ಗುವಾಹಟಿ: ಅಸ್ಸಾಂ ಸರ್ಕಾರವು ತನ್ನ ಬಜೆಟ್‌ನಲ್ಲಿ ಹೊಸ ನಿಯಮವನ್ನು ತಂದಿದೆ. ಇದರ ಪ್ರಕಾರ, ಬಹುಪತ್ನಿತ್ವ ಅನುಸರಿಸುವ ವ್ಯಕ್ತಿಗಳು ಇನ್ಮುಂದೆ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ. ಅಷ್ಟೇ ಅಲ್ಲದೆ, ಅಂತವರನ್ನು ಕೆಲಸದಿಂದಲೇ ವಜಾ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ರಾಜ್ಯ ಹಣಕಾಸು ಸಚಿವ ಜಯಂತ ಮಲ್ಲಾ ಬರುವಾ ಅವರು, ಸರ್ಕಾರದ ಕಲ್ಯಾಣ ಯೋಜನೆಗಳು ಕೇವಲ ಅರ್ಹರನ್ನು ತಲುಪುವುದಷ್ಟೇ ಅಲ್ಲದೆ, ಸಮಾಜದಲ್ಲಿ ಸಮಾನತೆ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಬಹುಪತ್ನಿತ್ವವನ್ನು ಆಚರಿಸುವ ಯಾವುದೇ ವ್ಯಕ್ತಿ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹನಾಗಿರುವುದಿಲ್ಲ ಎಂದು ಬರುವಾ ಘೋಷಿಸಿದ್ದಾರೆ.
ಇದಕ್ಕಾಗಿ ಅಸ್ಸಾಂ ನಾಗರಿಕ ಸೇವಾ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1964ಕ್ಕೆ ತಿದ್ದುಪಡಿ ತರಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ, ಯಾವುದೇ ಸರ್ಕಾರಿ ನೌಕರ ಬಹುಪತ್ನಿತ್ವ ಅನುಸರಿಸುತ್ತಿರುವುದು ಕಂಡುಬಂದಲ್ಲಿ, ಕಾನೂನಿನ ಪ್ರಕಾರ ಆತನನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂದುವರಿದು, ಯಾವುದೇ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಅಪರಾಧಿ ಎಂದು ಸಾಬೀತಾದ ವ್ಯಕ್ತಿಗೂ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಸಿಗದಂತೆ ಮಾಡಲು ನಾನು ಪ್ರಸ್ತಾಪಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ನಿಯಮಿತ ಬಜೆಟ್ ಲಭ್ಯವಿಲ್ಲದ ಕಾರಣ, ಸರ್ಕಾರವು ಆಗಸ್ಟ್‌ನಿಂದ ಕಲ್ಯಾಣ ಯೋಜನೆಗಳ ಪುನರಾರಂಭಿಸಲಿದೆ ಎಂದು ತಿಳಿಸಿದ್ದಾರೆ.
ಬರುವಾ ಅವರು 2026-27ರ ಹಣಕಾಸು ವರ್ಷಕ್ಕಾಗಿ ಒಟ್ಟು ₹2,85,084 ಕೋಟಿ ಮೊತ್ತದ ಬಜೆಟ್ ಮಂಡಿಸಿದರು. ಇದರಲ್ಲಿ ಸಣ್ಣ ಚಹಾ ಬೆಳೆಗಾರರ ತೆರಿಗೆ ವಿನಾಯಿತಿ ಮಿತಿಯನ್ನು ನಾಲ್ಕು ಪಟ್ಟು ಹೆಚ್ಚಿಸಲು ಮತ್ತು ಕೊಳವೆ ಮೂಲಕ ಸರಬರಾಜಾಗುವ ನೈಸರ್ಗಿಕ ಅನಿಲದ (ಪಿಎನ್‌ಜಿ) ಮೇಲಿನ ವ್ಯಾಟ್ ಅನ್ನು ಶೇ 10ರಷ್ಟು ಕಡಿತಗೊಳಿಸಲು ಪ್ರಸ್ತಾಪಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಜಾರಿಗೆ ತಂದ ಎಲ್ಲಾ ಪ್ರಮುಖ ಯೋಜನೆಗಳನ್ನು ಮುಂದುವರಿಸುವುದಾಗಿಯೂ ಘೋಷಿಸಿದ ಅವರು, ಬಜೆಟ್ ಕೊರತೆಯನ್ನು ₹419 ಕೋಟಿಗೆ ಇಳಿಸುವ ಗುರಿಯನ್ನು ಹೊಂದಿರುವುದಾಗಿಯೂ ಘೋಷಿಸಿದ್ದಾರೆ.

