂರೈಕೆ ಸರಪಳಿಯನ್ನು ಇನ್ನಿಲ್ಲದಂತೆ ಬಾಧಿಸಿದೆ. ಈಗ ಚೇತರಿಕೆ ಅವಧಿಯಲ್ಲಿ ಮತ್ತೆ ಯುದ್ಧ ಆರಂಭವಾದರೆ ಜಗತ್ತಿನ ಐದನೇ ಒಂದರಷ್ಟು ತೈಲ ಪೂರೈಕೆಯ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಗೆ ತಡೆಯಾಗುತ್ತದೆ. ಇದು ಮತ್ತೆ ಜಾಗತಿಕ ತೈಲ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಗಲ್ಫ್ ದೇಶಗಳಿಂದ ಬರುವ ತೈಲ ಟ್ಯಾಂಕರ್‌ಗಳಿಗೆ ತಡೆ, ಟ್ಯಾಂಕರ್‌ಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುತ್ತದೆ. ರಷ್ಯಾ ಬಳಿಕ ಭಾರತವು ಗಲ್ಫ್‌ನಿಂದಲೇ ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಹೊರ್ಮುಜ್ ಜಲಸಂಧಿಯಲ್ಲಿನ ಯಾವುದೇ ಅಡೆತಡೆಯು ತೈಲ ಬೆಲೆ ದಿಢೀರ್ ಏರಿಕೆಗೆ ಕಾರಣವಾಗುತ್ತದೆ.
ದೇಶೀಯ ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಪರಿಣಾಮ
ಜಾಗತಿಕ ತೈಲ ಪೂರೈಕೆ ಸರಪಳಿಯಲ್ಲಿ ಅಡೆತಡೆ ಉಂಟಾದರೆ ಸಹಜವಾಗಿಯೇ ಕಚ್ಚಾ ತೈಲ ಬೆಲೆ ಏರಿಕೆಯಾಗುವುದರಿಂದ ದೇಶದಲ್ಲಿ ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನೂ ಹೆಚ್ಚಿಸಬೇಕಾಗುತ್ತದೆ. ಮೇ ತಿಂಗಳಿನಲ್ಲಿ ಕಚ್ಚಾ ತೈಲ ದರ 100 ಡಾಲರ್ ಗಡಿ ದಾಟಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೂರು ಬಾರಿ ಏರಿಕೆ ಮಾಡಲಾಗಿತ್ತು. ಹೀಗಾಗಿ, ತಲಾ ₹7.50 ಏರಿಕೆ ಕಂಡುಬಂದಿತ್ತು. ವಾಣಿಜ್ಯ ಬಳಕೆಯ ಸಿಲಿಂಡರ್ 19 ಕೆ.ಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹1000 ಏರಿಕೆ ಮಾಡಲಾಗಿತ್ತು. ಇತ್ತೀಚೆಗೆ ₹183 ಇಳಿಸಲಾಗಿದೆ.
ಕೇಂದ್ರದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿರುವ ಪ್ರಕಾರ, ಎರಡು ತಿಂಗಳಿಗಾಗುವಷ್ಟು ತೈಲ ದಾಸ್ತಾನನ್ನು ಇಟ್ಟುಕೊಂಡಿರುತ್ತೇವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದರೂ ದೆಶೀಯವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೂಡಲೇ ಇಳಿಸಲು ಸಾಧ್ಯವಿಲ್ಲ. ಇದೇ ಬೆಲೆ ಮುಂದುವರಿದರೆ ಭವಿಷ್ಯದಲ್ಲಿ ಇಳಿಕೆ ಮಾಡಬಹುದು ಎಂದಿದ್ದರು. ಹಾಗಾಗಿ, ಈಗ ಕಚ್ಚಾ ತೈಲ ಬೆಲೆ ಇಳಿದಿದ್ದರೂ ಅದರ ಲಾಭ ಇನ್ನೂ ಜನರಿಗೆ ಸಿಕ್ಕಿಲ್ಲ. ಅದಕ್ಕೂ ಮುನ್ನವೇ ಮತ್ತೆ ಯುದ್ಧ ಆರಂಭವಾಗಿ ಕಚ್ಚಾ ತೈಲ ಬೆಲೆ ಮತ್ತೆ ಏರಿದರೆ ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯಬಹುದೆಂಬ ಜನರ ಆಶಯಕ್ಕೆ ಹೊಡೆತ ಬೀಳಲಿದೆ.
ಸಾಂಪ್ರದಾಯಿಕವಾಗಿ ಅಧಿಕ ಪ್ರಮಾಣದ ತೈಲ ಸರಬರಾಜಿನ ಮಾರ್ಗವಾದ ಹೊರ್ಮುಜ್ ಜಲಸಂಧಿ ಮುಚ್ಚಿದರೆ ಭಾರತ ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದಿಗೆ ಪ್ರಯತ್ನಿಸುತ್ತದೆ. ಅದ್ದರಿಂದ ತೈಲ ವೆಚ್ಚ ಹೆಚ್ಚಾಗಲಿದೆ. ರಷ್ಯಾವು ಕಳೆದ ಕೆಲ ತಿಂಗಳಿನಿಂದ ಭಾರತಕ್ಕೆ ತೈಲ ಪೂರೈಸುವ ಪ್ರಮುಖ ದೇಶವಾಗಿದೆ. ಈ ಅಲ್ಲಿಯೂ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ದಾಳಿ ನಡೆಸುತ್ತಿದೆ. ರಫ್ತು ಕೆಂದ್ರ ಸದ್ಯ ಯಾವುದೇ ಅಪಾಯ ಇಲ್ಲವಾದರೂ ಭವಿಷ್ಯದಲ್ಲಿ ಏನಾಗಬಹುದೋ ಎಂಬ ಆತಂಕ ಇದೆ.

