ನವದೆಹಲಿ: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಇಂದು ಅಂತ್ಯಗೊಂಡಿದೆ.
ಜೆನ್-ಝೀಗಳನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಬಳಸಿದ ಅಸ್ತ್ರಗಳಿವು..
ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆದ ಜೆನ್-ಝೀ ಪ್ರತಿಭಟನೆಯನ್ನು ನಿಯಂತ್ರಿಸಲು ದೆಹಲಿ ಭದ್ರತಾ ಸಿಬ್ಬಂದಿ ಬಳಸಿದ ಅಸ್ತ್ರಗಳು ಮತ್ತು ಘಟನೆಯ ಸೂಕ್ಷ್ಮ ವಿವರಗಳು ಇಲ್ಲಿವೆ.
ಜೆನ್-ಝೀ ಪ್ರತಿಭಟನೆ ಏಕೆ ನಡೆಯಿತು?
ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪೀಡಿತ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಗಳಿಗಾಗಿ ಈ ಹೋರಾಟ ನಡೆಯಿತು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಬಳಸಿದ ಅಸ್ತ್ರಗಳೇನು?
ಭದ್ರತಾ ಸಿಬ್ಬಂದಿ ಬ್ಯಾರಿಕೇಡ್‌ಗಳು, ಲಾಠಿ, ಅಶ್ರುವಾಯು ಶೆಲ್‌ಗಳು, ಜಲಫಿರಂಗಿ, ವಜ್ರ ವಾಹನಗಳು ಮತ್ತು ಇಂಟರ್ನೆಟ್ ಸಂಪರ್ಕ ಸ್ಥಗಿತದಂತಹ ಕ್ರಮಗಳನ್ನು ಬಳಸಿದರು.
ಸರ್ಕಾರದ ಕಡೆಯಿಂದ ಬಂದ ಪ್ರತಿಕ್ರಿಯೆಯೇನು?
ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಇತರ ಬೇಡಿಕೆಗಳನ್ನು ಒಪ್ಪಿಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತು.
ಪ್ರತಿಭಟನೆಯಲ್ಲಿ ಯಾರ್ಯಾರು ಭಾಗವಹಿಸಿದ್ದರು?
ಸೊನಮ್ ವಾಂಗ್ಚೂಕ್ ಬೆಂಬಲದೊಂದಿಗೆ ಆರಂಭವಾದ ಈ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಪಾಲ್ಗೊಂಡಿದ್ದರು.
ಪೆಲೆಟ್ ಗನ್ ಬಳಕೆಯ ಆರೋಪವೇನು?
ಪೊಲೀಸರು ಪೆಲೆಟ್ ಗನ್‌ಗಳನ್ನು ಬಳಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ, ಆದರೆ ಪೊಲೀಸರು ಇದನ್ನು ನಿರಾಕರಿಸಿ ಅಂತಿಮ ಹಂತದಲ್ಲಿ ರಬ್ಬರ್ ಬುಲೆಟ್‌ಗಳನ್ನು ಮಾತ್ರ ಬಳಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನೀಟ್ ಸೇರಿದಂತೆ ದೇಶದಲ್ಲಿ ವರದಿಯಾಗಿರುವ ವಿವಿಧ ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪೋಷಕರಿಗೆ ₹ 1 ಕೋಟಿ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿತ್ತು.
ಪ್ರಧಾನ್ ಅವರು ಇಂದು ರಾಜೀನಾಮೆ ನೀಡಿದ್ದಾರೆ. ನಮ್ಮ ಉಳಿದ ಬೇಡಿಕೆಗಳನ್ನೂ ಸರ್ಕಾರ ಒಪ್ಪಿಕೊಂಡಿದೆ ಎನ್ನುವ ಮೂಲಕ ಹೋರಾಟವನ್ನು ಕೊನೆಗೊಳಿಸುತ್ತಿರುವುದಾಗಿ ಸಿಜೆಪಿ ವಕ್ತಾರರು ಹೇಳಿಕೆ ನೀಡಿದ್ದಾರೆ.
ಜೂನ್ 20ರಂದು ಆರಂಭವಾದ ಪ್ರತಿಭಟನೆಗೆ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಬೆಂಬಲ ಸೂಚಿಸಿದ್ದರು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ್ದಕ್ಕೆ ಬೇಸರಗೊಂಡ ಅವರು, ಜೂನ್ 28ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದರು. ಅಲ್ಲಿಂದಾಚೆಗೆ, ಹೋರಾಟಕ್ಕೆ ಹೊಸ ಉತ್ಸಾಹ ಬಂದಿತ್ತು.
ಸಂಸತ್ತನ ಮುಂಗಾರು ಅಧಿವೇಶನದ ದಿನವೇ (ಜುಲೈ 20ರಂದು) 'ಸಂಸತ್ ಚಲೊ' ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಸಿಜೆಪಿ ನೀಡಿದ್ದ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೀಗಾಗಿ, ಈ ಪ್ರತಿಭಟನೆಯು ಸರ್ಕಾರದ ವಿರುದ್ಧದ 'ಜೆನ್-ಝೀ ಹೋರಾಟ'ವಾಗಿ ಬದಲಾಗಿತ್ತು. ಸಮೂಹವನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಹರಸಾಹಸ ಮಾಡಿದ್ದವು.
