ಮುಂಬೈ: ಹಲವು ತಿಂಗಳು ಆತಂಕದಲ್ಲಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಹೆತ್ತವರು, ಶನಿವಾರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ನಿರಾಳರಾದರು. ತಮ್ಮ ಮಗ ಬೇಗನೇ ಮನೆಗೆ ವಾಪಾಸಾಗಬೇಕು ಎಂದು ಬಯಸಿರುವ ಅವರು, 'ಮಗನ ಪ್ರಾಮಾಣಿಕತೆ ಗೆದ್ದಿದೆ' ಎಂದು ವಿದ್ಯಾರ್ಥಿ ಹೋರಾಟದ ಗೆಲುವನ್ನು ಸಂಭ್ರಮಿಸಿದರು.
'ಬೇಗನೇ ಮನೆಗೆ ಬಾ ಎಂದು ಅವನಿಗೆ ಹೇಳುತ್ತೇನೆ. ಒಂದು ವೇಳೆ ಬರದಿದ್ದರೆ, ನಾವೇ ಹೋಗಿ ಕರೆದುಕೊಂಡು ಬರುತ್ತೇವೆ. ಅವನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತೇನೆ ಮತ್ತು ಅವನಿಗೆ ಆರತಿ ಎತ್ತುತ್ತೇನೆ. ಕಳೆದ ಬಾರಿ ಅವನು ಇಲ್ಲಿದ್ದಾಗ, ನಾನೇನು ದೊಡ್ಡ ವ್ಯಕ್ತಿಯಲ್ಲ ಎಂದು ಹೇಳಿ ಆರತಿ ಎತ್ತಲು ಬಿಟ್ಟಿರಲಿಲ್ಲ' ಎಂದು ಅಭಿಜಿತ್ ಅವರ ತಾಯಿ ಅನಿತಾ ದೀಪ್ಕೆ ಅವರು ತಮ್ಮ ಕಣ್ಣೀರನ್ನು ತಡೆದುಕೊಂಡು ಹೇಳಿದರು.
ಸರಿಯಾಗಿ ನಿದ್ದೆಯೂ ಬರುತ್ತಿರಲಿಲ್ಲ...
'ನಾನು ತುಂಬಾ ಖುಷಿಯಲ್ಲಿದ್ದೇನೆ. ಯುವಜನರ ಬೆಂಬಲ ಅವನಿಗೆ ನೆರವಾಯಿತು ಮತ್ತು ಆತ ದೊಡ್ಡ ಗೆಲುವು ಸಾಧಿಸಿದ' ಎಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಅವರ ಹೇಳಿದರು.
ತಮ್ಮ ಮಗ ಭಾರತಕ್ಕೆ ಹಿಂತಿರುಗಿ ಶಿಕ್ಷಣ ಸಚಿವರ ರಾಜೀನಾಮೆ ಕೇಳಿ ಪ್ರತಿಭಟನೆ ಪ್ರಾರಂಭಿಸಿದಂದಿನಿಂದ ತಾನು ಚಿಂತಿತನಾಗಿದ್ದೆ ಎಂದು ಹೇಳಿದ ಅವರು, ಜಂತರ್ ಮಂತರ್‌ನಲ್ಲಿ ಹೋರಾಟ ಆರಂಭವಾದ ನಂತರ ನಿದ್ದೆ ಕೂಡಾ ಬರುತ್ತಿರಲಿಲ್ಲ ಎಂದರು.
'ನನಗೆ ಯಾವಾಗಲೂ ಅವನ ಬಗ್ಗೆಯೆ ಚಿಂತೆಯಾಗಿತ್ತು. ರಾತ್ರಿಯೆಲ್ಲಾ ನಿದ್ದೆ ಬರುತ್ತಿರಲಿಲ್ಲ. ಏನಾದರೂ ತೊಂದರೆ ಆಗಿವಬಹುದೆ ಎಂದು, ಪ್ರತಿದಿನ ಬೆಳಿಗ್ಗೆ ನನ್ನ ಫೋನ್ ನೋಡುವುದು ಕೂಡಾ ಭಯ ಆಗುತ್ತಿತ್ತು. ನಾನು ತಕ್ಷಣ ಅವನ ಸ್ನೇಹಿತರಿಗೆ ಕರೆ ಮಾಡಿ ಅವನು ಸುರಕ್ಷಿತವಾಗಿ ಇದ್ದಾನೆಯೆ' ಎಂದು ಕೇಳುತ್ತಿದ್ದೆ ಎಂದರು.
