ನವದೆಹಲಿ: ಮೇದಾಂತ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ತಮ್ಮ ಪತ್ನಿ ಗೀತಾಂಜಲಿ ಆಂಗ್ಮೊ ಅವರೊಂದಿಗೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರರಕ್ಕೆ ಭೇಟಿ ನೀಡಿದ್ದಾರೆ.
ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಂಗ್ಚೂಕ್, 'ಗಾಂಧೀಜಿ ಅವರ ಶಾಂತಿ ಮಾರ್ಗವು ಒಂದು ಶತಮಾನದ ನಂತರವೂ ಪ್ರಸ್ತುತವಾಗಿದೆ' ಎಂದಿದ್ದಾರೆ.
'ಈ ಚಳವಳಿಯನ್ನು(ವಿದ್ಯಾರ್ಥಿ ಪ್ರತಿಭಟನೆ) ಅತ್ಯಂತ ಶಾಂತಿಯುತವಾಗಿ ಮುನ್ನಡೆಸಿದ ಎಲ್ಲರಿಗೂ ಅಭಿನಂದನೆಗಳು. ನಮ್ಮ ತೋಳ್ಬಲದಿಂದಾಗಲಿ, ಲಾಠಿ ಅಥವಾ ಕಲ್ಲುಗಳಿಂದಾಗಲಿ ಈ ಹೋರಾಟಕ್ಕೆ ಜಯ ಸಿಕ್ಕಿಲ್ಲ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಯಿಂದ ನಾವು ಗೆದ್ದಿದ್ದೇವೆ' ಎಂದು ಹೇಳಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಘೋಷಿಸಿ ವಾಂಗ್ಚೂಕ್ ಅವರು 26 ದಿನಗಳವರೆಗೆ ಉಪವಾಸ ಕುಳಿತಿದ್ದರು.
ಶನಿವಾರ(ಜು. 25) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವ ಮೂಲಕ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕೊನೆಗೊಂಡಿದೆ.
ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವಾಂಗ್ಚೂಕ್ ಅವರು ಸೋಮವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