ಆ ವೇಳೆ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಯಾಗಿತ್ತು. ನೂರಾರು ವಿದ್ಯಾರ್ಥಿಗಳು ಗಾಯಗೊಂಡು, 80ಕ್ಕೂ ಹೆಚ್ಚು ಪೊಲೀಸರಿಗೆ ಪೆಟ್ಟಾಗಿದೆ ಎಂದು ವರದಿಯಾಗಿತ್ತು.
ವಿದ್ಯಾರ್ಥಿ ಹೋರಾಟಕ್ಕೆ ಮಣಿದು ಕೊನೆಗೂ ರಾಜೀನಾಮೆ ನೀಡಿದ ಪ್ರಧಾನ್ಸಮಯ ವ್ಯರ್ಥ ಮಾಡಬೇಡಿ: ದೆಹಲಿ ಪೊಲೀಸ್ ವಿರುದ್ಧ ತುರ್ತು ವಿಚಾರಣೆಗಿಲ್ಲ ಅನುಮತಿ
ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದ್ದು, ಜಲಫಿರಂಗಿ, ಅಶ್ರುವಾಯು ಸಿಡಿಸಿದ್ದನ್ನು ಖಂಡಿಸಿ, ವಿರೋಧ ಪಕ್ಷಗಳೂ ಪ್ರತಿಭಟನೆಗೆ ಧುಮುಕಿದ್ದವು. ಅಲ್ಲಿಂದಾಚೆಗೆ, ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಜುಲೈ 21ರಂದು ಧರಣಿ ಕುಳಿತಿದ್ದರು. ಪ್ರಿಯಾಂಕಾ ಗಾಂಧಿ, ಕರ್ನಾಟಕ, ಕೇರಳ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ವಿ.ಡಿ. ಸತೀಶನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಷ್ ಯಾದವ್ ಅವರೂ ಧರಣಿಯಲ್ಲಿ ಪಾಲ್ಗೊಂಡಿದ್ದರು. ರಾಹುಲ್ ಸೇರಿದಂತೆ ಹಲವರನ್ನು ಬಲವಂತವಾಗಿ ವಶಕ್ಕೆ ಪಡೆಯಲಾಗಿತ್ತು.
ಅಂದಹಾಗೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಯಾವೆಲ್ಲ ಅಸ್ತ್ರ, ತಂತ್ರಗಳನ್ನು ಬಳಸಿದರು ಎಂಬುದರ ಮಾಹಿತಿ ಇಲ್ಲಿದೆ.
ಬ್ಯಾರಿಕೇಡ್: ಕಾಕ್ರೋಚ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮುಂದೆ ಬರದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ನಿಷೇಧಾಜ್ಞೆ ಜಾರಿಗೊಳಿಸದಿದ್ದರೂ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ದೆಹಲಿಯ ಹಲವು ಪ್ರದೇಶಗಳಲ್ಲಿ ಓಡಾಟ ನಿರ್ಬಂಧಿಸಲಾಗಿತ್ತು. ರಾಜೀವ್ ಚೌಕ್, ಮಂಡಿ ಹೌಸ್ ಸೇರಿದಂತೆ 18 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು.
ಲಾಠಿ: ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಂತೆ ಅವರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಲಾಠಿ ಬೀಸಿದ್ದರು. ಆದರೆ, ಹಲವರ ಸಮವಸ್ತ್ರಗಳ ಮೇಲೆ ಹೆಸರೇ ಇರಲಿಲ್ಲ. ಲಾಠಿ ಹಿಡಿದಿದ್ದವರಲ್ಲಿ ಕೆಲವರು ಗಡ್ಡ ಬಿಟ್ಟಿದ್ದರು. ಗೂಂಡಾಗಳನ್ನು ಬಳಸಿ ಪ್ರತಿಭಟನಾಕಾರರ ಮೇಲೆ ಬಲ ಪ್ರಯೋಗ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಲಾಠಿಗಳಲ್ಲಿ ಚೂಪಾದ ಮೊಳೆಗಳಿದ್ದವು, ಅದರಿಂದ ಹಲವರಿಗೆ ತೀವ್ರ ಪೆಟ್ಟಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಅಶ್ರುವಾಯು: ಲಾಠಿ ಚಾರ್ಜ್‌ನಿಂದ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ವಿಫಲವಾದ ನಂತರ ಅಶ್ರುವಾಯು ಶೆಲ್‌ಗಳನ್ನು ಬಳಸಲಾಗಿತ್ತು. ಅವುಗಳು ಆಸುಪಾಸಿನಲ್ಲಿ ಬೀಳುತ್ತಿದ್ದಂತೆ ಹಲವರು ಅತ್ತಿತ್ತ ಓಡಿದರೆ, ಕೆಲವು ವಿದ್ಯಾರ್ಥಿಗಳು ಅಶ್ರುವಾಯು ಶೆಲ್‌ಗಳನ್ನು ಪೊಲೀಸರತ್ತಲೇ ಎಸೆದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇಂಟರ್ನೆಟ್ ಸ್ಥಗಿತ: ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಣ ಘರ್ಷಣೆ ತೀವ್ರಗೊಂಡ ಕಾರಣ, ಜಂತರ್ ಮಂತರ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.