ತಾಯಿ ನನ್ನ ಬಗ್ಗೆ ಚಿಂತಿತರಾಗಿದ್ದಾರೆ ಎಂದು ತಿಳಿದಾಗೆಲ್ಲಾ ಅವನು ಭಾವುಕನಾಗುತ್ತಾನೆ. ನಾವೆಲ್ಲಾ ಅವನ ಜೊತೆಗೆ ಇದ್ದು ಆತನನ್ನು ನೋಡಿಕೊಳ್ಳುತ್ತಿದ್ದೇವೆ ಎಂದು ಆತನ ಸ್ನೇಹಿತರು ನನಗೆ ಸಮಾಧಾನ ಮಾಡುತ್ತಿದ್ದರು. ಚಿಂತೆ ಮತ್ತು ನೋವಿನಿಂದ ನಾನು ಅಳುತ್ತಿದ್ದೆ. ಆದರೆ, ಇಂದು ನನ್ನ ಕಣ್ಣಿಂದ ಆನಂದಭಾಷ್ಪ ಸುರಿಯುತ್ತಿದೆ ಎಂದರು.
ಯುವಜನರ ಗೆಲುವು
ಪ್ರಧಾನ್ ಅವರ ರಾಜೀನಾಮೆಯನ್ನು 'ಯುವಜನರ ಗೆಲುವು' ಎಂದು ಬಣ್ಣಿಸಿದ ಅನಿತಾ ಅವರು, 'ಸಾವಿರಾರು ಯುವಜನರು ದಣಿವರಿಯದೆ ಹೋರಾಟದ ಗೆಲುವಿಗೆ ಕೆಲಸ ಮಾಡಿದ್ದಾರೆೆ ಎಂದರು.
ತಮ್ಮ ಮಗ ರಾಜಕೀಯ ಪಕ್ಷ ಪ್ರಾರಂಭಿಸುವುದಿಲ್ಲ ಎಂದು ತಾನು ಭಾವಿಸುತ್ತೇನೆ ಎಂದು ಹೇಳಿದ ಅವರು, ಸಾಮಾಜಿಕ ವಲಯದಲ್ಲಿ ಕೆಲಸ ಮಾಡುತ್ತಾನೆ ಎಂದು ಎಂದು ತಿಳಿಸಿದರು.
ಅಭಿಜಿತ್ ಅವರ ತಂದರೆ ಭಗವಾನ್‌ರಾವ್ ದೀಪ್ಕೆ ಅವರು ಮಾತನಾಡಿ, ಯಾವುದೆ ರಾಜಕೀಯ ಹಿನ್ನೆಲೆ ಇಲ್ಲದ ತಮ್ಮ ಮಗ ಸಿಜೆಪಿ ಪ್ರಾರಂಭಿಸಿದಂದಿನಿಂದ ತಮ್ಮ ಕುಟುಂಬ ನಿರಂತರ ಭಯದಿಂದ ಬದುಕುತ್ತಿದೆ ಎಂದು ಹೇಳಿದರು. 'ಅವನು ರಾಜಕೀಯಕ್ಕೆ ಧುಮುಕಿದ ನಂತರ ನಾವು ಚಿಂತಿತರಾದೆವು. ಅವನು ನಮ್ಮ ಇಚ್ಛೆ ವಿರುದ್ಧವಾಗಿ ನಡೆದುಕೊಂಡ. ನಮ್ಮ ಕುಟುಂಬದಲ್ಲಿ ಯಾರಿಗೂ ರಾಜಕೀಯ ಹಿನ್ನೆಲೆ ಇರಲಿಲ್ಲ' ಎಂದರು.
'ಜೂನ್ ವೇಳೆ ಅಮೆರಿಕದಿಂದ ಹೊರಟಿದ್ದ ಆತನಿಗೆ ಭಾರತಕ್ಕೆ ಹಿಂತಿರುಗಬೇಡ ಎಂದು ಕೇಳಿಕೊಂಡಿದ್ದೆವು. ಆತನನ್ನು ಬಂಧಿಸುತ್ತಾರೆ ಎಂಬ ಭಯವಿತ್ತು. ಆರಂಭಿಕ ದಿನಗಳಲ್ಲಿ ನಾವು ತುಂಬಾ ಹೆದರಿದ್ದೆವು. ನಮ್ಮ ಮೇಲೆ ದೈಹಿಕವಾಗಿ ದಾಳಿ ಆಗುವ ಆತಂಕವಿತ್ತು. ಹಾಗಾಗಿ ನಾವು ಮನೆ ಬಿಟ್ಟು ಕೊಂಕಣದಲ್ಲೆ ಇದ್ದೆವು' ಎಂದು ಭಗ್ವಂತ್‌ರಾವ್ ಹೇಳಿದರು.
'ಈ ಭಯವೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಎಷ್ಟು ದುರ್ಬಲರಾಗಿದ್ದೆವು ಎಂದರೆ, ನಮಗೆ ಸರಿಯಾಗಿ ನಿಲ್ಲಲು ಕೂಡಾ ಆಗುತ್ತಿರಲಿಲ್ಲ. ದಿನಕ್ಕೆ ಒಂದು ರೊಟ್ಟಿ ತಿನ್ನುತ್ತಿದ್ದೆವು. ತಿನ್ನಲು ಆಗದೆ, ನಿದ್ದೆ ಮಾಡಲು ಆಗದೆ ಕಷ್ಟಪಟ್ಟಿದ್ದವೆ. ಹೋರಾಟದ ಸಮಯದಲ್ಲಿ ಅವನ ಮೇಲೆ ಎರಡು ಬಾರಿ ದಾಳಿಯಾಗಿತ್ತು' ಎಂದು ಅವರು ನೆನಪಿಸಿಕೊಂಡರು.
