ಕಾಸರಗೋಡು: ಬೇಡಡ್ಕ ಪೆÇಲೀಸ್ ಠಾಣೆ ವ್ಯಾಪ್ತಿಯ ಬೇಡಡ್ಕ ಉನ್ನತಿಯಲ್ಲಿ ಇಲಿವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ 16ರ ಹರೆಯದ ಬಾಲಕನನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಅಸೌಖ್ಯಪೀಡಿತನಾಗಿದ್ದ ಬಾಲಕನನ್ನು ಬೇಡಡ್ಕ ತಾಲೂಕು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸುವ ಮಧ್ಯೆ ಇಲಿವಿಷ ಸೇವಿಸಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ, ಉನ್ನತ ಚಿಕಿತ್ಸೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಡಡ್ಕದ ತೋರೋತ್ ನಿವಾಸಿ ಯುವತಿ ಅನಶ್ವರ(19)ಎಂಬಾಕೆ ಎರಡು ದಿವಸಗಳ ಹಿಂದೆಯಷ್ಟೆ ಇಲಿ ವಿಷ ಸೇವಿಸಿ ಆತ್ಮಹತ್ಯೆ ಗೈದಿದ್ದಳು. ಪ್ಲಸ್‍ಟು ಮುಗಿಸಿ ಮುಂದಿನ ಶಿಕ್ಷಣಕ್ಕೆ ಸಿದ್ಧತೆ ನಡೆಯುತ್ತಿರುವ ಮಧ್ಯೆ ಆತ್ಮಹತ್ಯೆಗೀಡಾದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೇಡಡ್ಕ ಸನಿಹದ ತೋರೋತ್ ನಿವಾಸಿ ಹಾಗೂ ಒಂದು ಮಗುವಿನ ತಾಯಿ 32ರ ಹರೆಯದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿ, ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುವ ಕೆಲಸವನ್ನೂ ನಡೆಸುತ್ತಿದ್ದಾರೆ.