ಬಂಧನ/ವಶ: ಕಾನೂನು - ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಹಲವರನ್ನು ಬಂಧಿಸುವ ಅಥವಾ ವಶಕ್ಕೆ ಪಡೆಯುವ ಕೆಲಸ ಮಾಡಿದ್ದರು. ಹಲವರ ವಿರುದ್ಧ ಪ್ರಕರಣಗಳೂ ದಾಖಲಾಗಿವೆ. 'ಸಂಸತ್ ಚಲೊ' ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಜುಲೈ 21ರಂದು ವರದಿಯಾಗಿತ್ತು.
ಜಲಫಿರಂಗಿ: ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಯನ್ನೂ ಭದ್ರತಾ ಸಿಬ್ಬಂದಿ ಬಳಸಿದ್ದರು. ಆದರೆ, ಕೆಲವು ವಿದ್ಯಾರ್ಥಿಗಳು ವೇಗವಾಗಿ ಚಿಮ್ಮುತ್ತಿದ್ದ ನೀರಿಗೆ ಎದ್ದೆಯೊಡ್ಡಿ ನೃತ್ಯ ಮಾಡುವ ಮೂಲಕ, ಪೊಲೀಸರ ಸವಾಲಿಗೆ ಪ್ರತಿಸವಾಲು ಹಾಕಿದ್ದರು.
ವಜ್ರ ವಾಹನ: ಗಲಭೆ ನಿಯಂತ್ರಣ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳಿವು. ಜನಸಮೂಹವನ್ನು ಚದುರಿಸಲು ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ಸಿಸಿಟಿವಿ ಕ್ಯಾಮೆರಾ ಸೇರಿದಂತೆ, ಅಶ್ರುವಾಯು ಶೆಲ್‌ಗಳು, ಡ್ರೋನ್ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಇದರಲ್ಲಿವೆ.
ಪೆಲೆಟ್ ಗನ್ ಬಳಕೆ ಆರೋಪ
ತಮ್ಮ ಯಾವುದೇ ತಂತ್ರವೂ ಫಲಕೊಡದಿದ್ದಾಗ ಪೊಲೀಸರು, ಪೆಲೆಟ್ ಗನ್ ಬಳಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪೆಲೆಟ್ ಗನ್ ಪ್ರಯೋಗದಿಂದ ಗಂಭೀರವಾಗಿ ಗಾಯಗೊಂಡಿರುವುದಾಗಿ ಹಲವರು ದೂರಿದ್ದಾರೆ. ಅನೇಕರಿಗೆ ಕಣ್ಣು, ಕೈ-ಕಾಲು. ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿದೆ. ಆದಾಗ್ಯೂ, ಪೆಲೆಟ್ ಗನ್ ಬಳಸಿಲ್ಲ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಅಶ್ರುವಾಯು ಮತ್ತು ಲಾಠಿಚಾರ್ಜ್ ನಂತರ ಅಂತಿಮ ಅಸ್ತ್ರವಾಗಿ ರಬ್ಬರ್ ಬುಲೆಟ್‌ಗಳನ್ನು ಮಾತ್ರ ಬಳಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಯೊಬ್ಬರನ್ನು ಮಾಧ್ಯಮದವರೆದುರು ಕರೆದುಕೊಂಡು ಬಂದಿದ್ದ ಎಂದು ರಾಹುಲ್ ಗಾಂಧಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪೆಲೆಟ್ ಗನ್‌ನಿಂದ ಗಾಯಗೊಂಡ ವಿದ್ಯಾರ್ಥಿಯನ್ನು ಮಾಧ್ಯಮಗಳ ಮುಂದೆ ಕರೆ ತಂದ ರಾಹುಲ್ದೆಹಲಿ | ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ; ಗಾಯಗೊಂಡವರು ಹೇಳಿದ್ದೇನು?
ಎಲೆಕ್ಟ್ರಿಕ್ ಬ್ಯಾಟನ್: ಹೆಚ್ಚು ಅಪಾಯವಲ್ಲದ ಎಲೆಕ್ಟ್ರಿಕ್ ಬ್ಯಾಟನ್‌ಗಳನ್ನು ಮಹಿಳಾ ಪ್ರತಿಭಟನಾಕಾರರ ಮೇಲೆ ಬಳಸಲಾಗಿದೆ ಎಂಬ ಆರೋಪಗಳಿವೆ.