'ಜುಲೈ 20ರಂದು ಪೊಲೀಸ್ ಅಧಿಕಾರಿಯೊಬ್ಬ ಅಭಿಜಿತ್ ಅವರ ಮೈಕ್ ಹಿಡಿದು ಎಳೆದಿದ್ದು ನೋಡಿ, 'ಬಾರ್ಡರ್' ಚಿತ್ರದ ಯುದ್ಧದ ದೃಶ್ಯ ನೆನಪಾಯಿತು. ಒಂದು ವೇಳೆ ನನ್ನ ಅಭಿಜಿತ್ ಏನಾದರೂ ಪೊಲೀಸರ ಕೈಗೆ ಸಿಕ್ಕಿಬಿಟ್ಟರೆ ಅವನು ಉಳಿಯುವುದಿಲ್ಲ ಎಂದು ನನಗೆ ಅನಿಸಿತು. ದೇವರ ದಯೆಯಿಂದ ಅದೇನೂ ಆಗಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆತ ಮನೆಗೆ ಬಂದು ನಮ್ಮೊಂದಿಗೆ ಇರಬೇಕು ಎಂದು ಅನಿಸುತ್ತಿದೆ' ಎಂದು ಅವರು ತಿಳಿಸಿದರು.
ಪ್ರಧಾನ್ ದೊಡ್ಡ ಮನಸು ಮಾಡಿದ್ದಾರೆ...
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತು ಮಾತನಾಡಿದ ಭಗ್ವಂತ್‌ರಾವ್ ಅವರು, 'ವಿದ್ಯಾರ್ಥಿಗಳು ತಮ್ಮ ಶಿಕ್ಷಣದತ್ತ ಗಮನಹರಿಸುವಂತೆ ಕೇಳುತ್ತಾ ರಾಜೀನಾಮೆ ನೀಡಿ, ಕೇಂದ್ರ ಸಚಿವರು ದೊಡ್ಡ ಮನಸ್ಸು ಮಾಡಿದ್ದಾರೆ ಎಂದರು.
'ಇದನ್ನು ಯಾರೂ ಸೋಲು ಅಥವಾ ಗೆಲುವು ಎಂದು ನೋಡಬಾರದು. ಅಂತಹ ದೊಡ್ಡ ಹುದ್ದೆಯನ್ನು ತೊರೆಯಲು ದೊಡ್ಡ ಮನಸ್ಸು ಇರಬೇಕು. ಅವರು ರಾಜೀನಾಮೆ ನೀಡುತ್ತಾ ಅವರು ವಿದ್ಯಾರ್ಥಿಗಳ ಹಿತಾಸಕ್ತಿಗಳ ಬಗ್ಗೆ ಯೋಚಿಸಿದ್ದಾರೆ' ಎಂದು ಹೇಳಿದರು.
ತನ್ನ ಮಗನನ್ನು ಸುಶಿಕ್ಷಿತ ಎಂದು ಬಣ್ಣಿಸಿದ ಭಗ್ವಂತ್‌ರಾವ್ ಅವರು, ಈ ಹೋರಾಟ ಪ್ರಾರಂಭಿಸುವುದಕ್ಕೂ ಮುಂಚೆ ಎಲ್ಲವನ್ನೂ ಯೋಚಿಸಿಯೆ ಮಾಡಿರುತ್ತಾನೆ ಎಂದು ಹೇಳಿದ ಅವರು, ಅಭಿಜಿತ್ ಅವರ ಮುಂದಿನ ನಡೆ ಏನು ಎಂದು ನನಗೆ ಖಚಿತವಿಲ್ಲ ಎಂದರು.
'ಅವನು ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಕೆಲಸ ಮಾಡಿದ್ದ. ರಾಜಕೀಯವನ್ನು ತೀರಾ ಹತ್ತಿರದಿಂದ ನೋಡಿದ್ದ. ವೈಯಕ್ತಿವಾಗಿ ನನಗೆ ರಾಜಕೀಯ ಇಷ್ಟವಿಲ್ಲ, ಆದ್ದರಿಂದ ಆತನ ಮುಂದೆ ಏನು ಮಾಡುತ್ತಾನೆ ಎಂದು ಗೊತ್ತಿಲ್ಲ. ಆದರೆ, ನಾನು ಆತನ ಜೊತೆ ಇರುತ್ತೇನೆ' ಎಂದು ಭಗ್ವಂತ್‌ರಾವ್ ಹೇಳಿದರು.

